Bombay High Court, Hanuman Chalisa yantra 
ಸುದ್ದಿಗಳು

ಅಲೌಕಿಕ ಗುಣಲಕ್ಷಣ ಹೊಂದಿವೆ ಎಂದು ವಿವಿಧ ವಸ್ತುಗಳನ್ನು ಮಾರಾಟ ಮಾಡುವುದು ಕಾನೂನುಬಾಹಿರ: ಬಾಂಬೆ ಹೈಕೋರ್ಟ್‌

ಹನುಮಾನ್‌ ಚಾಲಿಸಾ ಯಂತ್ರಗಳನ್ನು ಟಿವಿಗಳಲ್ಲಿ ಪ್ರಚಾರ ಮಾಡಿ ಮಾರಾಟ ಮಾಡುವ ಜಾಹೀರಾತುಗಳಿಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿ ಆಧರಿಸಿ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ ಪೀಠವು ಆದೇಶ ಹೊರಡಿಸಿದೆ.

Bar & Bench

ಪವಾಡ ಅಥವಾ ಅಲೌಕಿಕ ಗುಣಲಕ್ಷಣ ಹೊಂದಿವೆ ಎಂದು ಯಾವುದೇ ವಸ್ತು, ಪರಿಕರಗಳನ್ನು ಮಾರಾಟ ಮಾಡುವುದು ಮತ್ತು ಅವುಗಳನ್ನು ಜಾಹೀರಾತಿನ ಮೂಲಕ ಪ್ರಚಾರ ಮಾಡುವುದು ಕಾನೂನುಬಾಹಿರ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ ಪೀಠವು ಬುಧವಾರ ಆದೇಶಿಸಿದೆ (ರಾಜೇಂದ್ರ ಅಂಭೋರೆ ವರ್ಸಸ್‌ ಭಾರತ ಸರ್ಕಾರ).

ಇಂಥ ನಿರ್ದಿಷ್ಟ ಜಾಹೀರಾತುಗಳನ್ನು ಪ್ರಸಾರ ಮಾಡುವ ಚಾನೆಲ್‌ಗಳನ್ನು ಮೌಢ್ಯ ಮತ್ತು ವಾಮಾಚಾರ ವಿರೋಧಿ ಕಾಯಿದೆ ಅಡಿ ಹೊಣೆಗಾರರನ್ನಾಗಿಸಲಾಗುವುದು ಎಂದಿರುವ ನ್ಯಾಯಾಲಯವು ಅಂಥ ಜಾಹೀರಾತು ಪ್ರಕಟಿಸಿದರೆ ದಂಡ ವಿಧಿಸಲಾಗುತ್ತದೆ ಎಂಬುದನ್ನು ಖಾತರಿಪಡಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.

ಹನುಮಾನ್‌ ಚಾಲಿಸಾ ಯಂತ್ರಗಳನ್ನು ಟಿವಿಗಳಲ್ಲಿ ಪ್ರಚಾರ ಮಾಡಿ ಮಾರಾಟ ಮಾಡುವ ಜಾಹೀರಾತುಗಳಿಗೆ ತಡೆ ನೀಡುವಂತೆ ಕೋರಿ ರಾಜೇಂದ್ರ ಅಂಭೋರೆ ಎಂಬವರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಟಿ ವಿ ನಾಲವಾಡೆ ಮತ್ತು ಎಂ ಜಿ ಸೆವ್ಲಿಕರ್‌ ಅವರಿದ್ದ ವಿಭಾಗೀಯ ಪೀಠವು ಆದೇಶ ಹೊರಡಿಸಿದೆ.

“ಯಂತ್ರ ಅಥವಾ ಇನ್ನಿತರ ವಸ್ತು, ಪರಿಕರಗಳಿಗೆ ಹನುಮಾನ್‌ ಅಥವಾ ಬಾಬಾ ಸೇರಿದಂತೆ ಇನ್ನಿತರೆ ದೇವರ ಹೆಸರುಗಳನ್ನು ತಗುಲಿ ಹಾಕಿ, ಈ ಪರಿಕರಗಳು ಪವಾಡ ಅಥವಾ ಅಲೌಕಿಕ ಗುಣಲಕ್ಷಣ ಹೊಂದಿದ್ದು, ಇವುಗಳನ್ನು ಹಾಕಿಕೊಳ್ಳುವುದರಿಂದ ಜನರು ಸಂತೋಷವಾಗಿರುತ್ತಾರೆ, ಉದ್ಯಮದಲ್ಲಿ ಯಶಸ್ಸು ಗಳಿಸುತ್ತಾರೆ, ವೃತ್ತಿಯಲ್ಲಿ ಅಪ್ರತಿಮ ಸಾಧನೆ ಮಾಡುತ್ತಾರೆ, ಶೈಕ್ಷಣಿಕವಾಗಿ ಸಾಧನೆ ಮಾಡುವುದರ ಜೊತೆಗೆ ರೋಗ-ರುಜಿನಗಳಿಂದ ಗುಣಮುಖರಾಗುತ್ತಾರೆ ಇತ್ಯಾದಿ ಎಂದು ಹೇಳಿ ಅವುಗಳ ಜಾಹೀರಾತು ಪ್ರಕಟಿಸಿ, ಮಾರಾಟ ಮಾಡುವುದು ಕಾನೂನುಬಾಹಿರ” ಎಂದು ಪೀಠ ಆದೇಶಿಸಿದೆ.

