Justice SB Shukre, Justice GA Sanap and Bombay High Court

 
ಸುದ್ದಿಗಳು

ದತ್ತು ಮಗು ತನ್ನದೇ ಜಾತಿಗೆ ಸೇರಿದೆ ಎಂದು ಹೇಳಲು ಒಂಟಿ ತಾಯಿ ಅರ್ಹಳು: ಬಾಂಬೆ ಹೈಕೋರ್ಟ್

ಜಾತಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಮಗುವಿಗೆ ತಾಯಿಯ ಜಾತಿ ಅನ್ವಯಿಸುವುದನ್ನು ನಿರಾಕರಿಸುವುದರಿಂದ ದತ್ತು ತೆಗೆದುಕೊಳ್ಳುವ ಉದ್ದೇಶ ವಿಫಲವಾಗುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ.

Bar & Bench

ತಾನು ದತ್ತು ಪಡೆದ ಮಗುವಿಗೆ ತನ್ನದೇ ಜಾತಿಯನ್ನು ಅನ್ವಯಿಸಲು ಒಂಟಿ ತಾಯಿ ಅರ್ಹಳು ಎಂದು ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದೆ [ಸೋನಲ್ ಪ್ರತಾಪ್‌ಸಿಂಗ್‌ ವಾಹನ್‌ವಾಲಾ ಮತ್ತು ಉಪ ಜಿಲ್ಲಾಧಿಕಾರಿ (ಅತಿಕ್ರಮಣ) ಇನ್ನಿತರರ ನಡುವಣ ಪ್ರಕರಣ].

ನ್ಯಾಯಾಲಯದ ಅಗತ್ಯ ಆದೇಶದ ಬಳಿಕ ಅರ್ಜಿದಾರರು ತನ್ನ ಮಗನನ್ನು ಅನಾಥಾಶ್ರಮದಿಂದ ದತ್ತು ಪಡೆದಿದ್ದಾರೆ ಎಂಬ ಪ್ರಮುಖ ಅಂಶವನ್ನು ಅರಿಯುವಲ್ಲಿ ಜಿಲ್ಲಾ ಜಾತಿ ಅಧಿಕಾರಿಗಳು ಸಂಪೂರ್ಣ ತಪ್ಪಿದ್ದಾರೆ. ಮಗನ ಜನ್ಮ ದಾಖಲೆಗಳು ಇದನ್ನೇ ಪ್ರತಿಬಿಂಬಿಸುತ್ತವೆ ಎಂದು ನ್ಯಾಯಮೂರ್ತಿಗಳಾದ ಸುನಿಲ್ ಬಿ ಶುಕ್ರೆ ಮತ್ತು ಜಿ ಎ ಸನಪ್ ಅವರಿದ್ದ ಪೀಠ ತಿಳಿಸಿತು. ಹೀಗಾಗಿ ಅರ್ಜಿದಾರರ ದತ್ತುಪುತ್ರನಿಗೆ ಎರಡು ವಾರಗಳಲ್ಲಿ ಜಾತಿ ಪ್ರಮಾಣ ಪತ್ರ ನೀಡುವಂತೆ ಅಪರ ಜಿಲ್ಲಾಧಿಕಾರಿಗೆ ನ್ಯಾಯಾಲಯ ಸೂಚಿಸಿದೆ.

ಜಾತಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಮಗುವಿಗೆ ತಾಯಿಯ ಜಾತಿ ಅನ್ವಯಿಸುವುದನ್ನು ನಿರಾಕರಿಸುವುದರಿಂದ ದತ್ತು ತೆಗೆದುಕೊಳ್ಳುವ ಉದ್ದೇಶ ವಿಫಲವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅರ್ಜಿದಾರೆ ತಮ್ಮ ಮಗನಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಅಪರ ಜಿಲ್ಲಾಧಿಕಾರಿ ಬಳಿ ಅರ್ಜಿ ಸಲ್ಲಿಸಿದ್ದರು. ಆದರೆ ತಂದೆಯ ಜಾತಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಉಪ ಜಿಲ್ಲಾಧಿಕಾರಿ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಜಿಲ್ಲಾ ಜಾತಿ ಪ್ರಮಾಣ ಪತ್ರ ಪರಿಶೀಲನಾ ಸಮಿತಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.