HD Kumaraswamy Karnataka HC
HD Kumaraswamy Karnataka HC 
ಸುದ್ದಿಗಳು

ಎಚ್‌ಡಿಕೆ ವಿರುದ್ಧದ ಭೂಹಗರಣ: ಹೈಕೋರ್ಟ್‌ ಆದೇಶ ಹೇಗೆ ಪಾಲಿಸಲಾಗಿದೆ ಎಂದು ವಿವರಿಸಲು ಪ್ರಧಾನ ಕಾರ್ಯದರ್ಶಿಗೆ ಸೂಚನೆ

Bar & Bench

ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮದ್ದೂರು ಶಾಸಕ ಡಿ ಸಿ ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಅತಿಕ್ರಮಿಸಿದ್ದಾರೆ ಎಂದು ಆರೋಪಿಸಲಾದ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಲ್ಲಿಸಿರುವ ಅಫಿಡವಿಟ್‌ ಅನ್ನು ಮೇಲ್ನೋಟಕ್ಕೆ ನೋಡಿದರೆ ಆದೇಶ ಅನುಪಾಲನೆಯಾಗಿಲ್ಲ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಹೇಳಿದೆ.

ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಮಾಡಿರುವುದನ್ನು ಜಾರಿ ಮಾಡುವಂತೆ ಹೈಕೋರ್ಟ್‌ ಆದೇಶಿಸಿತ್ತು. ಇದನ್ನು ಜಾರಿ ಮಾಡಲು ವಿಫಲವಾಗಿರುವ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿ ಎಸ್‌ ಆರ್‌ ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಿ ಎಸ್‌ ದಿನೇಶ್‌ ಕುಮಾರ್‌ ಮತ್ತು ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ರಾಮನಗರ ಜಿಲ್ಲಾಧಿಕಾರಿ ಡಾ. ಅವಿನಾಶ್‌ ಮೆನನ್‌ ರಾಜೇಂದ್ರ ಅವರ ಅಫಿಡವಿಟ್‌ ಅನ್ನು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಸಲ್ಲಿಸಿದ್ದಾರೆ. 2020ರ ಜನವರಿ 14ರ ಆದೇಶವನ್ನು ಸಂಪೂರ್ಣವಾಗಿ ಪಾಲಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. 2023ರ ಜೂನ್‌ 7ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಲ್ಲಿಸಿರುವ ಅಫಿಡವಿಟ್‌ಅನ್ನು ಗಮನಿಸಿದರೆ ಮೇಲ್ನೋಟಕ್ಕೆ ಆದೇಶ ಪಾಲಿಸಲಾಗಿಲ್ಲ ಎನ್ನುವುದು ಕಂಡುಬರುತ್ತದೆ. ಹೀಗಾಗಿ, ಈ ನ್ಯಾಯಾಲಯವು ಏನೆಂದು ಆದೇಶ ಮಾಡಿತ್ತು. ಇದರ ಅನುಪಾಲನೆಯನ್ನು ಹೇಗೆ ಮಾಡಲಾಗಿದೆ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ಸ್ಪಷ್ಟವಾಗಿ ತಿಳಿಸಬೇಕು ಎಂದು ಆದೇಶದಲ್ಲಿ ವಿವರಿಸಿದೆ.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಕೆಂಪಣ್ಣ ಅವರು 2023ರ ಜೂನ್‌ 7ರಂದು ತನಿಖಾ ವರದಿ ಆಧರಿಸಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಫಿಡವಿಟ್‌ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ದೂರುದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಬಸವರಾಜು ಅವರು ಪ್ರಧಾನ ಕಾರ್ಯದರ್ಶಿಯು ಭೂಮಿ ಮಂಜೂರು ಮೂಲ ದಾಖಲೆ ಲಭ್ಯವಿಲ್ಲ ಎಂದು ಪ್ರಮಾಣೀಕರಿಸಿ ಅಫಿಡವಿಟ್‌ನಲ್ಲಿ ವಿವರಿಸಿದ್ದಾರೆ ಎಂದು ಪೀಠಕ್ಕೆ ವಿವರಿಸಿರುವುದನ್ನು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.