ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮದ್ದೂರು ಶಾಸಕ ಡಿ ಸಿ ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಅತಿಕ್ರಮಿಸಿದ್ದಾರೆ ಎಂದು ಆರೋಪಿಸಲಾದ ಭೂಮಿಗೆ ಸಂಬಂಧಿಸಿದಂತೆ ವಿಸ್ತೃತ ತನಿಖೆಯ ಅನುಪಾಲನಾ ವರದಿಯ ಕುರಿತು ಸೆಪ್ಟೆಂಬರ್ 27ರ ಒಳಗೆ ಜಿಲ್ಲಾಧಿಕಾರಿಯ ಅಫಿಡವಿಟ್ ಸಲ್ಲಿಸಲಾಗುವುದು ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಇತ್ತೀಚೆಗೆ ತಿಳಿಸಿದೆ.
ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಮಾಡಿರುವುದನ್ನು ಜಾರಿ ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು. ಇದನ್ನು ಜಾರಿ ಮಾಡಲು ವಿಫಲವಾಗಿರುವ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿ ಎಸ್ ಆರ್ ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಿ ಎಸ್ ದಿನೇಶ್ ಕುಮಾರ್ ಮತ್ತು ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಸರ್ವೆ ನಂ. 7, 8, 9, 10, 16, 17 ಮತ್ತು 79ರಲ್ಲಿ ಮಂಜೂರಾಗಿರುವ ಅಥವಾ ಆಗದೆ ಇರುವ ಗೋಮಾಳದ ಕುರಿತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಸ್ತೃತ ತನಿಖೆ ನಡೆಸಬೇಕು. ಒಂದೊಮ್ಮೆ ಆ ಭೂಮಿ ಒತ್ತುವರಿಯಾಗಿದ್ದರೆ ಅದನ್ನು ಒತ್ತುವರಿ ಮಾಡಿಕೊಂಡಿರುವವರಿಂದ ಸರ್ಕಾರಿ ಭೂಮಿ ವಾಪಸ್ ಪಡೆಯಲು ಕಾನೂನಾತ್ಮಕ ಕ್ರಮಕೈಗೊಳ್ಳಬೇಕು. ಸರ್ಕಾರದ ಭೂಮಿಗೆ ಅತಿಕ್ರಮ ಪ್ರವೇಶ ಮಾಡಿರುವವರು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮಕೈಗೊಳ್ಳಬೇಕು. ನಾಲ್ಕು ತಿಂಗಳಲ್ಲಿ ಈ ಕ್ರಮವಾಗಬೇಕು. ಆನಂತರ 15 ದಿನಗಳಲ್ಲಿ ರಿಜಿಸ್ಟ್ರಾರ್‌ಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಲೋಕಾಯುಕ್ತರು 2014ರ ಆಗಸ್ಟ್ 4ರಂದು ಆದೇಶಿಸಿದ್ದರು. ಇದನ್ನು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಎತ್ತಿ ಹಿಡಿದಿತ್ತು. ಈ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠವು “ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿಯು 25 ದಿನಗಳಿಂದ ರಜೆಯಲ್ಲಿದ್ದಾರೆ. ಹೀಗಾಗಿ, ಅಫಿಡವಿಟ್ ಸಲ್ಲಿಸಲು ತಡವಾಗಿದೆ. ನ್ಯಾಯಾಲಯದ ಆದೇಶ ಪಾಲನೆಯ ಕುರಿತು ಸೆಪ್ಟೆಂಬರ್ 27ರೊಳಗೆ ಅನುಪಾಲನಾ ವರದಿ ಸಲ್ಲಿಸಲಾಗುವುದು ಎಂದು ಹೆಚ್ಚವರಿ ಅಡ್ವೊಕೇಟ್ ಜನರಲ್ ಕೆಂಪಣ್ಣ ತಿಳಿಸಿದ್ದಾರೆ” ಎಂದು ಆದೇಶದಲ್ಲಿ ದಾಖಲಿಸಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಗಳು ಸೇರಿ ರಾಮನಗರ ಜಿಲ್ಲೆ ಬಿಡದಿ ಹೋಬಳಿ ಕೇತಗಾನಹಳ್ಳಿಯಲ್ಲಿ ವಿವಿಧ ಸರ್ವೆ ನಂಬರ್‌ಗಳಲ್ಲಿ 14 ಎಕರೆಗೂ ಅಧಿಕ ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿದ್ದಾರೆ ಎಂದು ಮಾಜಿ ಸಂಸದ ದಿವಂಗತ ಜಿ. ಮಾದೇಗೌಡರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದರ ಸಮಗ್ರ ತನಿಖೆ ನಡೆಸಬೇಕು ಎಂದು ಕಂದಾಯ ಇಲಾಖೆಗೆ ಲೋಕಾಯುಕ್ತರು 2014ರಲ್ಲಿ ಆದೇಶಿಸಿದ್ದರು. ಲೋಕಾಯುಕ್ತರ ಆದೇಶವನ್ನು ಹೈಕೋರ್ಟ್ ಕೂಡ ಎತ್ತಿಹಿಡಿದಿತ್ತು. ಆದರೆ, ಹೈಕೋರ್ಟ್ ಆದೇಶ ಪಾಲಿಸಿಲ್ಲ ಎಂದು ದೂರಿ ಹಿರೇಮಠ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.