Justices A Muhammed Mustaque and Dr. Kauser Edappagath 
ಸುದ್ದಿಗಳು

ಲಿವ್- ಇನ್ ಸಂಬಂಧದಿಂದ ಹುಟ್ಟಿದ ಮಗುವನ್ನು ಮದುವೆಯಾದ ದಂಪತಿಗೆ ಜನಿಸಿದ ಮಗುವಿನಂತೆ ಪರಿಗಣಿಸಬೇಕು: ಕೇರಳ ಹೈಕೋರ್ಟ್

ಬಾಲಾಪರಾಧ ನ್ಯಾಯ ಕಾಯಿದೆಯ ಉದ್ದೇಶಕ್ಕಾಗಿ ಮಗುವಿನ ಜೈವಿಕ ತಂದೆಯನ್ನು ಅಂಗೀಕರಿಸುವ ಲಿವ್- ಇನ್ ಸಂಬಂಧದಲ್ಲಿರುವ ಮಹಿಳೆಯನ್ನು ವಿವಾಹಿತ ಮಹಿಳೆಯಾಗಿ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Bar & Bench

2015ರ ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯ ಅಡಿ ಮಗುವನ್ನು ದತ್ತು ಪಡೆಯಬೇಕಾದಾಗ ಲಿವ್‌- ಇನ್‌ ಸಂಬಂಧದಿಂದ ಜನಿಸಿದ ಮತ್ತು ತಂದೆ ಯಾರೆಂದು ತಿಳಿಸಿದ ಮಹಿಳೆಯ ಮಗುವನ್ನು ಮದುವೆಯಾದ ದಂಪತಿಗೆ ಜನಿಸಿದ ಮಗುವಿನಂತೆ ಪರಿಗಣಿಸಬೇಕು ಎಂದು ಕೇರಳ ಹೈಕೋರ್ಟ್‌ ತನ್ನ ಮಹತ್ವದ ತೀರ್ಪೊಂದರಲ್ಲಿ ತಿಳಿಸಿದೆ.

ಬಾಲಾಪರಾಧ ನ್ಯಾಯ ಕಾಯಿದೆಯ ಉದ್ದೇಶಕ್ಕಾಗಿ ಮಗುವಿನ ಜೈವಿಕ ತಂದೆಯನ್ನು ಗುರುತಿಸಿದ ಲಿವ್‌- ಇನ್‌ ಸಂಬಂಧದಲ್ಲಿರುವ ಮಹಿಳೆಯನ್ನು ಬಾಲಾಪರಾಧ ನ್ಯಾಯ ಕಾಯಿದೆ ಮತ್ತು 2017ರ ದತ್ತು ನಿಯಮಾವಳಿಗಳ ಪ್ರಕಾರ ವಿವಾಹಿತ ಮಹಿಳೆಯಂತೆ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಮುಹಮ್ಮದ್ ಮುಸ್ತಾಕ್ ಮತ್ತು ಡಾ. ಕೌಸರ್ ಎಡಪ್ಪಗತ್ ಅವರಿದ್ದ ಪೀಠ ವಿವರಿಸಿದೆ.

ಜೈವಿಕ ತಂದೆಯೊಂದಿಗೆ ತಾಯಿ ಯಾವುದೇ ರೀತಿಯ ಸಂಬಂಧವನ್ನು ಒಪ್ಪದಿದ್ದಾಗ ಮಾತ್ರ ಅಂತಹ ತಾಯಿಯನ್ನು ಬಾಲಾಪರಾಧ ನ್ಯಾಯ ಕಾಯಿದೆಯ ಉದ್ದೇಶಕ್ಕಾಗಿ ಅವಿವಾಹಿತ ತಾಯಿಯಾಗಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

