ದಂಡ ಐನೂರಾದರೆ, ಪರಿಹಾರ ದಶಲಕ್ಷ! ಪೊಲೀಸರ ವಿರುದ್ಧ ತಿರುಗಿಬಿದ್ದ ಕೋಟುಧಾರಿಯ ಕತೆ
A situational graphic

ದಂಡ ಐನೂರಾದರೆ, ಪರಿಹಾರ ದಶಲಕ್ಷ! ಪೊಲೀಸರ ವಿರುದ್ಧ ತಿರುಗಿಬಿದ್ದ ಕೋಟುಧಾರಿಯ ಕತೆ

ಏಕಾಂಗಿಯಾಗಿ ಕಾರು ಚಾಲನೆ ಮಾಡುವಾಗ ಮುಖಗವಸು ಧರಿಸದೇ ಇದ್ದುದಕ್ಕೆ ರೂ.500 ದಂಡ ವಿಧಿಸಿದ ಪೊಲೀಸರ ವಿರುದ್ಧ 10 ಲಕ್ಷ ರೂಪಾಯಿ ಪರಿಹಾರ ಕೋರಿ ದೆಹಲಿ ಮೂಲದ ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ.

'ದಂಡಂ ದಶಗುಣಂ' ಎಂಬ ಮಾತು ನೀವು ಕೇಳಿರಬಹುದು. ಬಾಯಿ ಮಾತಲ್ಲಿ ಹೇಳಿದರೂ ಕೇಳದಿದ್ದಾಗ ದಂಡ ಪ್ರಯೋಗವೇ ಉತ್ತಮ ಹಾಗೂ ಕೊನೆಯ ಅಸ್ತ್ರ ಎಂಬುದು ಆ ಮಾತಿನ ಅರ್ಥ. ಆದರೆ ಇಲ್ಲೊಬ್ಬ ವಕೀಲರು ಅದನ್ನು ಸ್ವಾನುಕೂಲಕರ ರೀತಿಯಲ್ಲಿ ಬಳಸಿಕೊಂಡು 'ದಂಡಂ ದಶಲಕ್ಷಂ' ಎನ್ನುತ್ತಿದ್ದಾರೆ.

ಆದದ್ದಿಷ್ಟು: ಸೆ. 9ರಂದು 20 ವರ್ಷ ವಕೀಲಿ ಅನುಭವ ಇರುವ ದೆಹಲಿ ಮೂಲದ ನ್ಯಾಯವಾದಿ ಸೌರಭ್ ಶರ್ಮ ಕಚೇರಿಗೆ ತೆರಳಲು ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು. ನಗರದ ಗೀತಾ ಕಾಲೋನಿ ಬಳಿ ದೆಹಲಿ ಪೊಲೀಸರು ಅವರನ್ನು ಅಡ್ಡಗಟ್ಟಿದರು. ಮುಖಗವಸು ಧರಿಸಿಲ್ಲ ಎಂಬ ಕಾರಣಕ್ಕೆ ರೂ.500 ದಂಡ ಕೂಡ ವಿಧಿಸಿದರು.

Also Read
ನ್ಯಾಯಾಂಗ ನಿಂದನೆ: ಒಂದು ರೂಪಾಯಿ ದಂಡ ವಿಧಿಸಿ ಪ್ರಶಾಂತ್ ಭೂಷಣ್ ರನ್ನು ಬಿಡುಗಡೆಗೊಳಿಸಿದ ಸುಪ್ರೀಂ ಕೋರ್ಟ್

ತಾವು ಕಚೇರಿಗೆ ಕಾರಿನಲ್ಲಿ ಒಬ್ಬರೇ ಹೋಗುತ್ತಿರುವುದಾಗಿಯೂ, ಒಬ್ಬರೇ ಕಾರು ಚಲಾಯಿಸುವಾಗ ಮುಖಗವಸು ಧರಿಸುವ ಅಗತ್ಯ ಇಲ್ಲವೆಂದೂ ತಮ್ಮ ಕಾನೂನು ಭಾಷೆಯನ್ನೆಲ್ಲಾ ಪ್ರಯೋಗಿಸಿ ವಕೀಲರು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.

