Agnipath Scheme 
ಸುದ್ದಿಗಳು

ಅಗ್ನಿಪಥ್ ಯೋಜನೆ ಪ್ರಶ್ನಿಸಿದ್ದ ಅರ್ಜಿ: ಜುಲೈ 20ಕ್ಕೆ ವಿಚಾರಣೆ ನಡೆಸಲಿರುವ ದೆಹಲಿ ಹೈಕೋರ್ಟ್

ಭಾರತೀಯ ನೌಕಾಪಡೆ ಮತ್ತು ವಾಯುಪಡೆಯಲ್ಲಿನ ನೇಮಕಾತಿ ಪ್ರಕ್ರಿಯೆಗಳನ್ನು ಪ್ರಶ್ನಿಸುವ ಎರಡು ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇದೆ.

Bar & Bench

ಕೇವಲ ನಾಲ್ಕು ವರ್ಷಗಳ ಅವಧಿಗೆ ಯುವಕರನ್ನು ಸಶಸ್ತ್ರ ಪಡೆಗಳ ಸೇವೆಗೆ ಸೇರಿಸಿಕೊಳ್ಳುವ ಅಗ್ನಿಪಥ್‌ ಯೋಜನೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ದೆಹಲಿ ಹೈಕೋರ್ಟ್‌ ಜುಲೈ 20ಕ್ಕೆ ನಡೆಸಲಿದೆ.

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ಪೀಠ ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಶ್ನಿಸಿ 2021ರಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿತ್ತು.

ಆಗ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ಅಗ್ನಿಪಥ್ ಯೋಜನೆಯನ್ನು ಪ್ರಶ್ನಿಸುವ ಇದೇ ರೀತಿಯ ಅರ್ಜಿಗಳು ಈಗಾಗಲೇ ನ್ಯಾಯಾಲಯದ ಮುಂದೆ ಬಾಕಿ ಉಳಿದಿದ್ದು ಅವುಗಳನ್ನೂ ಒಟ್ಟಿಗೆ ಆಲಿಸಬೇಕು” ಎಂದು ಕೋರಿದರು. ಎರಡೂ ಬಗೆಯ ಅರ್ಜಿಗಳಿಗೆ ಪರಸ್ಪರ ಸಂಬಂಧ ಇದ್ದು ಅವುಗಳನ್ನು ಒಟ್ಟಿಗೆ ವಿಚಾರಣೆಗೆ ಪರಿಗಣಿಸಬೇಕು ಎಂದು ಅವರು ತಿಳಿಸಿದರು.

ಭಾರತೀಯ ನೌಕಾಪಡೆ ಮತ್ತು ವಾಯುಪಡೆಯಲ್ಲಿನ ನೇಮಕಾತಿ ಪ್ರಕ್ರಿಯೆಗಳನ್ನು ಪ್ರಶ್ನಿಸುವ ಎರಡು ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇದೆ. ತಮ್ಮ ನೇಮಕಾತಿಯನ್ನು 2019ರ ಅಧಿಸೂಚನೆಯ ಪ್ರಕಾರ ಮಾಡಬೇಕು ಎಂದು ಒತ್ತಾಯಿಸಿ ಭಾರತೀಯ ವಾಯುಪಡೆಗೆ (IAF) ಆಯ್ಕೆಯಾದ ಏರ್‌ಮೆನ್‌ಗಳು ಸಲ್ಲಿಸಿದ್ದು ಒಂದು ಅರ್ಜಿಯಾದರೆ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಧಿಕಾರಿ ಶ್ರೇಣಿಗಿಂತ ಕೆಳಗಿರುವ ಸಿಬ್ಬಂದಿ ಆಯ್ಕೆ ಮಾನದಂಡಕ್ಕೆ (PBORs) ಸಂಬಂಧಿಸಿದ್ದಾಗಿದೆ.