“ಅಂಥ ಪರಿಕರಗಳನ್ನು ಒಳಗೊಂಡ ಜಾಹೀರಾತು ಪ್ರಸಾರ ಮಾಡುವುದು ಕಾನೂನು ಬಾಹಿರ” ಎಂದು ನ್ಯಾಯಾಲಯ ಹೇಳಿದೆ. ಮಹಾರಾಷ್ಟ್ರ ನರಬಲಿ ಮತ್ತು ಇತರೆ ಅಮಾನವೀಯ, ದುಷ್ಟ, ಅಘೋರಿ ಆಚರಣೆಗಳ ಪ್ರತಿಬಂಧಕ ಮತ್ತು ನಿರ್ಮೂಲನೆ ಹಾಗೂ ಮೌಢ್ಯ ನಿಷೇಧ ಕಾಯಿದೆ-2013ರ ಅಡಿ ಪ್ರಕರಣವನ್ನು ನ್ಯಾಯಾಲಯವು ಇತ್ಯರ್ಥಪಡಿಸಿದೆ

ಇದಲ್ಲದೇ, ನಿಷೇಧಿತ ಕಾಯಿದೆಯ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ನ್ಯಾಯಾಲಯವು ಕೆಳಗಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.

  1. ನಿಷೇಧಿತ ಜಾಹೀರಾತು ನೀಡುವ ವ್ಯಕ್ತಿಗೆ ವಿರುದ್ಧವಾಗಿ ವರದಿ ಸಲ್ಲಿಸಿ ಕಾಯಿದೆಯ ಅನ್ವಯ ರಾಜ್ಯ ಸರ್ಕಾರ ಮತ್ತು ವಿಚಕ್ಷಣಾ ಅಧಿಕಾರಿಗಳು ಅಪರಾಧವನ್ನು ನೋಂದಣಿ ಮಾಡಬೇಕು.

  2. ವಿಭಿನ್ನ ಹೆಸರುಗಳ ಅಡಿ ನಿಷೇಧಿತ ಜಾಹೀರಾತು ಪ್ರಕಟಿಸುವುದನ್ನು ತಡೆಯಲು ಕೇಂದ್ರ ಸರ್ಕಾರಗಳು ನಿರ್ದಿಷ್ಟ ಕೋಶಗಳನ್ನು ಹೊಂದುವ ಮೂಲಕ ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ (ನಿಯಂತ್ರಣ) ಕಾಯಿದೆ-1995ರ ಅಡಿ ಅವುಗಳನ್ನು ನಿರ್ಬಂಧಿಸಬೇಕು.

  3. ಅಂಥ ಪ್ರಾಧಿಕಾರಗಳು ಸ್ಥಾಪನೆಯಾಗದಿದ್ದರೆ 2013ರ ಕಾಯಿದೆಯ ನಿಬಂಧನೆಯಡಿ ತಿಂಗಳ ಒಳಗೆ ಅವುಗಳನ್ನು ಆರಂಭಿಸಬೇಕು.

  4. ನಿಷೇಧಿತ ಜಾಹೀರಾತುಗಳನ್ನು ಪ್ರಸಾರ ಮಾಡಿದರೆ ಟಿವಿ ಚಾನೆಲ್‌ಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ನ್ಯಾಯಾಲಯ ಹೇಳಿದ್ದು, ಅವುಗಳಿಗೆ ನಿರ್ದೇಶನ ನೀಡಿದೆ.

ಟಿವಿ ಚಾನೆಲ್‌ಗಳಲ್ಲಿ ಹನುಮಾನ್‌ ಚಾಲೀಸ್‌ ಯಂತ್ರದ ಬಗ್ಗೆ ಜಾಹೀರಾತು ಪ್ರಕಟವಾಗುತ್ತಿರುವುದನ್ನು ಗಮನಿಸಿದ ಅಂಭೋರೆ ಅವರು 2015ರಲ್ಲಿ ಮನವಿ ಸಲ್ಲಿಸಿದ್ದರು. ಹಿರಿಯ ವಕೀಲ ವಿ ಡಿ ಸಪ್ಕಾಲ್‌ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನ್ಯಾಯಾಲಯವು ನೇಮಿಸಿತ್ತು. ಸಪ್ಕಾಲ್‌ ಅವರು ಶುಲ್ಕರಹಿತವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದರು.