ಸುದ್ದಿಗಳು

ನ್ಯಾಯಾಂಗ ನಿಂದನೆ: ʼತುಘಲಕ್ʼ ಗುರುಮೂರ್ತಿ ಅವರಿಗೆ ನೊಟೀಸ್ ಜಾರಿ ಮಾಡಿದ ತಮಿಳುನಾಡು ಅಡ್ವೊಕೇಟ್ ಜನರಲ್

Bar & Bench

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನ್ಯಾಯಾಧೀಶರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಫೆ 16ರಂದು ತಮ್ಮ ಮುಂದೆ ಖುದ್ದು ಹಾಜರಾಗುವಂತೆ ತಮಿಳುನಾಡು ಅಡ್ವೊಕೇಟ್‌ ಜನರಲ್‌ ವಿಜಯ ನಾರಾಯಣ್‌ ಅವರು ʼತುಘಲಕ್‌ʼ ನಿಯತಕಾಲಿಕದ ಸಂಪಾದಕ ಎಸ್‌ ಗುರುಮೂರ್ತಿ ಅವರಿಗೆ ನೊಟೀಸ್‌ ನೀಡಿದ್ದಾರೆ. ಗುರುಮೂರ್ತಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ವಕೀಲ ಎಸ್‌ ದೊರೆಸ್ವಾಮಿ ಅವರು ಎಜಿ ಅವರಿಗೆ ಮನವಿ ಮಾಡಿದ್ದರು.

ಜನವರಿ 14 ರಂದು ನಡೆದ ತಮ್ಮ ಪತ್ರಿಕೆಯ ಕಾರ್ಯಕ್ರಮದ ವೇಳೆ ಗುರುಮೂರ್ತಿ ಅವರು “ಬಹುತೇಕ ನ್ಯಾಯಾಧೀಶರು ಅಪ್ರಾಮಾಣಿಕರು ಮತ್ತು ಅನರ್ಹರಾಗಿದ್ದು ರಾಜಕಾರಣಿಗಳ ಕಾಲಿಗೆ ಎರಗಿ ಅಧಿಕಾರ ಪಡೆದುಕೊಂಡಿದ್ದಾರೆ” ಎಂದು ಹೇಳಿದ್ದರು. ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮತ್ತೊಬ್ಬ ವಕೀಲ ಪಿ ಪುಗಲೇಂಥಿ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಗುರುಮೂರ್ತಿ ವಿರುದ್ಧ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿಕೊಳ್ಳಬೇಕು ಎಂದು ಅವರು ಕೋರಿದ್ದರು.

ತುಘಲಕ್‌ ಪತ್ರಿಕೆ ಸಂಪಾದಕರ ಹೇಳಿಕೆಗಳು ನ್ಯಾಯಾಲಯವನ್ನು ವಿವಾದಕ್ಕೀಡುಮಾಡಿವೆ ಮತ್ತು ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಅಂಶಗಳನ್ನು ಒಳಗೊಂಡಿವೆ ಎಂದು ಇಬ್ಬರೂ ವಕೀಲರು ಪ್ರತಿಪಾದಿಸಿದ್ದಾರೆ. ನ್ಯಾಯಾಂಗದ ವಿರುದ್ಧ ಮಾತನಾಡಿದರು ಎಂಬ ಕಾರಣಕ್ಕಾಗಿ ಹೈಕೋರ್ಟ್‌ ಮಾಜಿ ನ್ಯಾಯಮೂರ್ತಿ ಸಿ ಎಸ್‌ ಕರ್ಣನ್‌ ಅವರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಆದರೆ ಗುರುಮೂರ್ತಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ತಮಿಳುನಾಡು ಸರ್ಕಾರ ಹಿಂಜರಿಯುತ್ತಿದೆ” ಎಂದು ವಕೀಲ ದೊರೆಸ್ವಾಮಿ ಆರೋಪಿಸಿದ್ದಾರೆ.

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಕಾರ್ಯಕರ್ತ ಗೌತಮ್ ನವಲಖಾ ಅವರನ್ನು ಬಿಡುಗಡೆ ಮಾಡಲು ದೆಹಲಿ ಹೈಕೋರ್ಟ್‌ನ ಅಂದಿನ ನ್ಯಾಯಮೂರ್ತಿ ಎಸ್‌ ಮುರಳೀಧರ್ (ಒರಿಸ್ಸಾ ಹೈಕೋರ್ಟ್‌ನ ಈಗಿನ ಮುಖ್ಯ ನ್ಯಾಯಮೂರ್ತಿ)‌ ಅವರು ಆದೇಶಿಸಿದ ಬಳಿಕ ಅವರ ವಿರುದ್ಧವೂ ಗುರುಮೂರ್ತಿ ಆಕ್ಷೇಪಾರ್ಹ ಮಾತುಗಳನ್ನಾಡಿದ್ದರು. ಬೇಷರತ್‌ ಕ್ಷಮೆಯಾಚನೆ ಬಳಿಕ ಅವರ ವಿರುದ್ಧದ ಪ್ರಕರಣ ಹಿಂತೆಗೆದುಕೊಳ್ಳಲಾಗಿತ್ತು.

ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ಗುರುಮೂರ್ತಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ತತ್‌ ಕ್ಷಣದ ಬಿಸಿಯಲ್ಲಿ ತಪ್ಪು ಹೇಳಿಕೆ ನೀಡಿರುವುದಾಗಿ ಆನ್‌ಲೈನ್‌ ಮೂಲಕ ತಿಳಿಸಿದ್ದಾರೆ. “ನ್ಯಾಯಾಮೂರ್ತಿಯಾಗುವ ಅಭ್ಯರ್ಥಿಗಳು ಹೇಗೆ ರಾಜಕಾರಣಿಗಳ ಬೆಂಬಲ ಯಾಚಿಸುತ್ತಾರೆ ಎಂದು ಹೇಳುವುದು ನನ್ನ ಉದ್ದೇಶವಾಗಿತ್ತು. ಆದರೆ ಆ ಕ್ಷಣದ ಪ್ರಚೋದನೆಗೆ ತುತ್ತಾಗಿ ನಾನು ಅಭ್ಯರ್ಥಿಗಳು ಎಂದು ಹೇಳುವ ಬದಲು ನ್ಯಾಯಾಧೀಶರು ಎಂದು ಉಲ್ಲೇಖಿಸಿದೆ. ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ” ಎಂದಿದ್ದಾರೆ.