Air India  
ಸುದ್ದಿಗಳು

ಪೈಲಟ್ ಲೋಪದಿಂದ ಏರ್ ಇಂಡಿಯಾ ಅಪಘಾತ ನಡೆಯಿತು ಎಂದರೆ ಯಾರೂ ನಂಬುವುದಿಲ್ಲ: ಸುಪ್ರೀಂ ಕೋರ್ಟ್

ದುರಂತದ ಬಗ್ಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖಾ ಸಮಿತಿ ರಚಿಸುವಂತೆ ಕ್ಯಾಪ್ಟನ್ ಸುಮೀತ್ ಸಭರವಾಲ್ ಅವರ 91 ವರ್ಷ ವಯಸ್ಸಿನ ತಂದೆ ಅರ್ಜಿ ಸಲ್ಲಿಸಿದ್ದರು.

Bar & Bench

ಕಳೆದ ಜೂನ್‌ನಲ್ಲಿ 260 ಪ್ರಯಾಣಿಕರು ಹಾಗೂ ನೆಲದ ಮೇಲಿದ್ದ 19 ಮಂದಿಯನ್ನು ಬಲಿ ಪಡೆದಿದ್ದ ಅಹಮದಾಬಾದ್‌ ಏರ್ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಪೈಲಟ್ ಕ್ಯಾಪ್ಟನ್ ಸುಮೀತ್ ಸಭರ್‌ವಾಲ್‌ ಅವರನ್ನು ಯಾರೂ ದೂಷಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.

ದುರಂತದ ಬಗ್ಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖಾ ಸಮಿತಿ ರಚಿಸುವಂತೆ ಕ್ಯಾಪ್ಟನ್ ಸುಮೀತ್ ಸಭರವಾಲ್ ಅವರ 91 ವರ್ಷ ವಯಸ್ಸಿನ ತಂದೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ನಡೆಸಿದ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಯಾವುದೇ ಕಾರಣಕ್ಕೂ ಯಾರೂ ಪೈಲಟ್‌ ಅವರನ್ನು ದೂಷಿಸಲಾಗದು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.

ಮೃತ ಪೈಲಟ್‌  ತಂದೆ ಪುಷ್ಕರಾಜ್ ಸಭರ್‌ವಾಲ್‌ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ , ಕೆಲವರು  ಪೈಲಟ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.

ಈ ಆರೋಪ ಆಧರಿಸಿದ ಲೇಖನವನ್ನು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ಪ್ರಕಟಿಸಿದೆ ಎಂದು ಅವರು ಹೇಳಿದರು. ನಾವು ಆ ಬಗ್ಗೆ ಚಿಂತಿಸುವುದಿಲ್ಲ ಎಂದು ನ್ಯಾ. ಬಾಗ್ಚಿ ಹೇಳಿದರು. ಆದರೆ ತಮ್ಮ ಕಕ್ಷಿದಾರನ ಮೃತ ಮಗನ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಶಂಕರನಾರಾಯಣನ್ ಹೇಳಿದರು.  ಆಗ ನ್ಯಾ. ಬಾಗ್ಚಿ  ಅವರು "ಹಾಗಾದರೆ ನೀವು ವಾಲ್‌ಸ್ಟ್ರೀಟ್‌ ಜರ್ನಲ್‌ ವಿರುದ್ಧ ಅಮೆರಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬೇಕು, ಇಲ್ಲಿ ಅಲ್ಲ" ಎಂದು ಹೇಳಿದರು.

ಇದು ಪೈಲಟ್ ತಪ್ಪು ಎಂದರೆ ದೇಶದ ಯಾರೂ ನಂಬುವುದಿಲ್ಲ.
ಸುಪ್ರೀಂ ಕೋರ್ಟ್

ಈ ಹಂತದಲ್ಲಿ ನ್ಯಾ. ಸೂರ್ಯಕಾಂತ್‌ ಅವರು ಇದು ಪೈಲಟ್‌ ತಪ್ಪು ಎಂದರೆ ದೇಶದ ಯಾರೂ ನಂಬುವುದಿಲ್ಲ ಎಂದರು. ಇದಕ್ಕೆ ಸಮ್ಮತಿ ವ್ಯಕ್ತಪಡಿಸುತ್ತಾ ಶಂಕರ್‌ನಾರಾಯಣ್‌ ಅವರು, ಪೈಲಟ್‌ಗಳು ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಪ್ರಚೋದನಕಾರಿ ಮಾತುಗಳು ದುಃಖಕರ ಎಂದರು. ಅಂತಿಮವಾಗಿ ನವೆಂಬರ್ 10 ರಂದು ವಿಚಾರಣೆ ನಡೆಸುವಂತೆ ಅವರು ಕೋರಿದರು.

ವಿಮಾನ ಅಪಘಾತಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ನಿಯಮಗಳಿವೆ, ಆದರೆ ಇಲ್ಲಿಯವರೆಗೆ ಅಂತಹ ಯಾವುದೇ ತನಿಖೆ ನಡೆದಿಲ್ಲ. ನಿಯಮ 9 ರ ಅಡಿಯಲ್ಲಿ ಪ್ರಾಥಮಿಕ ತನಿಖೆ ಮಾತ್ರ ನಡೆದಿದೆ ಎಂದು ಅವರು ತಿಳಿಸಿದರು.