Supreme Court
Supreme Court 
ಸುದ್ದಿಗಳು

ಸಂತ್ರಸ್ತೆ ಆತ್ಮಾಹುತಿ ಪ್ರಕರಣ: ಮಹಿಳೆ ಅಗ್ನಿ ಪರೀಕ್ಷೆ ಎದುರಿಸಬೇಕಿರುವುದು ನಾಚಿಕೆಗೇಡು ಎಂದು ಸಿಜೆಐಗೆ ಪತ್ರ

Bar & Bench

ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಲೋಕಸಭಾ ಸದಸ್ಯ ಅತುಲ್‌ ರೈ ವಿರುದ್ಧದ ಅತ್ಯಾಚಾರ ಆರೋಪದ ಕುರಿತು ಹೊಸದಾಗಿ ತನಿಖೆ ನಡೆಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತೆ ಯೋಗಿತಾ ಭಯಾನಾ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರಿಗೆ ಪತ್ರ ಬರೆದಿದ್ದಾರೆ.

ಆಗಸ್ಟ್‌ 16ರಂದು ಅತ್ಯಾಚಾರ ಸಂತ್ರಸ್ತೆ ಹಾಗೂ ಪ್ರಕರಣದ ಸಾಕ್ಷಿಯೊಬ್ಬರು ಸುಪ್ರೀಂ ಕೋರ್ಟ್‌ ಹೊರಭಾಗದಲ್ಲಿ ಆತ್ಮಾಹುತಿ ಮಾಡಿಕೊಂಡು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪತ್ರ ಬರೆಯಲಾಗಿದೆ. ತಮ್ಮ ಮನವಿಯನ್ನು ಸಾರ್ವಜನಿಕ ಹಿತಾಸಕ್ತಿ ಮನವಿ ಎಂದು ಪರಿಗಣಿಸಬೇಕು ಎಂದು ಕೋರಿರುವ ಭಯಾನಾ ಅವರು ರೈ ವಿರುದ್ಧದ ವಿಚಾರಣೆಯನ್ನು ಉತ್ತರ ಪ್ರದೇಶದಿಂದ ದೆಹಲಿಗೆ ವರ್ಗಾಯಿಸುವಂತೆಯೂ ಮನವಿ ಮಾಡಿದ್ದಾರೆ.

“ಸತ್ಯ ನುಡಿಯುತ್ತಿದ್ದೇವೆ ಎಂಬುದನ್ನು ಸಾಬೀತುಪಡಿಸಲು ನಾಗರಿಕ ಸಮಾಜದಲ್ಲಿ ಮಹಿಳೆ 21ನೇ ಶತಮಾನದಲ್ಲಿಯೂ ಅಗ್ನಿ ಪರೀಕ್ಷೆ ಎದುರಿಸಬೇಕಿರುವುದು” ಬೇಸರದ ಸಂಗತಿಯಾಗಿದ್ದು, ನಾಚಿಕೆಯಿಂದ ಇಡೀ ದೇಶ ತಲೆತಗ್ಗಿಸುವಂತಾಗಿದೆ ಎಂದು ಭಯಾನಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಂಸದ ರೈ ಅವರ ವಿರುದ್ಧ ಸಂತ್ರಸ್ತೆಯು ಅತ್ಯಾಚಾರ, ಅಶ್ಲೀಲ ಚಿತ್ರ ತೆಗೆದಿರುವುದು ಮತ್ತು ತನ್ನನ್ನು ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ವಾರಾಣಸಿಯಲ್ಲಿ ಯುವ ನಾಯಕಿಯಾಗಿ ಬೆಳೆಯಲು ಸಹಾಯ ಮಾಡುವುದಾಗಿ ನಂಬಿಸಿ ಆರೋಪಿಯು ಸಂತ್ರಸ್ತೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ. ರೈ ದೌರ್ಜನ್ಯದ ಬಳಿಕ ಸಂತ್ರಸ್ತೆಯು ದೂರು ದಾಖಲಿಸಿದ್ದು, ಆತ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ತನ್ನ ಸುರಕ್ಷತೆ, ಬೆದರಿಕೆ ಹಾಗೂ ಪ್ರಕರಣವನ್ನು ನ್ಯಾಯಯುತವಾಗಿ ತನಿಖೆ ನಡೆಸುವುದಿಲ್ಲ ಎಂಬ ಆತಂಕದ ಹಿನ್ನೆಲೆಯಲ್ಲಿ ಅತ್ಯಾಚಾರ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಬೇಕು ಎಂದು ಕೋರಿ ಸಂತ್ರಸ್ತೆಯು ಸುಪ್ರೀಂ ಕೋರ್ಟ್‌ಗೆ ಬಂದಿದ್ದರು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಅತ್ಯಾಚಾರ ಪ್ರಕರಣದಲ್ಲಿ ತಪ್ಪಾದ ಜನ್ಮ ದಿನಾಂಕ ಉಲ್ಲೇಖಿಸಲಾಗಿದೆ ಎಂಬ ಪ್ರತಿ ದೂರಿನ ಅನ್ವಯ ಸಂತ್ರಸ್ತೆಯ ವಿರುದ್ಧ ಜಾಮೀನು ರಹಿತ ವಾರೆಂಟ್‌ ಜಾರಿಗೊಳಿಸಿದ್ದರಿಂದ ಭಯಭೀತರಾಗಿ ಸಂತ್ರಸ್ತೆ ಹಾಗೂ ಪ್ರಕರಣದ ಸಾಕ್ಷಿಯು ಡೀಸೆಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗಿದೆ.

ಅತ್ಯಾಚಾರ ಸಂತ್ರಸ್ತರಿಗೆ ಬೆಂಬಲ ಮತ್ತು ಅವರಿಗೆ ನ್ಯಾಯಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಭಾರತದಲ್ಲಿ ಅತ್ಯಾಚಾರ ವಿರೋಧಿಸುವ ಜನರು (ಪಿಎಆರ್‌ಐ) ಸಂಸ್ಥೆಯ ಮುಖ್ಯಸ್ಥೆಯಾಗಿ ಭಯಾನಾ ಕೆಲಸ ಮಾಡುತ್ತಿದ್ದಾರೆ.

ಅಡ್ವೊಕೇಟ್‌ ಆನ್‌ ರೆಕಾರ್ಡ್‌ನ ವಕೀಲ ಅಲಖ್‌ ಅಲೋಕ್‌ ಶ್ರೀವಾಸ್ತವ ಅವರು ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಕೋರಿದ್ದಾರೆ. “ಆತ್ಮಾಹುತಿ ಮಾಡಿಕೊಂಡಿರುವ ಸಂತ್ರಸ್ತೆಯ ನಿರ್ಧಾರಕ್ಕೆ ನನ್ನ ವಿರೋಧವಿದೆ. ಆದರೆ, ಗೌರವಾನ್ವಿತ ಸುಪ್ರೀಂ ಕೋರ್ಟ್‌ ಬಾಗಿಲ ಮುಂದೆ ನಡೆದ ಘಟನೆಯ ಹೊರತಾಗಿಯೂ ಆಕೆಗೆ ನ್ಯಾಯ ದೊರೆಯಬೇಕು ಎಂಬುದು ನನ್ನ ಬಲವಾದ ನಂಬುಗೆಯಾಗಿದೆ” ಎಂದು ಹೇಳಿದ್ದಾರೆ.