ಕಳೆದ ನವೆಂಬರ್‌ನಲ್ಲಿ ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಶಂಕರ್ ಮಿಶ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶವನ್ನು ದೆಹಲಿ ನ್ಯಾಯಾಲಯ ಬುಧವಾರ ಕಾಯ್ದಿರಿಸಿದೆ.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋಮಲ್ ಗಾರ್ಗ್ ಅವರು ಇಂದು ಪ್ರಕರಣವನ್ನು ಆಲಿಸಿ ತಮ್ಮ ನಿರ್ಧಾರವನ್ನು ಕಾಯ್ದಿರಿಸಿದ್ದಾರೆ.
ಮಿಶ್ರಾ ಜಾಮೀನು ಕೋರಿಕೆಗೆ ಸರ್ಕಾರ ಮತ್ತು ದೂರುದಾರೆಯಿಂದ ಬಲವಾದ ವಿರೋಧ ವ್ಯಕ್ತವಾಯಿತು. ಮಿಶ್ರಾ ಸಾಕಷ್ಟು ಪ್ರಭಾವಶಾಲಿಯಾಗಿದ್ದು, ಅವರನ್ನು ಬಿಡುಗಡೆ ಮಾಡಿದರೆ ಪ್ರಕರಣ ದಿಕ್ಕುತಪ್ಪಲಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು. ಇತ್ತ ದೂರುದಾರೆ ಮೊದಲು ತಾನು ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡು ಕ್ಷಮೆ ಕೇಳಿದ ಆರೋಪಿ ಆನಂತರ ಅದನ್ನು ನಿರಾಕರಿಸುತ್ತಿದ್ದಾನೆ. ಕುಡಿದ ಅಮಲಿನಲ್ಲಿ ಕೃತ್ಯ ಎಸಗಿದ್ದಾಗಿ ಆರೋಪಿ ಹೇಳುತ್ತಿದ್ದು ಇದು ಎಂದಿಗೂ ಸಮರ್ಥನೆಯಾಗದು. ಆತನಿಗೆ ತಿಳಿಯದೆ ಮದ್ಯ ನೀಡಲಾಯಿತು ಎಂದೇನೂ ಆತ ಹೇಳುತ್ತಿಲ್ಲ. ಆತ ಹೊಂದಿರುವ ಪ್ರಭಾವದಿಂದಾಗಿ ಏರ್ ಇಂಡಿಯಾ ಎಫ್‌ಐಆರ್ ದಾಖಲಿಸದೆ ಇರಲು ನಿರ್ಧರಿಸಿತು. ನಾನು 28ರಂದೇ ದೂರು ನೀಡಿದ್ದರೂ ಆತ ಪ್ರಭಾವಿಯಾದ ಕಾರಣ ಎಫ್‌ಐಆರ್ ದಾಖಲಾಗಲು ಸಾಕಷ್ಟು ದಿನಗಳನ್ನು ತೆಗೆದುಕೊಂಡಿತು ಎಂದು ವಾದಿಸಿದರು.
“ಅಲ್ಲದೆ ಮಿಶ್ರಾ ಅವರ ತಂದೆ ತನಗೆ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಕರ್ಮ ನನ್ನ ಬೆನ್ನು ಹತ್ತುತ್ತದೆಂದು ಅವರು ಹೇಳಿ ನಂತರ ಸಂದೇಶಗಳನ್ನು ಅಳಿಸಿ ಹಾಕುತ್ತಿದ್ದಾರೆ. ಮಗನ ಬಂಧನವಾದ ದಿನ ಅವರು ಸಂದೇಶ ಕಳುಹಿಸಿದ್ದರು” ಎಂದು ದೂರುದಾರೆ ಹೇಳಿದ್ದಾರೆ. ನಿಮ್ಮ ಫೋನ್ ಸಂಖ್ಯೆ ಅವರಿಗೆ ಹೇಗೆ ದೊರೆಯಿತು ಎಂದು ನ್ಯಾಯಾಲಯ ಪ್ರಶ್ನಿಸಿದಾಗ ʼಏರ್ ಇಂಡಿಯಾ ಲೋಪದಿಂದಾಗಿ ನನ್ನ ಫೋನ್ ಸಂಖ್ಯೆ ಅವರಿಗೆ ದೊರೆತಿದೆ' ಎಂದು ದೂರುದಾರೆ ಹೇಳಿದರು.
ಆದರೆ ಮಿಶ್ರಾ ಪರ ವಕೀಲರು ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದರು. ಫೋನ್ ನಂಬರ್ ಆರೋಪಿಯ ತಂದೆಯದ್ದಲ್ಲ ಎಂದರು. ಅರ್ನೇಶ್ ಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ತಿಳಿಸಿರುವಂತೆ ಬಂಧನಕ್ಕೆ ಮಾರ್ಗಸೂಚಿಗಳನ್ನು ಅನುಸರಿಸದ ಕಾರಣ ಮಿಶ್ರಾ ಅವರಿಗೆ ಜಾಮೀನು ನೀಡಬೇಕೆಂದು ಕೋರಿದರು. ತಮ್ಮ ಕಕ್ಷೀದಾರ ಮಿಶ್ರಾ ಅವರು ಏರ್ ಇಂಡಿಯಾ ಆರಂಭಿಸಿದ ವಿಚಾರಣೆಯಿಂದ ನುಣುಚಿಕೊಳ್ಳಲು ಯತ್ನಿಸಿಲ್ಲ. ಹೀಗಿರುವಾಗ ಅವರ ವಿರುದ್ಧ ಬಂಧನ ರಹಿತ ವಾರೆಂಟ್ ಹೊರಡಿಸುವ ಅಗತ್ಯವಾದರೂ ಏನು ಎಂದು ಪ್ರಶ್ನಿಸಿದರು.