Waqf Amendment Act 
ಸುದ್ದಿಗಳು

ನಿವೃತ್ತಿ ಹಿನ್ನೆಲೆ: ವಕ್ಫ್ ತಿದ್ದುಪಡಿ ಕಾಯಿದೆ ಪ್ರಕರಣವನ್ನು ನ್ಯಾ. ಗವಾಯಿ ಪೀಠಕ್ಕೆ ವರ್ಗಾಯಿಸಿದ ಸಿಜೆಐ ಖನ್ನಾ

ಸಿಜೆಐ ಖನ್ನಾ ಅವರು ಮೇ 13ರಂದು ನಿವೃತ್ತರಾಗಲಿದ್ದು ಪ್ರಕರಣಕ್ಕೆ ದೀರ್ಘ ವಿಚಾರಣೆ ಅಗತ್ಯವಿರುವುದರಿಂದ ಈ ಬೆಳವಣಿಗೆ ನಡೆದಿದೆ ಎಂದು ತಿಳಿದುಬಂದಿದೆ.

Bar & Bench

ವಕ್ಫ್ (ತಿದ್ದುಪಡಿ) ಕಾಯಿದೆ- 2025 ಅನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ಹಾಲಿ ಸಿಜೆಐ ಸಂಜೀವ್‌ ಖನ್ನಾ ನೇತೃತ್ವದ ಪೀಠ ವಿಚಾರಣೆ ನಡೆಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಬದಲಿಗೆ ನ್ಯಾಯಮೂರ್ತಿ (ಭಾವಿ ಸಿಜೆಐ) ಬಿ ಆರ್ ಗವಾಯಿ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ. ಸಿಜೆಐ ಖನ್ನಾ ಅವರು ಮೇ 13ರಂದು ನಿವೃತ್ತರಾಗಲಿದ್ದು ಪ್ರಕರಣಕ್ಕೆ ದೀರ್ಘ ವಿಚಾರಣೆ ಅಗತ್ಯವಿರುವುದರಿಂದ ಈ ಬೆಳವಣಿಗೆ ನಡೆದಿದೆ ಎಂದು ತಿಳಿದುಬಂದಿದೆ.

“ನಾವು ಪ್ರತಿವಾದ ಮತ್ತು ಪ್ರತ್ಯುತ್ತರಗಳನ್ನು ಗಮನಿಸಿದ್ದೇವೆ. ನೋಂದಣಿಗೆ ಸಂಬಂಧಿಸಿದಂತೆ ಕೆಲ ಅಂಶಗಳನ್ನು ಪ್ರಸ್ತಾಪಿಸಲಾಗಿದ್ದು ಅರ್ಜಿದಾರರು ತಕಾರಾರು ತೆಗೆದ ಕೆಲ ಅಂಕಿ ಅಂಶಗಳಿವೆ. ಇದರ ವಿಚಾರಣೆ ನಡೆಯಬೇಕಿದೆ. ಗಮನಸೆಳೆಯಬೇಕಾದ ಎರಡು ವಿಷಯಗಳಿವೆ. ಮಧ್ಯಂತರ ಹಂತದಲ್ಲಿಯೂ ಸಹ ನಾನು ಯಾವುದೇ ತೀರ್ಪು ಅಥವಾ ಆದೇಶ ಕಾಯ್ದಿರಿಸಲು ಇಚ್ಛಿಸುವುದಿಲ್ಲ. ಪ್ರಕರಣವನ್ನು ಸೂಕ್ತ ದಿನದಂದು ವಿಚಾರಣೆ ನಡೆಸಬೇಕಿದೆ. ನಾನು ಅದರ ವಿಚಾರಣೆ ನಡೆಸುವುದಿಲ್ಲ. ಮಧ್ಯಂತರ ಮತ್ತು ಅಂತಿಮ ಆದೇಶಗಳಿಗಾಗಿ ನಾವು ಬುಧವಾರ ಅಥವಾ ಗುರುವಾರ ನ್ಯಾಯಮೂರ್ತಿ (ಬಿ ಆರ್) ಗವಾಯಿ ಅವರಿರುವ ಪೀಠಕ್ಕೆ ರವಾನಿಸುತ್ತೇವೆ” ಎಂದು ಸಿಜೆಐ ಖನ್ನಾ ತಿಳಿಸಿದರು.  ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್, ಕೆ ವಿ ವಿಶ್ವನಾಥನ್‌ ಅವರೂ ಪೀಠದಲ್ಲಿದ್ದರು.   

"ಪ್ರತಿಯೊಂದು ವಿವಾದಕ್ಕೂ ಉತ್ತರವಿರುವುದರಿಂದ ತಾವೇ ಪ್ರಕರಣ ಆಲಿಸಲಿ ಎಂಬುದು ನಮ್ಮ ಇಚ್ಛೆಯಾಗಿತ್ತು. ಆದರೆ ಸಮಯವಿಲ್ಲದ ಕಾರಣ  ನಿಮ್ಮನ್ನು ಮುಜುಗರಕ್ಕೀಡು ಮಾಡಲು ಬಯಸುವುದಿಲ್ಲ" ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

"ಇದನ್ನು ಮುಂದಿನ ಬುಧವಾರ (ಮೇ 14) ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ಪೀಠದ ಮುಂದೆ ಪಟ್ಟಿ ಮಾಡಿ" ಎಂದು ನ್ಯಾಯಾಲಯ ಆದೇಶಿಸಿತು. ನಿವೃತ್ತಿ ಬಗ್ಗೆ ನೆನಪಿಸಿದ್ದು ನೋವಿನ ಸಂಗತಿ ಎಂದು ಮೆಹ್ತಾ ಹೇಳಿದಾಗ ಇಲ್ಲ ನಿವೃತ್ತಿಯನ್ನುಎದುರು ನೋಡುತ್ತಿರುವುದಾಗಿ ಸಿಜೆಐ ಖನ್ನಾ ಪ್ರತಿಕ್ರಿಯಿಸಿದರು.

ವಕ್ಫ್ ತಿದ್ದುಪಡಿ ಕಾಯಿದೆ ಮುಸ್ಲಿಮ್‌ ಸಮುದಾಯವನ್ನು ತಾರತಮ್ಯದಿಂದ ಕಾಣುತ್ತದೆ ಮತ್ತು ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ದೂರಿ ಸುಪ್ರೀಂ ಕೋರ್ಟ್‌ನಲ್ಲಿ ವಿವಿಧ ಅರ್ಜಿಗಳು ಸಲ್ಲಿಕೆಯಾಗಿವೆ. ಬೇರೆ ಬೇರೆ ವ್ಯಕ್ತಿಗಳು, ರಾಜಕೀಯ ಪಕ್ಷಗಳು  ಅರ್ಜಿ ಸಲ್ಲಿಸಿದ್ದಾರೆ.