ಗೃಹ ಬಂಧನವು ಬಂಧನ ಅವಧಿಯ ಭಾಗ, ಗೌತಮ್‌ ನವಲಾಖ ಪರ ಕಪಿಲ್‌ ಸಿಬಲ್‌ ವಾದ: ತೀರ್ಪು ಕಾಯ್ದಿರಿಸಿದ ಬಾಂಬೆ ಹೈಕೋರ್ಟ್‌

ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 167(2)ರ ಅಡಿ 90 ದಿನಗಳ ಒಳಗೆ ಆರೋಪ ಪಟ್ಟಿ ಸಲ್ಲಿಸಿಲ್ಲ ಎಂಬ ಆಧಾರದಲ್ಲಿ ಗೌತಮ್‌ ನವಲಾಖ ಜಾಮೀನು ಕೋರಿದ್ದಾರೆ.
Gautam Navlakha
Gautam Navlakha

ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 167(2)ರ ಅಡಿ ಗರಿಷ್ಠ 90 ದಿನಗಳ ಒಳಗೆ ಆರೋಪ ಪಟ್ಟಿ ಸಲ್ಲಿಸಿಲ್ಲ ಎಂಬ ಆಧಾರದಲ್ಲಿ ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿ ಗೌತಮ್‌ ನವಲಾಖ ಅವರಿಗೆ ಜಾಮೀನು ಮಂಜೂರು ಮಾಡುವುದಕ್ಕೆ ಸಂಬಂಧಿಸಿದ ಮನವಿಯ ತೀರ್ಪನ್ನು ಬಾಂಬೆ ಹೈಕೋರ್ಟ್‌ ಗುರುವಾರ ಕಾಯ್ದಿರಿಸಿದೆ.

ಆರೋಪಪಟ್ಟಿ ಸಲ್ಲಿಸದೇ ಅಥವಾ ಸಮಯದ ವಿಸ್ತರಣೆ ಮಾಡದೇ ನವಲಾಖ ಅವರ ಒಟ್ಟು ಬಂಧನ ಅವಧಿ 90 ದಿನಗಳನ್ನು ಮೀರಿದೆ. ಈ ಹಿನ್ನೆಲೆಯಲ್ಲಿ ನವಲಾಖ ಅವರು ಜಾಮೀನಿಗೆ ಅರ್ಹರು ಎಂದು ನವಲಾಖ ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕಪಿಲ್‌ ಸಿಬಲ್‌ ವಾದಿಸಿದರು. ನವಲಾಖ ಅವರ ಗೃಹ ಬಂಧನ ಅವಧಿಯೂ ಬಂಧನ ಅವಧಿಗೆ ಸೇರುತ್ತದೆಯೇ ಎಂಬ ಪ್ರಶ್ನೆ ನ್ಯಾಯಾಲಯದ ಮುಂದಿದ್ದು, ಅದು ಹಾಗೆ ಆದರೆ ಸಿಆರ್‌ಪಿಸಿಯ ಸೆಕ್ಷನ್‌ 167(2)ರ ಅಡಿ ಅವರು ಜಾಮೀನಿಗೆ ಅರ್ಹರಾಗುತ್ತಾರೆ ಎಂದರು.

ಸಿಆರ್‌ಪಿಸಿ ಸೆಕ್ಷನ್‌ 167(2): ಆರೋಪ ಪಟ್ಟಿ / ಅಂತಿಮ ವರದಿ ಸಲ್ಲಿಸದೆ ಆರೋಪಿಯ ಬಂಧನ ಅವಧಿಯು 90 ದಿನಗಳ ಅವಧಿಯನ್ನು ಮೀರಿದರೆ ಮ್ಯಾಜಿಸ್ಟ್ರೇಟ್‌ ಅವರು ಆರೋಪಿಯನ್ನು ಬಿಡುಗಡೆ ಮಾಡಬಹುದಾಗಿದೆ.

ಈ ವಿಷಯ ನಿರ್ಧರಿಸಲು ಕೆಳಗಿನ ದಿನಾಂಕ ಸೂಕ್ತ ಎಂದು ಸಿಬಲ್ ನ್ಯಾಯಾಲಯದ ಗಮನ ಸೆಳೆದರು.

  • ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿ ನವಲಾಖ ಅವರ ವಿರುದ್ಧ ದೂರ ದಾಖಲಾಗಿದ್ದು, 2018ರ ಆಗಸ್ಟ್‌ 28ರಂದು ಅವರನ್ನು ಪುಣೆಯ ತಮ್ಮ ನಿವಾಸದಲ್ಲಿ ಬಂಧಿಸಲಾಗಿತ್ತು. ಅದೇ ದಿನ ನವಲಾಖ ಅವರಿಗೆ ಗೃಹ ಬಂಧನ ವಿಧಿಸುವಂತೆ ದೆಹಲಿ ಹೈಕೋರ್ಟ್‌ ನಿರ್ದೇಶಿಸಿತ್ತು.

  • 2018ರ ಅಕ್ಟೋಬರ್‌ 1ರಂದು ದೆಹಲಿ ಹೈಕೋರ್ಟ್‌ ನವಲಾಖ ಅವರ ಬಂಧನವನ್ನು ವಜಾ ಮಾಡಿತ್ತು. ಈ ವೇಳೆಗಾಗಲೇ ಅವರು 34 ದಿನಗಳನ್ನು ಬಂಧನದಲ್ಲಿ ಕಳೆದಿದ್ದರು.

  • ಆ ಬಳಿಕ ನವಲಾಖ ಅವರು ಹಲವು ಪ್ರಕ್ರಿಯೆಗಳು ಮತ್ತು ಮೇಲ್ಮನವಿಗಳ ಎಫ್‌ಐಆರ್‌ ರದ್ದು ಕೋರಿದ್ದರಲ್ಲದೇ ನಿರೀಕ್ಷಣಾ ಜಾಮೀನಿಗೆ ಮನವಿ ಮಾಡಿದ್ದರು. ಇದೆಲ್ಲದರ ಮಧ್ಯೆ 2020ರ 16ರಂದು ಮೂರು ವಾರಗಳ ಒಳಗೆ ಶರಣಾಗುವಂತೆ ನವಲಾಖ ಅವರಿಗೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

  • ಅಂತೆಯೇ 2020ರ ಏಪ್ರಿಲ್ 14ರಂದು ನವಲಾಖ ಅವರು ಎನ್‌ಐಎಗೆ ಶರಣಾದರು. ಬಳಿಕ ಅವರನ್ನು ಪೊಲೀಸ್‌ ವಶಕ್ಕೆ ನೀಡಲಾಯಿತು. 2020ರ ಏಪ್ರಿಲ್ 25ರಂದು ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಅವರ ಬಂಧನ ಅವಧಿಯನ್ನು ಆಗಾಗ್ಗೆ ವಿಸ್ತರಿಸಲಾಗಿದೆ.

  • 2020ರ ಜೂನ್‌ 29ರಂದು ಆರೋಪ ಪಟ್ಟಿ ಸಲ್ಲಿಸಲು ಕಾಲಾವಕಾಶ ನೀಡುವಂತೆ ಎನ್‌ಐಎ ಮನವಿ ಸಲಿಸಿದ್ದು, ಅದಕ್ಕೆ ಎನ್‌ಐಎ ವಿಶೇಷ ನ್ಯಾಯಾಲಯವು ಅನುಮತಿಸಿತ್ತು.

  • ನವಲಾಖ ಅವರ ಶಾಸನಬದ್ಧ ಜಾಮೀನು ಅರ್ಜಿಯನ್ನು 2020ರ ಜುಲೈ 12ರಂದು ಮುಂಬೈನ ಎನ್ಐಎ ವಿಶೇಷ ನ್ಯಾಯಾಲಯವು ವಜಾಗೊಳಿಸದ ಹಿನ್ನೆಲೆಯಲ್ಲಿ ಅದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.

ಬಂಧನದ ಅವಧಿಯನ್ನು ಲೆಕ್ಕಹಾಕುವಾಗ 34 ದಿನಗಳ ನವಲಾಖ ಅವರ ಗೃಹ ಬಂಧನವನ್ನು ಕೈಬಿಡುವ ಮೂಲಕ ವಿಶೇಷ ಎನ್‌ಐಎ ನ್ಯಾಯಾಲಯವು ಎಡವಿದೆ ಎಂದು ಸಿಬಲ್‌ ಪ್ರತಿಪಾದಿಸಿದ್ದಾರೆ.

