Agnipath Scheme 
ಸುದ್ದಿಗಳು

ಅಗ್ನಿಪಥದಿಂದ ಸೇನಾಪಡೆಗಳಿಗೆ ಯುವಚೈತನ್ಯ, ಸಮಾಜಕ್ಕೆ ಕುಶಲ ಮಾನವಶಕ್ತಿ: ದೆಹಲಿ ಹೈಕೋರ್ಟ್‌ನಲ್ಲಿ ಕೇಂದ್ರದ ಪ್ರತಿಪಾದನೆ

ನೂತನ 'ಅಗ್ನಿಪಥ್ ಯೋಜನೆ' ಮೂಲಕ ನೇಮಕಾತಿ ನಡೆಸುವ ನಿರ್ಧಾರ ರಾಷ್ಟ್ರೀಯ ಭದ್ರತಾ ಕಾರಣಗಳಿಗಾಗಿ ತೆಗೆದುಕೊಂಡ ನೀತಿ ನಿರ್ಧಾರವಾಗಿದೆ ಎಂದು ತಿಳಿಸಿದ ಸರ್ಕಾರ.

Bar & Bench

ಸೇನೆ, ವಾಯುಪಡೆ ಹಾಗೂ ನೌಕಾಪಡೆ ನೇಮಕಾತಿಗಾಗಿ ರೂಪಿಸಲಾದ ಅಗ್ನಿಪಥ್ ಯೋಜನೆಯು ಸೇನಾಪಡೆಗಳಿಗೆ ಯುವಚೈತನ್ಯವನ್ನು ತರಲಿದ್ದು ತಮ್ಮ ಸೇವಾವಧಿಯ ನಂತರ ಈ ಅಗ್ನಿವೀರರು ಸಮಾಜಕ್ಕೆ ರಾಷ್ಟ್ರೀಯವಾದಿ, ಶಿಸ್ತುಬದ್ಧ, ಕೌಶಲ್ಯಪೂರ್ಣ ಮಾನವಶಕ್ತಿಯಾಗಿ ಲಭ್ಯವಾಗಲಿದ್ದಾರೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಸಶಸ್ತ್ರ ಪಡೆಗಳಲ್ಲಿ ನೇಮಕಾತಿ ಅತ್ಯಗತ್ಯ ಸಾರ್ವಭೌಮ ಕಾರ್ಯವಾಗಿದ್ದು ಹೊಸ 'ಅಗ್ನಿಪಥ್ ಯೋಜನೆ' ಮೂಲಕ ಈ ನೇಮಕಾತಿ ನಡೆಸುವ ನಿರ್ಧಾರ ರಾಷ್ಟ್ರೀಯ ಭದ್ರತಾ ಕಾರಣಗಳಿಗಾಗಿ ತೆಗೆದುಕೊಂಡ ನೀತಿ ನಿರ್ಧಾರದ ಭಾಗವಾಗಿದ ಎಂದು ಸರ್ಕಾರ ಅಫಿಡವಿಟ್‌ನಲ್ಲಿ ವಿವರಿಸಿದೆ.

ಆಧುನಿಕ ಯುದ್ಧದಲ್ಲಿ ಬಳಸಲಾಗುವ ತಂತ್ರಜ್ಞಾನ ಮತ್ತು ಕೌಶಲ್ಯಗಳಲ್ಲಿ ಅಗಾಧ ಬದಲಾವಣೆಯಾಗಿದೆ. ಹೊಸ ಮಿಲಿಟರಿ ತಂತ್ರಜ್ಞಾನಗಳು ತ್ವರಿತ ಗತಿಯಲ್ಲಿ ಹೊರಹೊಮ್ಮುತ್ತಿರುವ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಸಮಯ-ಪರೀಕ್ಷಿತ ಸಾಂಪ್ರದಾಯಿಕ ವ್ಯವಸ್ಥೆ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಇದು ಸಶಸ್ತ್ರ ಪಡೆಗಳ ಒಟ್ಟಾರೆ ಸಂಘಟನೆಯಲ್ಲಿ ರಚನಾತ್ಮಕ ಬದಲಾವಣೆಗಳನ್ನು ಅಗತ್ಯವಾಗಿ ತರಲಿದೆ ಎಂದು ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ.

ಅಗ್ನಿಪಥ್ ಯೋಜನೆಯ ಸಾಂವಿಧಾನಿಕ ಸಿಂಧುತ್ವ ಮತ್ತು ಒಟ್ಟಾರೆಯಾಗಿ ಸಶಸ್ತ್ರ ಪಡೆಗಳಿಗೆ ನೇಮಕಾತಿ ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ವಿವಿಧ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಸರ್ಕಾರ ಈ ಪ್ರತಿಕ್ರಿಯೆ ನೀಡಿದೆ. ಅರ್ಜಿಗಳನ್ನು ದೆಹಲಿ ಹೈಕೋರ್ಟ್ ವಿಭಾಗೀಯ ಪೀಠ ಇಂದು (ಬುಧವಾರ) ವಿಚಾರಣೆ ನಡೆಸಲಿದೆ.

ಯೋಜನೆ ನಾಲ್ಕು ವರ್ಷಗಳ ಕಾಲ ಯುವಕರನ್ನು ಸೈನ್ಯಕ್ಕೆ ಸೇರಿಸಿಕೊಳ್ಳಲು ಪ್ರಸ್ತಾಪಿಸಿದ್ದು ನಂತರ ಕೇವಲ ಶೇ 25ರಷ್ಟು ಅಗ್ನಿವೀರರು ಮಾತ್ರ ಭಾರತೀಯ ಸೇನೆಯಲ್ಲಿ ಮುಂದುವರೆಯಲಿದ್ದು ಉಳಿದವರು ನಿರ್ಗಮಿಸಬೇಕಾಗುತ್ತದೆ. ಯೋಜನೆ ಜಾರಿಗೊಳಿಸಿದ್ದು ದೇಶದೆಲ್ಲೆಡೆ ವ್ಯಾಪಕ ಪ್ರತಿಭಟನೆ ನಡೆಯಲು ಕಾರಣವಾಯಿತು. ಅವುಗಳಲ್ಲಿ ಕೆಲವು ಹಿಂಸಾಚಾರಕ್ಕೂ ತಿರುಗಿದ್ದವು. ಇದರಿಂದಾಗಿ ವಿವಿಧ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಲಾಯಿತು.

ಕಳೆದ ಜುಲೈನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತನಗೆ ಸಲ್ಲಿಸಿದ ಅರ್ಜಿ ಸೇರಿದಂತೆ ದೇಶದ ವಿವಿಧ ಹೈಕೋರ್ಟ್‌ಗಳಿಗೆ ಸಲ್ಲಿಸಿರುವ ಮನವಿಗಳನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸುವಂತೆ ಸೂಚಿಸಿತ್ತು.