Passport with Jaipur Bench of Rajasthan High Court  
ಸುದ್ದಿಗಳು

ವ್ಯತಿರಿಕ್ತ ಪೊಲೀಸ್ ವರದಿ ಇದ್ದ ಮಾತ್ರಕ್ಕೆ ಪರಿಶೀಲಿಸದೆಯೇ ಪಾಸ್‌ಪೋರ್ಟ್‌ ನಿರಾಕರಿಸುವಂತಿಲ್ಲ: ರಾಜಸ್ಥಾನ ಹೈಕೋರ್ಟ್

ಪ್ರತಿಕೂಲ ಪೊಲೀಸ್ ಪರಿಶೀಲನಾ ವರದಿಗೆ ಪಾಸ್‌ಪೋರ್ಟ್‌ ಪ್ರಾಧಿಕಾರ ಅಂಟಿಕೂರಬೇಕಿಲ್ಲ ಎಂದು ನ್ಯಾಯಮೂರ್ತಿ ಅನೂಪ್ ಕುಮಾರ್ ಧಂಡ್ ಒತ್ತಿ ಹೇಳಿದರು.

Bar & Bench

ವ್ಯತಿರಿಕ್ತ ಪೊಲೀಸ್ ಪರಿಶೀಲನಾ ವರದಿಯು ಪಾಸ್‌ಪೋರ್ಟ್‌ ಪಡೆಯುವ ವ್ಯಕ್ತಿಯ ಕಾನೂನು ಬದ್ಧ ಹಕ್ಕನ್ನು ರದ್ದುಗೊಳಿಸದು ಎಂದು ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಸಾವಿತ್ರಿ ಶರ್ಮಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಪ್ರತಿಕೂಲ ಪೊಲೀಸ್ ಪರಿಶೀಲನಾ ವರದಿಗೆ ಪಾಸ್‌ಪೋರ್ಟ್ ಪ್ರಾಧಿಕಾರ ಅಂಟಿಕೂರಬೇಕಿಲ್ಲ ಎಂದು ನ್ಯಾಯಮೂರ್ತಿ ಅನೂಪ್ ಕುಮಾರ್ ಧಂಡ್ ಒತ್ತಿ ಹೇಳಿದರು.

"ಪ್ರತಿಕೂಲವಾದ ಪೊಲೀಸ್ ಪರಿಶೀಲನಾ ವರದಿ ನಾಗರಿಕನಿಗೆ ಪಾಸ್‌ಪೋರ್ಟ್ ಹೊಂದುವ ಕಾನೂನುಬದ್ಧ ಹಕ್ಕನ್ನು ರದ್ದುಗೊಳಿಸುವುದಿಲ್ಲ. ಪಾಸ್‌ಪೋರ್ಟ್ ನೀಡಲು ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಅದನ್ನು ನೀಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವುದಕ್ಕಾಗಿ ಪರಿಶೀಲನಾ ವರದಿಯಲ್ಲಿ ಆರೋಪಿತ ವ್ಯಕ್ತಿಯ ವಾಸ್ತವಾಂಶ/ ಅಪರಾಧದ ಪೂರ್ವಾಪರಗಳನ್ನು ಗಣನೆಗೆ ತೆಗೆದುಕೊಳ್ಳುವುದು ಪಾಸ್‌ಪೋರ್ಟ್ ಪ್ರಾಧಿಕಾರಕ್ಕೆ ಬಿಟ್ಟದ್ದು”ಎಂದು ಪೀಠ ಹೇಳಿದೆ.

ಪಾಸ್‌ಪೋರ್ಟ್ ನೀಡುವ ಮೊದಲು ವಿಚಾರಣೆ ಮಾಡಲು ಪಾಸ್‌ಪೋರ್ಟ್ ಪ್ರಾಧಿಕಾರಕ್ಕೆ ಪಾಸ್‌ಪೋರ್ಟ್ ಕಾಯಿದೆ, 1967ರ ಸೆಕ್ಷನ್‌ಗಳು ಅವಕಾಶ ನೀಡುವುದರಿಂದ ಪಾಸ್‌ಪೋರ್ಟ್‌ ಬಯಸುವ ವ್ಯಕ್ತಿಯ ಪೂರ್ವಾಪರಗಳಿಗೆ ಸಂಬಂಧಿಸಿದಂತೆ ಪೊಲೀಸ್ ಪರಿಶೀಲನಾ ವರದಿಯನ್ನು ಕೋರಬಹುದು ಎಂದು ನ್ಯಾಯಾಲಯ ವಿವರಿಸಿದೆ.