ಭದ್ರತಾ ನಿಗಾದಡಿ ನವಲಾಖ ಅವರು ತಮ್ಮ ಮನೆಗೆ ಸೀಮಿತವಾಗಿದ್ದರು. ನ್ಯಾಯಾಲಯದ ಆದೇಶದಂತೆ ಯಾವುದೇ ವ್ಯಕ್ತಿಯನ್ನು ಬಂಧನಕ್ಕೆ ಒಳಪಡಿಸುವ ಆದೇಶವು ನ್ಯಾಯಾಂಗ ಬಂಧನದ ಆದೇಶವಾಗುತ್ತದೆ. “ಬಂಧನವು ಕಾನೂನಿನ ವಿಷಯವಾದರೆ, ವಶಕ್ಕೆ ಪಡೆಯುವುದು ವಾಸ್ತವ ವಿಚಾರವಾಗಿದೆ” ಎಂದು ಸಿಬಲ್‌ ತಮ್ಮ ವಾದ ಪೂರ್ಣಗೊಳಿಸಿದರು.

Also Read
ನ್ಯಾಯಾಂಗ ನಿಂದನೆ ವಿಚಾರಣೆಗೆ ನ್ಯಾಯಾಲಯ ಅಮೂಲ್ಯ ಸಮಯ ವ್ಯಯಿಸಬಾರದು, ಟೀಕೆಗೆ ಮುಕ್ತವಾಗಿರಬೇಕು: ನ್ಯಾ. ಶಿಂಧೆ

ನವಲಾಖ ಅವರ ಗೃಹ ಬಂಧನವು ಬಂಧನದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ವಿಶೇಷ ಎನ್‌ಐಎ ನ್ಯಾಯಾಲಯವು ಸರಿಯಾಗಿ ಹೇಳಿದೆ ಎಂದು ಅರ್ಜಿದಾರರ ಮನವಿಯನ್ನು ಎನ್‌ಐಎ ಪ್ರತಿನಿಧಿಸುತ್ತಿರುವ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ವಿರೋಧಿಸಿದರು. ಸಾಮಾನ್ಯವಾಗಿ ವಶಕ್ಕೆ ಪಡೆದಾಗ ಆರೋಪಿಯ ವಿಚಾರಣೆಗೆ ಅವಕಾಶವಿರುತ್ತದೆ. ಆದರೆ, ಗೃಹ ಬಂಧನದ ಸಂದರ್ಭದಲ್ಲಿ ನವಲಾಖ ಅವರು ವಿಚಾರಣೆ ಸಾಧ್ಯವಾಗುವುದಿಲ್ಲ ಎಂದರು.

ನವಲಾಖ ಅವರ ಬಂಧನವನ್ನು ವಜಾಗೊಳಿಸಿದ್ದ ದೆಹಲಿ ಹೈಕೋರ್ಟ್‌ ಆದೇಶವನ್ನು ಉಲ್ಲೇಖಿಸಿರುವ ರಾಜು ಅವರು, ಆದೇಶ ವಜಾಗೊಳಿಸಿದ ಬಳಿಕ ನವಲಾಖ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು, ಇದು ಸಿಆರ್‌ಪಿಸಿ ಸೆಕ್ಷನ್‌ 167(2)ರ ಅಡಿ ಗೃಹ ಬಂಧನವು ಬಂಧನವಲ್ಲ ಎನ್ನುವುದನ್ನು ಸೂಚಿಸುತ್ತದೆ ಎಂದರು.

ಹಾಗಾಗಿ, "ಅವರು (ನವಲಾಖ) ವಶದಲ್ಲೂ ಇರಲಿಲ್ಲ ಅಥವಾ ಜಾಮೀನಿನ ಮೇಲೆ ಹೊರಗೂ ಇರಲಿಲ್ಲ, ಅವರು ಸ್ವತಂತ್ರವಾಗಿದ್ದರು” ಎಂದು ರಾಜು ವಾದಿಸಿದರು.

ಉಭಯ ಪಕ್ಷಗಳ ವಾದ ಆಲಿಸಿದ ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಎಂ ಎಸ್‌ ಕಾರ್ನಿಕ್‌ ಅವರು ಒಂದು ವಾರದಗೊಳಗೆ ಲಿಖಿತ ದಾಖಲೆ ಸಲ್ಲಿಸುವಂತೆ ಎಲ್ಲಾ ವಕೀಲರಿಗೆ ಸೂಚಿಸಿದ್ದು, ಪ್ರಕರಣದ ಆದೇಶವನ್ನು ಕಾಯ್ದಿರಿಸಿದೆ.

Related Stories

No stories found.
Kannada Bar & Bench
kannada.barandbench.com