ಗ್ರಾಮೀಣ ಮಟ್ಟದಲ್ಲಿ ವ್ಯಾಜ್ಯಗಳನ್ನು ಸಂಧಾನ ಮೂಲಕ ಇತ್ಯರ್ಥಪಡಿಸಲು ಗ್ರಾಮ ನ್ಯಾಯಾಲಯಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. 100 ಗ್ರಾಮ ನ್ಯಾಯಾಲಯ ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಇದನ್ನು 'ಕಾನೂನು ಮತ್ತು ನೀತಿ 2023'ರಲ್ಲಿ ಅಡಕಗೊಳಿಸಲಾಗಿದೆ.
ಪ್ರತಿ ಜಿಲ್ಲೆಯ ಆಯ್ದ 2-3 ಗ್ರಾಮಗಳಲ್ಲಿ ಜೆಎಂಎಫ್‌ಸಿ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತದೆ. ಪ್ರಸ್ತುತ ಜೆಎಂಎಫ್‌ಸಿ ನ್ಯಾಯಾಲಯಗಳಲ್ಲಿರುವಂತೆಯೇ ಗ್ರಾಮಗಳಲ್ಲಿಯೂ ನ್ಯಾಯಾಧೀಶರನ್ನು ನೇಮಿಸಲಾಗುತ್ತದೆ. ಅಲ್ಲಿ ಸಂಧಾನದ ಮೂಲಕ ವ್ಯಾಜ್ಯ ಬಗೆಹರಿಸಲಾಗುತ್ತದೆ. ಒಟ್ಟು 100 ಗ್ರಾಮ ನ್ಯಾಯಾಲಯ ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಇದು ಗ್ರಾಮ ನ್ಯಾಯಾಲಯ ಕಾಯಿದೆಯ ಭಾಗವಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೆಎಂಎಫ್‌ಸಿ ನ್ಯಾಯಾಲಯ ಸ್ಥಾಪನೆಗೆ ಬೇಕಾದ ಸಿಬ್ಬಂದಿ, ಪೀಠೋಪಕರಣ ಸೇರಿ ತಗುಲುವ ವೆಚ್ಚವನ್ನು ಹೈಕೋರ್ಟ್‌ನಿಂದ ಕಾನೂನು ಇಲಾಖೆ ಸಂಗ್ರಹಿಸುತ್ತಿದೆ. ಆನಂತರ ಎಲ್ಲಾ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎನ್ನಲಾಗಿದೆ.
ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಧಿಕಾರಿ ಕಚೇರಿ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಪ್ರಕರಣಗಳ ಮೇಲ್ವಿಚಾರಣೆ ನಡೆಸಲಾಗುತ್ತದೆ. ಕಾನೂನು ಶಿಕ್ಷಣಕ್ಕಾಗಿ ವಕೀಲರ ಅಕಾಡೆಮಿ ಸ್ಥಾಪನೆ, ಅಗತ್ಯವಿರುವ ಕಡೆ ಮಾದರಿ ನ್ಯಾಯಾಲಯಗಳ ಸ್ಥಾಪನೆ ಮಾಡುವ ಉದ್ದೇಶವನ್ನೂ ಸರ್ಕಾರ ಹೊಂದಿದೆ.