ಜನರಿಗೆ ವಾಕ್‌ ಸ್ವಾತಂತ್ರ್ಯದ ಹಕ್ಕಿದೆ, ದ್ವೇಷ ಭಾಷೆಯದ್ದಲ್ಲ: ನ್ಯಾಯಾಲಯದಲ್ಲಿ ಕಂಗನಾ ವಿರುದ್ಧ ದೂರು

ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷದ ವಾತಾವರಣ ಸೃಷ್ಟಿಸುವ ದುರದ್ದೇಶಪೂರಿತ ಟ್ವೀಟ್‌ಗಳನ್ನು ತಮ್ಮ ಖಾತೆಯಿಂದ ಆಗಾಗ್ಗೆ ಕಂಗನಾ ಪೋಸ್ಟ್‌ ಮಾಡುತ್ತಾರೆ ಎಂದು ದೂರಲಾಗಿದೆ.
Kangana Ranaut, Complaint, Andheri Magistrate Court
Kangana Ranaut, Complaint, Andheri Magistrate Court
Published on

ವಿವಾದಾತ್ಮಕ ಟ್ವೀಟ್‌ಗಳಿಂದ ಕಾನೂನಿನ ಕುಣಿಕೆಗೆ ಸಿಲುಕುತ್ತಿರುವ ಬಾಲಿವುಡ್‌ ನಟಿ ಕಂಗನಾ ರಾನೌತ್‌ ವಿರುದ್ಧ ಮುಂಬೈನ ಅಂಧೇರಿಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಕ್ರಿಮಿನಲ್‌ ದೂರು ದಾಖಲಾಗಿದೆ.

ಕಂಗನಾ ಅವರು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 121, 121A (ಸರ್ಕಾರದ ವಿರುದ್ಧ ಸಮರದ ಯತ್ನ), 124 (ರಾಷ್ಟ್ರದ್ರೋಹ), 153A, 153B, 195A, 298 ಮತ್ತು 505 ರ (ವಿಭಿನ್ನ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಹರಡುವುದು) ಅಡಿ ಅಪರಾಧ ಎಸಗಿದ್ದು, ಅವರ ವಿರುದ್ಧದ ಆರೋಪಗಳನ್ನು ಪರಿಗಣಿಸುವಂತೆ ವಕೀಲ ಅಲಿ ಖಾಸೀಫ್‌ ಖಾನ್‌ ದೇಶಮುಖ್‌ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

“ಪ್ರತಿಯೊಬ್ಬ ನಾಗರಿಕನಿಗೂ ವಾಕ್‌ ಸ್ವಾತಂತ್ರ್ಯವಿದೆ ಎಂಬುದು ಸಮಂಜಸವಾಗಿದೆ. ಆದರೆ ದ್ವೇಷ ಭಾಷೆಯ ಸ್ವಾತಂತ್ರ್ಯವಿಲ್ಲ” ಎಂದು ಅರ್ಜಿದಾರ ವಕೀಲ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರ, ಕಾರ್ಯಾಂಗದ ಭಾಗವಾದ ಮಂತ್ರಿಗಳು, ಮುಂಬೈ ಪೊಲೀಸರ ವಿರುದ್ಧ ತಮ್ಮ ಟ್ವಿಟರ್‌ ಖಾತೆಯಲ್ಲಿ ಕಂಗನಾ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷದ ವಾತಾವರಣ ಸೃಷ್ಟಿಸುವ ದುರದ್ದೇಶಪೂರಿತ ಟ್ವೀಟ್‌ಗಳನ್ನು ತಮ್ಮ ಖಾತೆಯಿಂದ ಆಗಾಗ್ಗೆ ಕಂಗನಾ ಪೋಸ್ಟ್‌ ಮಾಡುತ್ತಾರೆ ಎಂದು ದೇಶಮುಖ್‌ ಅವರು ದೂರಿದ್ದಾರೆ.

Also Read
ಕಂಗನಾ ವಿರುದ್ಧದ ಎಲ್ಲಾ ಆರೋಪಗಳು ಪರಿಗಣನೆಗೆ ಯೋಗ್ಯ ಎಂದ ಮುಂಬೈ ನ್ಯಾಯಾಲಯ: ಎಫ್‌ಐಆರ್‌ ದಾಖಲಿಸಿಕೊಳ್ಳಲು ಆದೇಶ

“ನ್ಯಾಯಾಂಗವನ್ನು ಪಪ್ಪು ಸೇನಾ ಎಂದು ವ್ಯಾಖ್ಯಾನಿಸುವ ಮೂಲಕ ಕಂಗನಾ ಅವರು ನ್ಯಾಯಾಂಗ ನಿಂದನೆ ಎಸಗಿದ್ದಾರೆ” ಎಂದೂ ದೇಶಮುಖ್‌ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಅಂಧೇರಿ ಪೊಲೀಸರು ಆರೋಪಗಳನ್ನು ಪರಿಗಣಿಸದೇ ಇದ್ದುದರಿಂಧ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಜುಲೈನಲ್ಲಿ ದೇಶಮುಖ್‌ ಅವರು ಕಂಗನಾ ಮತ್ತು ಅವರ ಸಹೋದರಿ ರಂಗೋಲಿ ಚಂಡೇಲ್‌ ವಿರುದ್ಧ “ಧಾರ್ಮಿಕತೆಯ ಆಧಾರದಲ್ಲಿ ವಿಭಿನ್ನ ಗುಂಪುಗಳ ನಡುವೆ ದುರುದ್ದೇಶಪೂರ್ವಕವಾಗಿ ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ” ಎಂದು ದೂರು ದಾಖಲಿಸಿದ್ದರು.

ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್‌ 29ರಂದು ನ್ಯಾಯಾಲಯದ ಆದೇಶ ಹೊರಡಿಸಲಿದೆ. ಬಾಂದ್ರಾದ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಮುಂದೆ ಇದೇ ತರಹದ ಮನವಿ ಸಲ್ಲಿಸಲಾಗಿದ್ದು, ಸಹೋದರರಿಯ ವಿರುದ್ಧ ದೂರು ದಾಖಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿತ್ತು. ಕೇಂದ್ರ ಸರ್ಕಾರದ ವಿರುದ್ಧ ರೈತರ ಹೋರಾಟವನ್ನು ಟೀಕಿಸಿ ಟ್ವೀಟ್‌ ಮಾಡಿದ್ದ ಕಂಗನಾ ವಿರುದ್ಧ ತುಮಕೂರಿನ ಕ್ಯಾತಸಂದ್ರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿರುವುದನ್ನೂ ನೆನೆಪಿಸಿಕೊಳ್ಳಬಹುದಾಗಿದೆ.

Kannada Bar & Bench
kannada.barandbench.com