ಪಾಸ್‌ಪೋರ್ಟ್ ಪ್ರಾಧಿಕಾರದ ಇಂತಹ ವಿಚಾರಣೆಯ ಉದ್ದೇಶವು ಪ್ರತಿ ನಿರ್ದಿಷ್ಟ ಪ್ರಕರಣದ ಸಂದರ್ಭಗಳಲ್ಲಿ ಪಾಸ್‌ಪೋರ್ಟ್ ಅನ್ನು ನೀಡಬೇಕೆ ಅಥವಾ ನಿರಾಕರಿಸಬೇಕೆ ಎಂದು ನಿರ್ಧರಿಸಲು ಅನುವು ಮಾಡಿಕೊಡುತ್ತದೆ ಆದರೆ, ವಿಚಾರಣೆಯ ವರದಿಯನ್ನು ಗಮನದಲ್ಲಿಟ್ಟುಕೊಂಡು ಪಾಸ್‌ಪೋರ್ಟ್ ಪ್ರಾಧಿಕಾರವೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅದು ಹೇಳಿದೆ.

ಸ್ವೀಕರಿಸಿದ ತನಿಖಾ ವರದಿ ವ್ಯತಿರಿಕ್ತವಾಗಿದ್ದ ಮಾತ್ರಕ್ಕೆ ತನ್ನದೇ ನಿರ್ಧಾರ ತೆಗೆದುಕೊಳ್ಳುವುದರಿಂದ ಪಾಸ್‌ಪೋರ್ಟ್ ಪ್ರಾಧಿಕಾರ ದೂರ ಉಳಿಯುವಂತಿಲ್ಲ ಇಲ್ಲವೇ ವರದಿಯ ವಾಸ್ತವಾಂಶಗಳ ವಿವೇಚನೆ ಕುರಿತು ತನ್ನ ವಿವೇಚನೆ ಬಳಸದೆ ಪಾಸ್‌ಪೋರ್ಟ್‌ ನಿರಾಕರಿಸುವಂತಿಲ್ಲ ಎಂದ ನ್ಯಾಯಾಲಯ ನೇಪಾಳಿ ಎಂಬುದಾಗಿ ಸರ್ಕಾರ ಅನುಮಾನ ವ್ಯಕ್ತಪಡಿಸಿದ್ದ ಮಹಿಳೆಗೆ ಪರಿಹಾರ ನೀಡಿದೆ.

ಮಹಿಳೆ ಭಾರತೀಯ ಪ್ರಜೆಯಲ್ಲ ಎಂದು ಸಾಬೀತುಪಡಿಸಲು ಯಾವುದೇ ದಾಖಲೆಗಳಿಲ್ಲ ಮಹಿಳೆ 1990 ರಲ್ಲಿ ತಿಹಾರ್ ಜೈಲಿನಲ್ಲಿ ಜನಿಸಿದ್ದು ಆಕೆಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್‌ ಕೂಡ ನೀಡಲಾಗಿದೆ. ಹೀಗಾಗಿ, ಆಕೆ ಹುಟ್ಟಿನಿಂದಲೇ ಭಾರತೀಯ ಪ್ರಜೆ ಎಂದು ನ್ಯಾಯಾಲಯ ತೀರ್ಪು ನೀಡಿತು.

ಆಕೆಯ ತಂದೆ ಮತ್ತು ಪತಿ ಭಾರತದ ಖಾಯಂ ಪ್ರಜೆಗಳಾಗಿದ್ದಾಗ, ಫೋಟೋ ಒಂದನ್ನೇ ಆಧರಿಸಿ ಆಕೆಯ ರಾಷ್ಟ್ರೀಯತೆಯನ್ನು ಅನುಮಾನಿಸುವುದು ತರವಲ್ಲ. ಆಕೆ ಭಾರತೀಯ ಪ್ರಜೆಯಾಗಿರದೇ ಇದ್ದಿದ್ದರೆ 2012ರಲ್ಲಿ ಆಕೆಗೆ ಪಾಸ್‌ಪೋರ್ಟ್‌ ನೀಡುತ್ತಿರಲಿಲ್ಲ ಎಂದ ಪೀಠ , ಪಾಸ್‌ಪೋರ್ಟ್ ನವೀಕರಣಕ್ಕಾಗಿ ಮಹಿಳೆಯ ಅರ್ಜಿ ತಿರಸ್ಕರಿಸಿದ್ದ ನಿರ್ಧಾರವನ್ನು ರದ್ದುಗೊಳಿಸಿತು. ಎಂಟು ವಾರಗಳಲ್ಲಿ ಆಕೆಯ ಅರ್ಜಿ ಕುರಿತು ತೀರ್ಮಾನ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿತು.

ಆದರೆ ಏನಾದರೂ ವ್ಯತಿರಿಕ್ತ ಅಂಶಗಳು ಕಂಡುಬಂದರೆ ಅಧಿಕಾರಿಗಳು ಆಕೆಯ ವಿರುದ್ಧ ಕಾನೂನು ಪ್ರಕಾರ ಮುಂದುವರೆಯಬಹುದು ಎಂದು ಕೂಡ ನ್ಯಾಯಾಲಯ ಇದೇ ವೇಳೆ ತಿಳಿಸಿದೆ.