"ದತ್ತು ನಿಯಮಾವಳಿ 7 (5) ರ ಪ್ರಕಾರ, ವಿವಾಹಿತ ದಂಪತಿಗೆ ಜನಿಸಿದ ಮಗುವನ್ನು ದತ್ತು ನೀಡುವಾಗ, ಇಬ್ಬರೂ ಪೋಷಕರು ದತ್ತು ಪತ್ರಕ್ಕೆ ಸಹಿ ಹಾಕಬೇಕಾಗುತ್ತದೆ. ಪೋಷಕರಲ್ಲಿ ಒಬ್ಬರು ಮಗುವನ್ನು ದತ್ತು ನೀಡುತ್ತಿದ್ದು ಅದರಲ್ಲಿ ಮತ್ತೊಬ್ಬ ಪೋಷಕರ ಎಲ್ಲಿದ್ದಾರೆ ಎಂಬುದು ತಿಳಿದಿಲ್ಲವಾದರೆ ಅಂತಹ ಮಗುವನ್ನು ಪರಿತ್ಯಕ್ತ ಮಗುವೆಂದು ಪರಿಗಣಿಸಬೇಕಾಗುತ್ತದೆ (ನಿಯಮಾವಳಿ 7 (6))… ಪ್ರಸ್ತುತ ಪ್ರಕರಣದಲ್ಲಿ ಅಂತಹ ಯಾವುದೇ ಪ್ರಕ್ರಿಯೆಯನ್ನು ಅನುಸರಿಸಿಲ್ಲ. ಬದಲಿಗೆ ಮದುವೆಯಾಗದ ತಾಯಿಗೆ ಮಾತ್ರ ಅನ್ವಯವಾಗುವ ವಿಧಾನ ಅನುಸರಿಸಲಾಗಿದೆ. ಮಗುವನ್ನು ವಿವಾಹಿತ ದಂಪತಿಗೆ ಜನಿಸಿದಂತೆ ಪರಿಗಣಿಸಬೇಕಾಗಿರುವುದರಿಂದ ಅದು ಕಾನೂನು ಬದ್ಧವಾಗಿ ಸಮರ್ಥನೀಯವಲ್ಲ” ಎಂದು ನ್ಯಾಯಾಲಯವು ತೀರ್ಪು ನೀಡಿದೆ.

ಲಿವ್‌ ಇನ್‌ ಸಂಬಂಧದಲ್ಲಿದ್ದ ಜೋಡಿಯೊಂದು ಪರಸ್ಪರ ಬೇರ್ಪಟ್ಟಾಗ ತಾಯಿ ಮಗುವನ್ನು ದತ್ತು ನೀಡಿದ್ದಳು. ಆದರೆ ನಂತರ ಮಗುವನ್ನು ಹಿಂಪಡೆಯಲು ಕೋರಿ ಜೋಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.

ಪ್ರಸ್ತುತ ಪ್ರಕರಣದಲ್ಲಿ ಮಗುವನ್ನು ದತ್ತು ನೀಡಲು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಅನುಸರಿಸಿದ ವಿಧಾನ ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಮದುವೆಯಾಗದ ತಾಯಿಗೆ ಮಾತ್ರ ಅನ್ವಯವಾಗುವ ವಿಧಾನವನ್ನು ಅನುಸರಿಸಲಾಗಿದೆ ಎಂದು ಅದು ಹೇಳಿದೆ. “ಅಂತಹ ಸ್ಥಾನಮಾನ ನಿರ್ಧರಿಸಲು ಸೂಕ್ತ ಪ್ರಾಧಿಕಾರವಲ್ಲದ ಕಾರಣ ವೈವಾಹಿಕ ಕಾನೂನು ಸ್ಥಿತಿ ಬಗ್ಗೆ ವಿಚಾರಣೆ ನಡೆಸುವುದು ಸಮಿತಿಯ ಕರ್ತವ್ಯವಲ್ಲ. ಬಾಲಾಪರಾಧ ನ್ಯಾಯ ಕಾಯಿದೆಯ ಪ್ರಾಯೋಗಿಕ ಉದ್ದೇಶಗಳಿಗಾಗಿ ಮಗುವು ದಂಪತಿಗೆ ಜನಿಸಿದ್ದು ಎಂದು ಗೊತ್ತಾದ ನಂತರ ಮದುವೆಯಾದ ದಂಪತಿಗೆ ಸೇರಿದ ಮಗುವಿನಂತೆ ಪರಿಗಣಿಸಿ ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ.