Supreme Court, West Bengal  
ಸುದ್ದಿಗಳು

ಎಸ್ಐಆರ್‌ಗೆ ವಿರೋಧ: ಡಿಎಂಕೆ ಬಳಿಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ. ಬಂಗಾಳ ಕಾಂಗ್ರೆಸ್

ಬಿಹಾರ ಎಸ್ಐಆರ್ ಪ್ರಕರಣದ ಜೊತೆಗೆ ನಾಳೆ ( ಮಂಗಳವಾರ) ಪ್ರಕರಣ ಆಲಿಸಲು ನ್ಯಾಯಾಲಯ ಸಮ್ಮತಿಸಿತು.

Bar & Bench

ಪಶ್ಚಿಮ ಬಂಗಾಳದಲ್ಲಿ ಭಾರತೀಯ ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆಗೆ (ಎಸ್‌ಐಆರ್‌) ಆದೇಶಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್‌ ಪಕ್ಷದ ರಾಜ್ಯ ಘಟಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಪಕ್ಷದ ಪರ ವಕೀಲರ ಕೋರಿಕೆಯಂತೆ ಬಿಹಾರ ಎಸ್ಐಆರ್ ಪ್ರಕರಣದ ಜೊತೆಗೆ ನಾಳೆ ( ಮಂಗಳವಾರ) ಪ್ರಕರಣ ಪಟ್ಟಿ ಮಾಡಲು ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರಿದ್ದ ಪೀಠ ನಿರ್ಧಿರಿಸಿದೆ.

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಲೋಪ ಇರುವುದನ್ನು ಉಲ್ಲೇಖಿಸಿ ಜನ ತನ್ನನ್ನು ಸಂಪರ್ಕಿಸುತ್ತಿರುವುದರಿಂದ ತಾನು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಪಕ್ಷ ತಿಳಿಸಿದೆ.

ಇಸಿಐ ಕಳೆದ ಜೂನ್‌ನಲ್ಲಿ ವಿಶೇಷ ಆಮೂಲಾಗ್ರ ಪರಿಷ್ಕರಣೆಗೆ ನಿರ್ದೇಶಿಸಿತ್ತು. ಆದೇಶ ಪ್ರಶ್ನಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ನ್ಯಾಷನಲ್ ಫೆಡರೇಶನ್ ಫಾರ್ ಇಂಡಿಯನ್ ವುಮೆನ್ ಸೇರಿದಂತೆ ಹಲವು ವ್ಯಕ್ತಿಗಳು ಸಂಘ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಎದುರು ನೋಡುತ್ತಿವೆ.

ಆದರೂ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡದ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಎಸ್‌ಐಆರ್‌ಗೆ ಚಾಲನೆ ದೊರೆತಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದ್ದರೂ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌ ನಡೆಸುವಂತೆ ಇಸಿಐ ಅಕ್ಟೋಬರ್ 27, 2025ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ತಮಿಳುನಾಡಿನ ಡಿಎಂಕೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.