ಅನ್ಯಾಯ ಕಾನೂನು ಬಾಹಿರ ನಡೆ ಎಂದು ಕೂಗಿದರು. ‘ಸುಲಿಗೆ’, ಭಾರಿ ಮಾನಸಿಕ ಹಿಂಸೆ ಮತ್ತು ಕಿರುಕುಳ ಎಂದರು. ಆದರೆ ಪೊಲೀಸರು ಮಾತ್ರ ಜಪ್ಪಯ್ಯ ಎನ್ನಲಿಲ್ಲ. ಕಡೆಗೆ ವಕೀಲರು ತಮ್ಮ ಪ್ರತಿಭಟನೆಯ ನಡುವೆಯೇ 500 ರೂ ದಂಡ ಕಟ್ಟಿ ಬಂದರು.

Also Read
ಕೋವಿಡ್ ಸಂದರ್ಭದಲ್ಲಿ ನೀಟ್ ನಡೆಸಿದ್ದಕ್ಕೆ ಪ್ರತಿಕ್ರಿಯಿಸಿದ ಸೂರ್ಯ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ: ಸಿಜೆಗೆ ದೂರು

ಆದರೆ ಪೊಲೀಸರಿಂದ ಎಡವಟ್ಟಾಗಿದೆ ಎಂಬುದು ಅವರಿಗೆ ಬಲವಾಗಿಯೇ ಅನಿಸಿತ್ತೇನೋ?! ಕೂಡಲೇ ಕೋರ್ಟಿನ ಮೊರೆ ಹೋದರು. 500 ರೂಪಾಯಿ ದಂಡವನ್ನು ವಾಪಸು ಕೊಡಿಸಬೇಕು ಎಂಬ ಅಹವಾಲಿನ ಜೊತೆಗೆ 10 ಲಕ್ಷ ರೂಪಾಯಿ ಪರಿಹಾರವನ್ನೂ ಕೋರಿದರು.

ವೈಯಕ್ತಿಕ ಮತ್ತು ಖಾಸಗಿ ವಾಹನದಲ್ಲಿ ಒಬ್ಬರೇ ಕುಳಿತು ಪ್ರಯಾಣಿಸುವಾಗ ಅದು ಸಾರ್ವಜನಿಕ ಸ್ಥಳ ಅಲ್ಲದೇ ಇರುವುದರಿಂದ ಮುಖಗವಸು ಧರಿಸದ ಕಾರಣಕ್ಕೆ ದಂಡ ವಿಧಿಸುವಂತಿಲ್ಲ ಎಂಬುದು ಅವರ ವಾದದ ಸಾರ. ಜೊತೆಗೆ ಒಬ್ಬರೇ ಪ್ರಯಾಣಿಸುವಾಗ ಮುಖಗವಸು ಧರಿಸಬೇಕು ಎಂಬ ಕಾರ್ಯಕಾರಿ ಆದೇಶ ಕೂಡ ನೀಡಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.

Also Read
ಪುನರ್ವಸತಿ ಯೋಜನೆ ವೈಫಲ್ಯಕ್ಕೆ ಕೊರೊನಾ ನೆಪ ಹೇಳುವಂತಿಲ್ಲ: ಕರ್ನಾಟಕ ಹೈಕೋರ್ಟ್ ಸಿಡಿಮಿಡಿ

ವಾದವನ್ನು ಆಲಿಸಿದ ನ್ಯಾ. ನವೀನ್ ಚಾವ್ಲಾ ಅವರಿದ್ದ ಏಕ ಸದಸ್ಯ ಪೀಠ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಮುಂದಿನ ವಿಚಾರಣೆ ನವೆಂಬರ್ 18ಕ್ಕೆ ನಿಗದಿಯಾಗಿದೆ.

Related Stories

No stories found.