ಗುಜರಾತ್ ಹೈಕೋರ್ಟ್
ಗುಜರಾತ್ ಹೈಕೋರ್ಟ್  
ಸುದ್ದಿಗಳು

ಕಾರಿನಲ್ಲಿ ಧೂಮಪಾನ ಮಾಡುತ್ತ ವೀಡಿಯೊ ಕಲಾಪದಲ್ಲಿ ಭಾಗಿಯಾದ ವಕೀಲರಿಗೆ ರೂ.10,000 ದಂಡ ವಿಧಿಸಿದ ಗುಜರಾತ್ ಹೈಕೋರ್ಟ್

Bar & Bench

ಕಾರಿನಲ್ಲಿ ಕುಳಿತು ಧೂಮಪಾನ ಮಾಡುತ್ತ ನ್ಯಾಯಾಲಯದ ವೀಡಿಯೊ ಕಲಾಪದಲ್ಲಿ ಭಾಗಿಯಾಗಿದ್ದಕ್ಕಾಗಿ ವಕೀಲ ಜೆ ವಿ ಅಜ್ಮೆರಾ ಎಂಬುವವರಿಗೆ ಗುಜರಾತ್ ಹೈಕೋರ್ಟ್ ರೂ.10,000 ದಂಡ ವಿಧಿಸಿದ್ದು ವಾರದೊಳಗೆ ಹೈಕೋರ್ಟ್ ರಿಜಿಸ್ಟ್ರಿಗೆ ದಂಡದ ಮೊತ್ತ ಪಾವತಿಸುವಂತೆ ಸೂಚನೆ ನೀಡಿದೆ.

ನ್ಯಾ. ಎ ಎಸ್ ಸುಫೆಹಿಯಾ ಅವರಿದ್ದ ಏಕ ಸದಸ್ಯ ಪೀಠ ಈ ತೀರ್ಪು ನೀಡಿದೆ.

ನ್ಯಾಯಾಲಯವು ವಕೀಲ ಜೆ ವಿ ಅಜ್ಮೆರಾ ಅವರ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ. ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ವಕೀಲರು ಕಾರಿನಲ್ಲಿ ಧೂಮಪಾನ ಮಾಡುತ್ತಾರೆಂದು ನಿರೀಕ್ಷಿಸಿರಲಿಲ್ಲ. ವಕೀಲರ ಇಂತಹ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಖಂಡಿಸುವ ಅಗತ್ಯವಿದೆ. "
ಗುಜರಾತ್ ಹೈಕೋರ್ಟ್

"ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗುವ ವಕೀಲರು ಕನಿಷ್ಠ ಘನತೆಯನ್ನು ಕಾಪಾಡಿಕೊಳ್ಳುವ ಅಗತ್ಯ ಇರುತ್ತದೆ, ಇದರಿಂದಾಗಿ ನ್ಯಾಯಾಂಗದ ಕಲಾಪಗಳು ಮತ್ತು ಸಂಸ್ಥೆಯ ಗೌರವ ಮತ್ತು ಘನತೆ ಉಳಿಯುತ್ತದೆ." ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅಲ್ಲದೆ, ವಕೀಲ ಅಜ್ಮೇರಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಹತ್ತು ದಿನಗಳ ಒಳಗಾಗಿ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಬೇಕು ಎಂದು ನ್ಯಾಯಾಂಗ ರಿಜಿಸ್ಟ್ರಾರ್ ಗೆ ನಿರ್ದೇಶಿಸಲಾಗಿದೆ.

ನ್ಯಾಯಾಂಗ ರಿಜಿಸ್ಟ್ರಾರ್ ಸಿದ್ಧಪಡಿಸಿದ ವರದಿಯನ್ನು ಗುಜರಾತ್‌ನ ಬಾರ್ ಕೌನ್ಸಿಲ್ ಗೆ ರವಾನಿಸಬೇಕಿದೆ.

ಜೊತೆಗೆ "​​ವಿಡಿಯೋ ಕಾನ್ಫರೆನ್ಸ್ ಮೂಲಕ ವಿಷಯಗಳನ್ನು ನಡೆಸುವಾಗ ಕನಿಷ್ಠ ಘನತೆ ಕಾಪಾಡಿಕೊಳ್ಳಲು ತಿಳಿಸುವಂತೆ ಗುಜರಾತ್‌ನ ಬಾರ್ ಕೌನ್ಸಿಲ್ ಮತ್ತು ಹೈಕೋರ್ಟ್‌ನ ಬಾರ್ ಅಸೋಸಿಯೇಷನ್ ಗೆ ಕೂಡ ನ್ಯಾಯಾಲಯ ಸೂಚಿಸಿದೆ.

ತಮ್ಮ ಮನೆ ಅಥವಾ ಕಚೇರಿಗಳಿಂದ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯ ಕಲಾಪಗಳಿಗೆ ಹಾಜರಾಗಬೇಕೇ ವಿನಾ ವಾಹನ ಅಥವಾ ತೆರೆದ ಮೈದಾನದಿಂದ ಅಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಲ್ಲದೆ ತಮ್ಮ ಮನೆ ಅಥವಾ ಕಚೇರಿಗಳಿಂದ ಕಲಾಪದಲ್ಲಿ ಭಾಗವಹಿಸುವ ವಕೀಲರು ನ್ಯಾಯಾಲಯವನ್ನು ಉದ್ದೇಶಿಸಿ ವಾದ ಮಂಡಿಸುವಾಗ ಸರಿಯಾದ ಭಂಗಿಯಲ್ಲಿ ಕುಳಿತಿರಬೇಕು’ ಎಂದು ಕೂಡ ಕೋರ್ಟ್ ಹೇಳಿದೆ.