ರಾಜ್ಯ ವಕೀಲರ ಪರಿಷತ್ ಚುನಾವಣೆಯ ನಾಮಪತ್ರ ಶುಲ್ಕ ಹೆಚ್ಚಳ ವಿರೋಧಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೇರಳ ಹೈಕೋರ್ಟ್ ಏಕಸದಸ್ಯ ಪೀಠ ಮಾಡಿದ್ದ ಕೆಲ ಮೌಖಿಕ ಟಿಪ್ಪಣಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಭಾರತೀಯ ವಕೀಲರ ಪರಿಷತ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರಿಗೆ ಪತ್ರ ಬರೆದಿದೆ.
ಈ ಟೀಕೆ ಆಧಾರರಹಿತ ಮತ್ತು ಅಜಾಗರೂಕವಾದುದು ಎಂದು ಬಿಸಿಐ ಅಧ್ಯಕ್ಷ ಹಾಗೂ ಹಿರಿಯ ವಕೀಲರಾದ ಮನನ್ ಕುಮಾರ್ ಮಿಶ್ರಾ ಅವರ ಪತ್ರ ತಿಳಿಸಿದೆ. ಇಂತಹ ಹೇಳಿಕೆಗಳು ವಕೀಲ ವರ್ಗ ಮತ್ತು ನ್ಯಾಯಿಕ ಸಮುದಾಯದ ನಡುವಿನ ಸಂವಿಧಾನಾತ್ಮಕ ಸಮತೋಲನವನ್ನು ಕದಡಿವೆ ಎಂದು ಅದು ಹೇಳಿದೆ.
ವಕೀಲರ ಪರಿಷತ್ ಚುನಾವಣೆಗೆ ಸಂಬಂಧಿಸಿದ ವಿಚಾರಗಳನ್ನು ಯಾವುದೇ ನ್ಯಾಯಾಲಯಗಳು ನಡೆಸಬಾರದು ಎಂದು ಸುಪ್ರೀಂ ಕೋರ್ಟ್‌ನ ಸ್ಪಷ್ಟ ನಿರ್ದೇಶನವಿದ್ದರೂ ಕೇರಳ ಹೈಕೋರ್ಟ್ ವಿಚಾರಣೆ ನಡೆಸಿರುವುದನ್ನು ಬಿಸಿಐ ಪ್ರಶ್ನಿಸಿದೆ.
ಇಂತಹ ಆಧಾರರಹಿತ ದಾಳಿಗಳು ಮುಂದುವರೆದರೆ, ಸಂಸ್ಥಾತ್ಮಕ ಸಮತೋಲನ ಮತ್ತು ಸಾರ್ವಜನಿಕ ವಿಶ್ವಾಸವನ್ನು ಕುಂದಿಸುತ್ತಿರುವುದಾಗಿ ಕಂಡುಬರುವ ನ್ಯಾಯಾಧೀಶರ ವರ್ಗಾವಣೆಗೆ ಕ್ರಮವಹಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಪರಿಸ್ಥಿತಿ ತನಗೆ ಅನಿವಾರ್ಯವಾಗಲಿದೆ ಎಂದು ಕೂಡಾ ಬಿಸಿಐ ಎಚ್ಚರಿಕೆ ನೀಡಿದೆ.
ಚುನಾವಣೆಗೆ ಸಂಬಂಧಿಸಿದ ವಿಚಾರಗಳು ಸುಪ್ರೀಂ ಕೋರ್ಟ್ ರಚಿಸಿರುವ ವಿಶೇಷ ವ್ಯವಸ್ಥೆಯ ವ್ಯಾಪ್ತಿಯಲ್ಲಿಯೇ ಇರಬೇಕು. ಅನಗತ್ಯ ಸಂಘರ್ಷ ತಪ್ಪಿಸಲು ನ್ಯಾಯಾಂಗ ಸಂಯಮ ಕಾಯ್ದುಕೊಳ್ಳಬೇಕು. ಈ ಸಂಬಂಧ ನಿರ್ದೇಶನಗಳನ್ನು ನೀಡುವಂತೆ ಸಿಜೆಐ ಅವರನ್ನು ಪತ್ರ ಕೋರಿದೆ.
ಸುಪ್ರೀಂ ಕೋರ್ಟ್ ನೇರ ಮೇಲ್ವಿಚಾರಣೆಯಡಿಯಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಯ ಸಮಯದಲ್ಲಿ ಬಿಡುಬೀಸಾದ ಮತ್ತು ಸಾಮಾನ್ಯೀಕೃತ ಟಿಪ್ಪಣಿಗಳನ್ನು ಮಾಡುವುದು, ಸಂಸ್ಥೆಗಳ ನಡುವಿನ ಅನಗತ್ಯ ಉದ್ವಿಗ್ನತೆಗೆ ಕಾರಣವಾಗಬಹುದು ಎಂದು ಪರಿಷತ್ ಎಚ್ಚರಿಕೆ ನೀಡಿದೆ.
ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ₹5,000 ಇದ್ದ ನಾಮಪತ್ರ ಶುಲ್ಕವನ್ನು ₹1.25 ಲಕ್ಷಕ್ಕೆ ಅಂದರೆ ಸುಮಾರು ಶೇ 2,400ರಷ್ಟು ಹೆಚ್ಚಳ ಮಾಡಿದ ಬಿಸಿಐ ನಿರ್ಧಾರ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆಯ ವೇಳೆ ಏಕಸದಸ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಬಿಸಿಐ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.