Supreme Court 
ಸುದ್ದಿಗಳು

ಜನಪ್ರತಿನಿಧಿಗಳ ವಾಕ್ ಸ್ವಾತಂತ್ರ್ಯದ ಮೇಲೆ ಹೆಚ್ಚಿನ ನಿರ್ಬಂಧ ಹೇರಲಾಗದು: ಸುಪ್ರೀಂ ಕೋರ್ಟ್

ಸಾರ್ವಜನಿಕ ಹುದ್ದೆಯಲ್ಲಿ ಇರುವವರ ವಾಕ್ ಸ್ವಾತಂತ್ರ್ಯದ ವ್ಯಾಪ್ತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.

Bar & Bench

ಸಚಿವರು, ಸಂಸದರು ಹಾಗೂ ಶಾಸಕರು ದೇಶದ ಎಲ್ಲ ನಾಗರಿಕರಿಗೆ ಸರಿಸಮನಾಗಿ ಸಂವಿಧಾನದ 19(1)(a) ಅಡಿ ನೀಡಲಾಗಿರುವ ವಾಕ್‌ ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ತೀರ್ಪು ನೀಡಿದೆ. ಆ ಮೂಲಕ ಜನಪ್ರತಿನಿಧಿಗಳು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಚಲಾಯಿಸುವ ವಾಕ್ ಸ್ವಾತಂತ್ರ್ಯದ ಹಕ್ಕಿನ  ಮೇಲೆ ಹೆಚ್ಚುವರಿಯಾಗಿ ನಿರ್ಬಂಧ  ಹೇರುವಂತಿಲ್ಲ ಎಂದು ಹೇಳಿದೆ [ಕೌಶಲ್ ಕಿಶೋರ್ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಜನಪ್ರತಿನಿಧಿಗಳ ಮೇಲಿನ ವಾಕ್‌ ಸ್ವಾತಂತ್ರ್ಯದ ನಿರ್ಬಂಧವು ಸಂವಿಧಾನದ 19 (2) ವಿಧಿಯಲ್ಲಿ ವಿಧಿಸಲಾಗಿರುವ ಎಲ್ಲ ನಾಗರಿಕರಿಗೆ ಅನ್ವಯವಾಗುವಂತಹ ಸಮಗ್ರವಾದ ನಿರ್ಬಂಧಗಳನ್ನು ಮೀರಿ ಹೋಗುವಂತಿಲ್ಲ ಎಂದು  ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಎ ಎಸ್ ಬೋಪಣ್ಣ, ಬಿ ಆರ್ ಗವಾಯಿ, ವಿ ರಾಮಸುಬ್ರಮಣಿಯನ್ ಹಾಗೂ ಬಿ ವಿ ನಾಗರತ್ನ ಅವರಿದ್ದ ಸಾಂವಿಧಾನಿಕ ಪೀಠ ತಿಳಿಸಿದೆ.

"ಸಂವಿಧಾನದ 19(2) ವಿಧಿಯಡಿಯಲ್ಲಿ ಕಂಡುಬಾರದ ಹೆಚ್ಚುವರಿ ನಿರ್ಬಂಧಗಳನ್ನು ವಿಧಿ 19(1)(ಎ)  ಮೇಲೆ ವಿಧಿಸುವಂತಿಲ್ಲ... ಸ್ವಾತಂತ್ರ್ಯವನ್ನು ನಿರ್ಬಂಧಿಸಲು 19(2) ವಿಧಿಯಡಿಯಲ್ಲಿ ಉಲ್ಲೇಖಿಸಲಾದ ಆಧಾರಗಳು ಸಮಗ್ರವಾಗಿವೆ. 19(2) ವಿಧಿಯಲ್ಲಿ ಕಂಡುಬಾರದ ಹೆಚ್ಚುವರಿ ನಿರ್ಬಂಧಗಳನ್ನು 19(1)(ಎ) ಅಡಿಯಲ್ಲಿ ಚಲಾಯಿಸುವ ಹಕ್ಕಿನ ಮೇಲೆ ವಿಧಿಸಲಾಗದು" ಎಂದು ನ್ಯಾಯಾಲಯ ಹೇಳಿದೆ.

