
ಔಷಧ ಮತ್ತು ಆಹಾರ ತಯಾರಿಕಾ ಕಂಪೆನಿ ಹಮ್‌ದರ್ದ್ ಮತ್ತದರ ಜನಪ್ರಿಯ ಪಾನೀಯ ರೂಹ್ ಅಫ್ಜಾವನ್ನು ಗುರಿಯಾಗಿಸಿಕೊಂಡು ಕೋಮು ನಿಂದನೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ ಅವರನ್ನು ದೆಹಲಿ ಹೈಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ .
ಪತಂಜಲಿ ಮತ್ತು ರಾಮ್‌ದೇವ್ ವಿರುದ್ಧ ಹಮ್‌ದರ್ದ್ ಸಲ್ಲಿಸಿದ್ದ ಮೊಕದ್ದಮೆಯ ಪ್ರಾಥಮಿಕ ವಿಚಾರಣೆಯ ನಡೆಸಿದ ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರು ಕಠಿಣ ಆದೇಶದ ಎಚ್ಚರಿಕೆ ನೀಡಿದರು.
"ಇದು ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತವನ್ನುಂಟುಮಾಡುತ್ತದೆ. ಸಮರ್ಥನೀಯವಲ್ಲ " ಎಂದು ಹೇಳಿದ ನ್ಯಾಯಾಲಯ, ತಮ್ಮ ಕಕ್ಷಿದಾರರಿಂದ (ರಾಮ್‌ದೇವ್) ಸೂಚನೆಗಳನ್ನು ಪಡೆದು ಹಾಜರಾಗುವಂತೆ ರಾಮ್‌ದೇವ್ ಪರ ವಕೀಲರಿಗೆ ಸೂಚಿಸಿತು.
ಏಪ್ರಿಲ್ 3 ರಂದು ತಮ್ಮ ಕಂಪನಿಯ ಉತ್ಪನ್ನವಾದ ಗುಲಾಬ್ ಶರಬತ್ ಬಗ್ಗೆ ಪ್ರಚಾರ ಮಾಡುವಾಗ ರಾಮ್‌ದೇವ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಹಮ್‌ದರ್ದ್ ಕಂಪೆನಿಯ ರೂಹ್ ಅಫ್ಜಾ ಉತ್ಪನ್ನವನ್ನು ಗುರಿಯಾಗಿಸಿಕೊಂಡು ಹಮ್‌ದರ್ದ್ ತಾನು ಗಳಿಸುವ ಹಣವನ್ನು ಮಸೀದಿ ಮತ್ತು ಮದರಸಾ ನಿರ್ಮಿಸಲು ಬಳಸುತ್ತದೆ ಎಂದು ದೂರಿದ್ದರು. ಆರೋಪ ಮಾಡುವ ವೇಳೆ 'ಶರಬತ್ ಜಿಹಾದ್' ಪದವನ್ನೂ ಬಳಸಿದ್ದರು.
ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಕಳೆದ ವಾರ ಭೋಪಾಲ್‌ನಲ್ಲಿ ರಾಮದೇವ್ ವಿರುದ್ಧ ಧಾರ್ಮಿಕ ದ್ವೇಷವನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದು ವರದಿಯಾಗಿತ್ತು. ನಂತರ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದ ರಾಮದೇವ್ ತಾನು ಯಾವುದೇ ನಿರ್ದಿಷ್ಟ ಬ್ರಾಂಡ್ ಹೆಸರಿಸಿಲ್ಲ ಎಂದಿದ್ದರು
ಹಮ್‌ದರ್ದ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ , ರಾಮದೇವ್ ಹಮ್‌ದರ್ದ್ ವಿರುದ್ಧ ಎಗ್ಗಿಲ್ಲದೆ ನಡೆದುಕೊಳ್ಳುತ್ತಿದ್ದಾರೆ ಮತ್ತು ಕಂಪನಿಯ ಮಾಲೀಕರ ಧರ್ಮದ ಮೇಲೆ ದಾಳಿ ಮಾಡುತ್ತಿದ್ದಾರೆ. ಇದು ದ್ವೇಷ ಭಾಷಣದಂತೆಯೇ ಕೋಮು ವಿಭಜನೆಯನ್ನು ಸೃಷ್ಟಿಸುವ ಸಂಗತಿ. ಹಿಮಾಲಯ ಎಂಬ ಮತ್ತೊಂದು ಮುಸ್ಲಿಂ ಒಡೆತನದ ಕಂಪನಿಯ ವಿರುದ್ಧವೂ ರಾಮದೇವ್ ಇದೇ ರೀತಿ ದಾಳಿ ನಡೆಸಿದ್ದಾರೆ. ಅಲೋಪತಿಯನ್ನು ಗುರಿಯಾಗಿಸಿಕೊಂಡಿದ್ದಕ್ಕಾಗಿ ರಾಮದೇವ್ ಅವರು ಈ ಹಿಂದೆ ಸುಪ್ರೀಂ ಕೋರ್ಟ್‌ನಿಂದ ದಂಡನೆಗೆ ಒಳಗಾಗಿದ್ದರು ಎನ್ನುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಅಲ್ಲದೆ, ಆಗ ತಾವು ಸರಿಯಲ್ಲದ ಪಕ್ಷಕಾರರನ್ನು ಪ್ರತಿನಿಧಿಸಿದ್ದಾಗಿ ಲಘು ಧಾಟಿಯಲ್ಲಿ ಹೇಳಿದರು.