ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಆರೋಪಿ ಬ್ರಿಟಿಷ್ ಪ್ರಜೆ ಕ್ರಿಶ್ಚಿಯನ್ ಮಿಶೆಲ್‌ಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ನೀಡಿದೆ [ಕ್ರಿಶ್ಚಿಯನ್ ಜೇಮ್ಸ್ ಮಿಶೆಲ್ ಮತ್ತು ಸಿಬಿಐ ನಡುವಣ ಪ್ರಕರಣ].
ಸೆಪ್ಟೆಂಬರ್ 2024ರಲ್ಲಿ ದೆಹಲಿ ಹೈಕೋರ್ಟ್ ಮಿಶೆಲ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮಿಶೆಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಅರ್ಜಿ ಪುರಸ್ಕರಿಸಿತು.
ಮಿಶೆಲ್ ಪರವಾಗಿ ವಕೀಲರಾದ ಅಲ್ಜೋ ಜೋಸೆಫ್, ಶ್ರೀರಾಮ್ ಪರಾಕ್ಕಟ್ ಮತ್ತು ಎಂ ಎಸ್ ವಿಷ್ಣು ಶಂಕರ್ ವಾದ ಮಂಡಿಸಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಹಾಜರಾಗಿದ್ದರು.
ಮಿಶೆಲ್‌ನನ್ನು ಡಿಸೆಂಬರ್ 2018ರಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಅಂದಿನಿಂದ ಆತ ಜೈಲಿನಲ್ಲಿದ್ದಾನೆ.
ಬ್ರಿಟಿಷ್ ಪ್ರಜೆಯಾಗಿರುವ ಮಿಶೆಲ್, ಭಾರತ ಸರ್ಕಾರ ವಿವಿಐಪಿ ಹೆಲಿಕಾಪ್ಟರ್ ಖರೀದಿಯಲ್ಲಿ ಪಡೆದ 42.27 ದಶಲಕ್ಷ ಯುರೋಗಳ ಅಕ್ರಮ ಕಮಿಷನ್ ಕಾನೂನುಬದ್ಧಗೊಳಿಸಲು ಆಂಗ್ಲೋ ಇಟಾಲಿಯನ್ ಹೆಲಿಕಾಪ್ಟರ್ ತಯಾರಿಕಾ ಕಂಪೆನಿ ಅಗಸ್ಟಾ ವೆಸ್ಟ್‌ಲ್ಯಾಂಡ್ ಜೊತೆ ಹನ್ನೆರಡು ಒಪ್ಪಂದಗಳನ್ನು ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.
ಇಂಗ್ಲೆಂಡ್ ಮತ್ತು ಅರಬ್ ಸಂಯುಕ್ತ ಸಂಸ್ಥಾನಗಳಲ್ಲಿನ ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಲಾದ ಲಂಚದ ಮೊತ್ತ 33 ಮಿಲಿಯನ್ ಅಮೆರಿಕನ್ ಡಾಲರ್ ಎಂದು ಸಿಬಿಐ ಅಂದಾಜಿಸಿತ್ತು.
ಸೆಪ್ಟೆಂಬರ್ 25, 2024 ರಂದು ದೆಹಲಿ ಹೈಕೋರ್ಟ್ ಮಿಶೆಲ್‌ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಹೀಗಾಗಿ ಆತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.