Swami Ramdev and roohafza 
ಸುದ್ದಿಗಳು

'ಶರಬತ್ ಜಿಹಾದ್' ವಿವಾದ: ವಿಡಿಯೋ ತೆಗೆದುಹಾಕುವುದಾಗಿ ದೆಹಲಿ ಹೈಕೋರ್ಟ್‌ಗೆ ತಿಳಿಸಿದ ಬಾಬಾ ರಾಮದೇವ್‌

"ರಾಮದೇವ್‌ ತಮ್ಮ ಅಭಿಪ್ರಾಯಗಳನ್ನು (ಪ್ರತಿಸ್ಪರ್ಧಿ ಉತ್ಪನ್ನಗಳ ಅವಹೇಳನ ಮಾಡುವುದು) ತಲೆಯಲ್ಲಿ ಇಟ್ಟುಕೊಳ್ಳಬಹುದು, ಅವುಗಳನ್ನು ವ್ಯಕ್ತಪಡಿಸುವ ಅಗತ್ಯವಿಲ್ಲ" ಎಂದು ಮೊಟುಕಿದ ನ್ಯಾಯಪೀಠ.

Bar & Bench

ಔಷಧ ಮತ್ತು ಆಹಾರ ತಯಾರಿಕಾ ಕಂಪೆನಿ ಹಮ್‌ದರ್ದ್‌ ಮತ್ತದರ ಜನಪ್ರಿಯ ಪಾನೀಯ ರೂಹ್‌ ಅಫ್ಜಾವನ್ನು ಗುರಿಯಾಗಿಸಿಕೊಂಡು ಕೋಮು ನಿಂದನೆ ಹೇಳಿಕೆ ನೀಡಿದ್ದ ವಿಡಿಯೋಗಳನ್ನು ತೆಗೆದುಹಾಕುವುದಾಗಿ ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್‌ ದೆಹಲಿ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದರು.

ಅದಕ್ಕೂ ಕೆಲ ಹೊತ್ತಿನ ಮೊದಲು ಪತಂಜಲಿ ಮತ್ತು ರಾಮ್‌ದೇವ್ ವಿರುದ್ಧ ಹಮ್‌ದರ್ದ್‌ ಸಲ್ಲಿಸಿದ್ದ ಮೊಕದ್ದಮೆಯ ಪ್ರಾಥಮಿಕ ವಿಚಾರಣೆಯ ನಡೆಸಿದ್ದ ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರು ಕಠಿಣ ಆದೇಶದ ಎಚ್ಚರಿಕೆ ನೀಡಿದ್ದರು. "ಇದು ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತವನ್ನುಂಟುಮಾಡುತ್ತದೆ. ಸಮರ್ಥನೀಯವಲ್ಲ" ಎಂದು ನ್ಯಾಯಾಲಯ ಗುಡುಗಿತ್ತು.

ಪತಂಜಲಿ ಮತ್ತು ರಾಮದೇವ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್‌ ನಾಯರ್‌ ಮುದ್ರಣ ರೂಪದಲ್ಲಿರಲಿ ಅಥವಾ ವಿಡಿಯೋ ರೂಪದಲ್ಲಿರಲಿ, ಜಾಹೀರಾತುಗಳನ್ನು ತೆಗೆದುಹಾಕಲಾಗುವುದು ಎಂದರು.

ಆಗ ನ್ಯಾಯಮೂರ್ತಿ ಬನ್ಸಾಲ್, "ನೀವು ಪ್ರಕರಣದಲ್ಲಿ ಹಾಜರಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಈ [ವಿಡಿಯೋ ನೋಡಿದಾಗ ನನ್ನ ಕಣ್ಣು ಕಿವಿಗಳನ್ನೇ ನಂಬಲು ಸಾಧ್ಯವಾಗಲಿಲ್ಲ" ಎಂದರು.

ಅಂತೆಯೇ ಭವಿಷ್ಯದಲ್ಲಿ ಇಂತಹ ಹೇಳಿಕೆ  ನೀಡಿ ಜಾಹೀರಾತುಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಪ್ರಕಟಿಸುವುದಿಲ್ಲ ಎಂದು ಬಾಬಾ ರಾಮದೇವ್‌ ಅಫಿಡವಿಟ್‌ ಸಲ್ಲಿಸುವಂತೆ ಪೀಠ ಆದೇಶಿಸಿತು.

ಏಪ್ರಿಲ್ 3ರಂದು ತಮ್ಮ ಕಂಪನಿಯ ಉತ್ಪನ್ನವಾದ ಗುಲಾಬ್ ಶರಬತ್ ಬಗ್ಗೆ ಪ್ರಚಾರ ಮಾಡುವಾಗ ರಾಮದೇವ್‌ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಮಂಗಳವಾರ  ಹಮ್‌ದರ್ದ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ , ರಾಮದೇವ್ ಹಮ್‌ದರ್ದ್‌ ವಿರುದ್ಧ ಎಗ್ಗಿಲ್ಲದೆ ಮಾತನಾಡಿದ್ದಾರೆ ಮತ್ತು ಕಂಪನಿಯ ಮಾಲೀಕರ ಧರ್ಮದ ಮೇಲೆ ದಾಳಿ ಮಾಡುತ್ತಿದ್ದಾರೆ. ಇದು ದ್ವೇಷ ಭಾಷಣದಂತೆಯೇ ಕೋಮು ವಿಭಜನೆಯನ್ನು ಸೃಷ್ಟಿಸುವ ಸಂಗತಿ. ಹಿಮಾಲಯ ಎಂಬ ಮತ್ತೊಂದು ಮುಸ್ಲಿಂ ಒಡೆತನದ ಕಂಪನಿಯ ವಿರುದ್ಧವೂ ರಾಮದೇವ್ ಇದೇ ರೀತಿ ದಾಳಿ ನಡೆಸಿದ್ದಾರೆ. ಅಲೋಪತಿಯನ್ನು ಗುರಿಯಾಗಿಸಿಕೊಂಡಿದ್ದಕ್ಕಾಗಿ ರಾಮದೇವ್ ಅವರು ಈ ಹಿಂದೆ ಸುಪ್ರೀಂ ಕೋರ್ಟ್‌ನಿಂದ ದಂಡನೆಗೆ ಒಳಗಾಗಿದ್ದರು ಎನ್ನುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ವಿಡಿಯೋ ತೆಗೆದುಹಾಕುವುದಾಗಿ ರಾಮದೇವ್‌ ಪರ ವಾದ ಮಂಡಿಸಿದ ನಾಯರ್‌ ರಾಮದೇವ್ ಮತ್ತು ಪತಂಜಲಿ ಯಾವುದೇ ಧರ್ಮದ ವಿರುದ್ಧವಾಗಿಲ್ಲ ಎಂಬುದನ್ನು ನ್ಯಾಯಾಲಯ  ತನ್ನ ಆದೇಶದಲ್ಲಿ ದಾಖಲಿಸಬೇಕು ಎಂದು ವಾದಿಸಿದರು. ಈ ನಿಟ್ಟಿನಲ್ಲಿ ರಾಮದೇವ್ ಅಫಿಡವಿಟ್ ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಹಮ್‌ದರ್ದ್‌ ಪರ ಹಾಜರಾದ ಮತ್ತೊಬ್ಬ ಹಿರಿಯ ವಕೀಲ ಸಂದೀಪ್ ಸೇಥಿ , ರಾಮದೇವ್‌ ಅವರು ಹಮ್‌ದರ್ದ್‌ ಕಂಪನಿ ಸಂಸ್ಥಾಪಕರ ಧರ್ಮವನ್ನು ಗುರಿಯಾಗಿಸಿಕೊಳ್ಳಬಾರದು ಎಂದು ಹೇಳಿದರು.

ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಾಯರ್, ಕಂಪನಿ ಧರ್ಮಪಾಲಕನಲ್ಲ ಎಂದು ಹೇಳಿದರು. ಆದರೆ ಅದು ಮಾನವೀಯತೆಯ ರಕ್ಷಕ ಎಂದು ಸೇಥಿ ಪ್ರತಿಕ್ರಿಯಿಸಿದರು.

ರಾಮದೇವ್‌ ತಮ್ಮ ರಾಜಕೀಯ ದೃಷ್ಟಿಕೋನಗಳನ್ನು ವ್ಯಕ್ತಪಡಿಸುವುದನ್ನು ತಡೆಯಲು ಸಾಧ್ಯವಿಲ್ಲ, ಆದರೆ ಪ್ರತಿಸ್ಪರ್ಧಿಗಳ ಉತ್ಪನ್ನಗಳನ್ನು ಅವಹೇಳನ ಮಾಡುವುದಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಲಾಗುವುದು ಎಂದು ನಾಯರ್ ವಾದಿಸಿದರು.

"ಅವರು ಈ ಅಭಿಪ್ರಾಯಗಳನ್ನು ತಮ್ಮ ತಲೆಯಲ್ಲಿ ಇಟ್ಟುಕೊಳ್ಳಬಹುದು, ಅವುಗಳನ್ನು ವ್ಯಕ್ತಪಡಿಸುವ ಅಗತ್ಯವಿಲ್ಲ " ಎಂದ ನ್ಯಾಯಾಲಯ  ಮೇ 1ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿತು.

ಹಮ್‌ದರ್ದ್‌ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಮತ್ತು ಸಂದೀಪ್ ಸೇಥಿ ಮಾತ್ರವಲ್ಲದೆ  ವಕೀಲರಾದ ಪ್ರವೀಣ್ ಆನಂದ್, ಧ್ರುವ ಆನಂದ್, ನಿಖಿಲ್ ರೋಹಟಗಿ, ಉದಿತಾ ಪಾತ್ರೋ, ಶಿವೇಂದ್ರ ಸಿಂಗ್ ಪ್ರತಾಪ್, ಧನಂಜಯ್ ಖನ್ನಾ, ನಿಮ್ರತ್ ಸಿಂಗ್, ಸಂಪೂರ್ಣ ಸನ್ಯಾಲ್, ನವದೀಪ್ ಮತ್ತು ಮೆಹಕ್ ಖನ್ನಾ ಅವರು ವಾದ ಮಂಡಿಸಿದರು.