Patiala House court 
ಸುದ್ದಿಗಳು

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ: ಶಂಕರ್ ಮಿಶ್ರಾ ಜಾಮೀನು ಮನವಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋಮಲ್ ಗಾರ್ಗ್ ಅವರು ಇಂದು ಆದೇಶ ಪ್ರಕಟಿಸಿದರು.

Bar & Bench

ಕಳೆದ ನವೆಂಬರ್‌ನಲ್ಲಿ ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್‌ ಇಂಡಿಯಾ ವಿಮಾನದ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಶಂಕರ್ ಮಿಶ್ರಾ ಜಾಮೀನು ಮನವಿಯನ್ನು ದೆಹಲಿ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.

ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋಮಲ್ ಗಾರ್ಗ್ ಅವರು ಇಂದು ಆದೇಶ ಪ್ರಕಟಿಸಿದರು.

ಇದಕ್ಕೂ ಮುನ್ನ, ಮಿಶ್ರಾ ಜಾಮೀನು ಕೋರಿಕೆಗೆ ಸರ್ಕಾರ ಮತ್ತು ದೂರುದಾರೆಯಿಂದ ಬಲವಾದ ವಿರೋಧ ವ್ಯಕ್ತವಾಯಿತು. ಮಿಶ್ರಾ ಸಾಕಷ್ಟು ಪ್ರಭಾವಶಾಲಿಯಾಗಿದ್ದು, ಅವರನ್ನು ಬಿಡುಗಡೆ ಮಾಡಿದರೆ ಪ್ರಕರಣ ದಿಕ್ಕುತಪ್ಪಲಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು. ಇತ್ತ ದೂರುದಾರೆ ಮೊದಲು ತಾನು ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡು ಕ್ಷಮೆ ಕೇಳಿದ ಆರೋಪಿ ಆನಂತರ ಅದನ್ನು ನಿರಾಕರಿಸುತ್ತಿದ್ದಾನೆ. ಕುಡಿದ ಅಮಲಿನಲ್ಲಿ ಕೃತ್ಯ ಎಸಗಿದ್ದಾಗಿ ಆರೋಪಿ ಹೇಳುತ್ತಿದ್ದು ಇದು ಎಂದಿಗೂ ಸಮರ್ಥನೆಯಾಗದು. ಆತನಿಗೆ ತಿಳಿಯದೆ ಮದ್ಯ ನೀಡಲಾಯಿತು ಎಂದೇನೂ ಆತ ಹೇಳುತ್ತಿಲ್ಲ. ಆತ ಹೊಂದಿರುವ ಪ್ರಭಾವದಿಂದಾಗಿ ಏರ್‌ ಇಂಡಿಯಾ ಎಫ್‌ಐಆರ್‌ ದಾಖಲಿಸದೆ ಇರಲು ನಿರ್ಧರಿಸಿತು. ನಾನು 28ರಂದೇ ದೂರು ನೀಡಿದ್ದರೂ ಆತ ಪ್ರಭಾವಿಯಾದ ಕಾರಣ ಎಫ್‌ಐಆರ್‌ ದಾಖಲಾಗಲು ಸಾಕಷ್ಟು ದಿನಗಳನ್ನು ತೆಗೆದುಕೊಂಡಿತು ಎಂದು ವಾದಿಸಿದರು.

“ಅಲ್ಲದೆ ಮಿಶ್ರಾ ಅವರ ತಂದೆ ತನಗೆ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಕರ್ಮ ನನ್ನ ಬೆನ್ನು ಹತ್ತುತ್ತದೆಂದು ಅವರು ಹೇಳಿ ನಂತರ ಸಂದೇಶಗಳನ್ನು ಅಳಿಸಿ ಹಾಕುತ್ತಿದ್ದಾರೆ. ಮಗನ ಬಂಧನವಾದ ದಿನ ಅವರು ಸಂದೇಶ ಕಳುಹಿಸಿದ್ದರು” ಎಂದು ದೂರುದಾರೆ ಹೇಳಿದ್ದಾರೆ. ನಿಮ್ಮ ಫೋನ್‌ ಸಂಖ್ಯೆ ಅವರಿಗೆ ಹೇಗೆ ದೊರೆಯಿತು ಎಂದು ನ್ಯಾಯಾಲಯ ಪ್ರಶ್ನಿಸಿದಾಗ ʼಏರ್‌ ಇಂಡಿಯಾ ಲೋಪದಿಂದಾಗಿ ನನ್ನ ಫೋನ್‌ ಸಂಖ್ಯೆ ಅವರಿಗೆ ದೊರೆತಿದೆ' ಎಂದು ದೂರುದಾರೆ ಹೇಳಿದರು.  

70 ವರ್ಷದ ಮಹಿಳೆಯ ಮೇಲೆ ವಿಮಾನದಲ್ಲಿ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮಿಶ್ರಾನನ್ನು ಕಳೆದ ಶುಕ್ರವಾರ ದೆಹಲಿಯಲ್ಲಿ ಬಂಧಿಸಿದ್ದರು. ಜನವರಿ 8ರಂದು ಮಿಶ್ರಾನನ್ನು ಪೊಲೀಸ್‌ ಕಸ್ಟಡಿಗೆ ನೀಡಲು ನಿರಾಕರಿಸಿದ್ದ ನ್ಯಾಯಾಲಯವು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.