ಸಾರ್ವಜನಿಕ ಹುದ್ದೆಯಲ್ಲಿ ಇರುವವರ ವಾಕ್ ಸ್ವಾತಂತ್ರ್ಯದ ವ್ಯಾಪ್ತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ. ನಾಗರಿಕರ ಹಿತ, ಅವರ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಸಲುವಾಗಿ ಸಾರ್ವಜನಿಕ ಹುದ್ದೆಯಲ್ಲಿ ಇರುವವರ ಹಕ್ಕಿನ ಮೇಲೆ ಹೆಚ್ಚಿನ ನಿರ್ಬಂಧ  ಹೇರಬಹುದೇ ಎಂದು ಅರ್ಜಿಗಳಲ್ಲಿ ಪ್ರಶ್ನಿಸಲಾಗಿತ್ತು.

ಸರ್ಕಾರ ಅಥವಾ ಅದರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸಚಿವರು ನೀಡಿದ ಹೇಳಿಕೆಯನ್ನು ಸರ್ಕಾರಕ್ಕೆ ಆರೋಪ ಮಾಡಲು ಸಾಧ್ಯವಿಲ್ಲ ಎಂದೂ ಸಹ ನ್ಯಾಯಾಲಯ ತೀರ್ಪಿನಲ್ಲಿ ಹೇಳಿತು.

"ಪ್ರಜೆಯ ಹಕ್ಕುಗಳಿಗೆ ಹೊಂದಿಕೆಯಾಗದಂತೆ ಸಚಿವರು ಹೇಳಿಕೆ ನೀಡಿದ ಮಾತ್ರಕ್ಕೆ ಅದು ಸಾಂವಿಧಾನಿಕ ಲೋಪವಾಗದು. ಆದರೆ, ಒಂದೊಮ್ಮೆ ಅದು ಸಾರ್ವಜನಿಕ ಹುದ್ದೆಯಲ್ಲಿರುವವರಿಂದ ಕರ್ತವ್ಯಚ್ಯುತಿಗೆ ಅಥವಾ ಅಪರಾಧ ಘಟಿಸುವಿಕೆಗೆ ಕಾರಣವಾದರೆ ಆಗ ಅದು ಸಾಂವಿಧಾನಿಕ ಲೋಪವಾಗುತ್ತದೆ" ಎಂದು ಸಾಂವಿಧಾನಿಕ ಪೀಠ ತೀರ್ಪು ನೀಡಿದೆ.

ಮುಖ್ಯವಾಗಿ, ವಾಕ್ ಸ್ವಾತಂತ್ರ್ಯದ ಹಕ್ಕು ಮತ್ತು ನಿರ್ಬಂಧಗಳನ್ನು ಪ್ರಭುತ್ವದ ವಿರುದ್ಧ ಮಾತ್ರವಲ್ಲದೆ ಪ್ರಭುತ್ವದಾಚೆಗಿನ ಶಕ್ತಿಗಳ ವಿರುದ್ಧವೂ ಚಲಾಯಿಸಬಹುದು ಎಂದು ಅದು ವಿವರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಮತದ ಆದರೆ ಪ್ರತ್ಯೇಕ ತೀರ್ಪು ನೀಡಿರುವ ನ್ಯಾ. ನಾಗರತ್ನ ಅವರು ಸಾರ್ವಜನಿಕ ಕಾರ್ಯಕ್ರಮಗಳ ವಾಕ್‌ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಮೇಲೆ ನ್ಯಾಯಾಲಯ ಯಾವುದೇ ಹೆಚ್ಚುವರಿ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕ ಆಡಳಿತ, ಸೇವೆಯಲ್ಲಿರುವವರು ತಮ್ಮ ಸಹ ನಾಗರಿಕರನ್ನು ಹೀಗಳೆಯುವಂತಹ ಮಾತುಗಳನ್ನಾಡದಂತೆ ನಿಗ್ರಹಿಸುವ ಕಾನೂನು ರೂಪಿಸುವುದು ಸಂಸತ್ತಿನ ವಿವೇಕಕ್ಕೆ ಬಿಟ್ಟ ವಿಚಾರ ಎಂದಿದ್ದಾರೆ.

ಆಡಳಿತದ ಬಗ್ಗೆ ಉತ್ತಮ ತಿಳಿವಳಿಕೆ ಮೂಡಿಸಲು ನಾಗರಿಕರಿಗೆ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಒದಗಿಸಲಾಗಿದ್ದರೂ ಅದನ್ನು ದ್ವೇಷ ಭಾಷಣವಾಗಿ ಪರಿವರ್ತಿಸುವಂತಿಲ್ಲ ಎಂದೂ ಅವರು ಈ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.