ಸುದ್ದಿಗಳು

ವಕೀಲ ಜಗದೀಶ್‌ಗೆ ನ್ಯಾಯಾಂಗ ಬಂಧನ: ಏನು ಹೇಳುತ್ತದೆ ಎಫ್ಐಆರ್?

Bar & Bench

ನ್ಯಾಯಾಲಯ ಆವರಣದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಜಗದೀಶ್‌ ಕುಮಾರ್‌ ಕೆ ಎನ್‌ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ದುರ್ವರ್ತನೆಗೆ ಸಂಬಂಧಿಸಿದ ದೂರಿನ ಹಿನ್ನೆಲೆಯಲ್ಲಿ ಜಗದೀಶ್‌ ಅವರನ್ನು ಇಂದು ಬೆಳಿಗ್ಗೆ ಬಂಧಿಸಿ ನಗರದ ನೃಪತುಂಗ ರಸ್ತೆಯಲ್ಲಿರುವ ಮೊದಲನೇ ಹೆಚ್ಚುವರಿ ಸಿಎಂಎಂ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲಾಗಿತ್ತು.

ಐಪಿಸಿ ಸೆಕ್ಷನ್‌ 120 ಬಿ, 143, 147, 153 ಎ, 307, 323, 341, 504, 506, 149 ಅಡಿ ಜಗದೀಶ್‌ ವಿರುದ್ಧ ಎಫ್‌ ಐಆರ್‌ ದಾಖಲಿಸಲಾಗಿದೆ. ವಕೀಲ ನಾರಾಯಣ ಸ್ವಾಮಿ ಅವರು ನಿನ್ನೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಹಲಸೂರು ಗೇಟ್‌ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. “ವಕೀಲರಾದ ಜಗದೀಶ್‌ ಮಹಾದೇವ್‌ (ಕೆ ಎನ್‌ ಜಗದೀಶ್‌ ಕುಮಾರ್‌), ಪ್ರಶಾಂತಿ ಸುಭಾಷ್‌, ಶರತ್‌ ಕದ್ರಿ ಅವರು ಸಾಮಾಜಿಕ ಜಾಲತಾಣದಲ್ಲಿ ವಕೀಲರ ಬಗ್ಗೆ ಮತ್ತು ಸಮಾಜದ ಪ್ರತಿಷ್ಠಿತ ವ್ಯಕ್ತಿಗಳ ವಿರುದ್ಧ ನಿಂದನೆ ಮಾಡುತ್ತಿದ್ದರು. ಹೀಗಾಗಿ ಬೆಂಗಳೂರು ವಕೀಲರ ಸಂಘದ ವತಿಯಿಂದ ಅವರಿಗೆ ಬುದ್ಧಿವಾದ ಹೇಳಲಾಗಿತ್ತು” ಎಂದು ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ನಾರಾಯಣ ಸ್ವಾಮಿ ದೂರಿನಲ್ಲಿ ತಿಳಿಸಿದ್ದರು.

“ಹೀಗಾಗಿ ನನ್ನ ವಿರುದ್ಧ ದ್ವೇಷ ಸಾಧಿಸಿ 10/02/2022ರಂದು ಸಂಜೆ ೪ ಗಂಟೆಗೆ ಸಿಟಿ ಸಿವಿಲ್‌ ನ್ಯಾಯಾಲಯ ಆವರಣದಲ್ಲಿ ನನ್ನ ಮೇಲೆ ಗಲಾಟೆ ಮಾಡಿ ನಿನ್ನನ್ನು ಬಿಡುವುದಿಲ್ಲ ಕೊಲೆ ಮಾಡುತ್ತೇನೆಎಂದು ಹೇಳಿದ್ದರು. ನಂತರ ಸಾಮಾಜಿಕ ಜಾಲ ತಾಣದಲ್ಲಿ ನನ್ನ ಮೇಲೆ ಹಲ್ಲೆ ಮಾಡಲು ಮತ್ತು ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಗಲಾಟೆ ಮಾಡಲುಯ ತನ್ನ ಬೆಂಬಲಿಗರಿಗೆ ಕರೆಕೊಟಿದ್ದರು.” ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

“11/02/2022ರಂದು ಬೆಳಿಗ್ಗೆ 11 ಗಂಟೆಗೆ ಜಗದೀಶ್‌ ಮಹಾದೇವ್‌. ಪ್ರಶಾಂತಿ ಸುಭಾಷ್‌, ಶರತ್‌ ಕದ್ರಿ ಹಾಗೂ ಜಗದೀಶ್‌ ಅವರ ಮಗ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ದೊಂಬಿ ಗಲಾಟೆ ಮಾಡಿ ಅಶಾಂತಿಯ ವಾತಾವರಣ ಉಂಟುಮಾಡುವ ಉದ್ದೇಶದಿಂದ ಹಾಗೂ ವಕೀಲ ಸಮುದಾಯದ ನಡುವೆ ದ್ವೇಷ ಭಾವನೆ ಬಿತ್ತುವ ಉದ್ದೇಶದಿಂದ ಒಳಸಂಚು ರೂಪಿಸಿದ್ದರು. ತಮ್ಮ ಕಡೆಯ 40- 50ರಷ್ಟು ಗೂಂಡಾ ಜರಿಗೆ ನ್ಯಾಯಾಲಯದಲ್ಲಿ ಗಲಾಟೆ ಮಾಡುವಂತೆ ಪ್ರಚೋದನೆ ನೀಡಿ… ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದರು” ಎಂದು ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.

ಅಲ್ಲದೆ “ಸುಮಾರು 300 ಜನ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಕರೆ ಮಾಡಿಸಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಿ ನ್ಯಾಯ ದೊರಕಿಸಿಕೊಡಬೇಕು” ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.