ಕಳೆದ ಫೆಬ್ರುವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಫೇಸ್‌ಬುಕ್ ಭಾರತದ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಅವರಿಗೆ ದೆಹಲಿ ಸರ್ಕಾರದ “ಶಾಂತಿ ಮತ್ತು ಸಾಮರಸ್ಯ ಸಮಿತಿ” ನೋಟಿಸ್ ಜಾರಿಗೊಳಿಸಿರುವುದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಬುಧವಾರ ಸುಪ್ರೀಂ ಕೋರ್ಟ್ ಸಮಿತಿಗೆ ನೋಟಿಸ್ ಜಾರಿ ಮಾಡಿದೆ.
ಮುಂದಿನ ಆದೇಶದ ವರೆಗೆ ಯಾವುದೇ ಸಭೆ ನಡೆಸದಂತೆ ಸಮಿತಿಗೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಸೂಚಿಸಿದೆ. ಅಕ್ಟೋಬರ್ 15ಕ್ಕೆ ವಿಚಾರಣೆ ಮುಂದೂಡಲಾಗಿದೆ.
ಅಜಿತ್ ಮೋಹನ್ ಪರ ವಾದಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಚುನಾಯಿತ ಜನಪ್ರತಿನಿಧಿಗಳ ಹಕ್ಕು ಇಂಥ ತನಿಖೆಗಳಿಗೆ ಸಂಬಂಧಿಸಿರುವುದಿಲ್ಲ. ಸಮಿತಿಯ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸುವ ಮೂಲಕ ದೆಹಲಿ ಸರ್ಕಾರವು ಮೋಹನ್ ಅವರನ್ನು “ಶಿಕ್ಷೆಯ ನೋವಿನಲ್ಲಿ” ಇಡಲಾಗದು ಎಂದರು.
“ಜನಪ್ರತಿನಿಧಿಗಳ ಹಕ್ಕಿನ ಬಗ್ಗೆ ವಿಧಾನಸಭೆ ನಿರ್ಧರಿಸುತ್ತದೆ. ಜನಪ್ರತಿನಿಧಿಗಳ ಹಕ್ಕಿಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಬೇಕೆ, ಬೇಡವೇ ಎಂಬುದನ್ನು ಸಮಿತಿ ನಿರ್ಧರಿಸಲಾಗದು. ಇದು ಗಂಭೀರ ಬೆದರಿಕೆ. ವಿಧಾನಸಭೆ ಏನು ಬೇಕಾದರೂ ನಿರ್ಧರಿಸಬಹುದು. ಸಮಿತಿಯ ಮುಂದೆ ಹಾಜರಾಗಿ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಇಚ್ಛೆ ಇಲ್ಲದಿದ್ದರೆ… ನಾನು ಅಮೆರಿಕ ಮೂಲದ ಕಂಪೆನಿಗೆ ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ಪರಿಗಣಿಸಿ. ರಾಜಕೀಯವಾಗಿ ಅತಿಸೂಕ್ಷ್ಮ ಘಟನೆಯಾದ ಇದರ ಬಗ್ಗೆ ಪ್ರತಿಕ್ರಿಯಿಸಲು ನನಗೆ ಇಷ್ಟವಿಲ್ಲ” ಎಂದರು.
“ನಮ್ಮ ಸಾಂವಿಧಾನಿಕ ಚೌಕಟ್ಟಿನ ಅಡಿ ನ್ಯಾಯಯೋಚಿತ ವಿಚಾರಣೆ ಮತ್ತು ಶಾಸನದ ಅನುಪಸ್ಥಿತಿಯಲ್ಲಿ ವ್ಯಕ್ತಿಯೊಬ್ಬರನ್ನು ಶಿಕ್ಷಿಸಬಹುದೇ?” ಎಂದು ಪ್ರಶ್ನಿಸಿದರು.
ಫೇಸ್‌ಬುಕ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು “ಮೋಹನ್ ಅವರು ಸಮಿತಿಯ ಮುಂದೆ ಹಾಜರಾಗಲಿಲ್ಲ ಎಂದ ಮಾತ್ರಕ್ಕೆ ಅದು ಜನಪ್ರತಿನಿಧಿಗಳ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ. ಹಲವು ಸಂದರ್ಭಗಳಲ್ಲಿ ವಕೀಲನಾದ ನನ್ನ ಅಭಿಪ್ರಾಯ ಆಲಿಸಲು ಸಂಸತ್ ಕರೆಸಿಕೊಂಡಿದೆ. ಒತ್ತಾಯದ ಮೂಲಕ ಹಾಗೂ ಪಾಲ್ಗೊಳ್ಳದೇ ಇರುವುದು ಹಕ್ಕಿನ ಉಲ್ಲಂಘನೆ ಎನ್ನಲಾಗದು. ಅದಕ್ಕೆ ಯಾವುದೇ ತೆರನಾದ ದಂಡವಿಲ್ಲ” ಎಂದರು.
“... ಪ್ರಚೋದನಾಕಾರಿ ಅಂಶಗಳನ್ನು ಹಿಂಪಡೆದಿಲ್ಲ ಎಂದು ಅವರು ಹೇಳಿದ್ದಾರೆ. ಅದನ್ನು ತೆಗೆದುಕೊಂಡಿಲ್ಲ ಎಂದಾದರೆ ನ್ಯಾಯಾಲಯದ ಮೆಟ್ಟಿಲೇರಲು ಎಲ್ಲರಿಗೂ ಅವಕಾಶವಿದೆ. ಕಾನೂನು ಉಲ್ಲಂಘಿಸುವ ವಿಚಾರಗಳನ್ನು ಹಿಂಪಡೆಯುವಂತೆ ಫೇಸ್‌ಬುಕ್ ಎಲ್ಲರಿಗೂ ಸೂಚಿಸಿದೆ. ಅವರೆಲ್ಲರೂ ನ್ಯಾಯಾಲಯಕ್ಕೆ ತೆರಳಬಹುದಿತ್ತು” ಎಂದರು.
ದೆಹಲಿ ಸರ್ಕಾರದ ಶಾಂತಿ ಮತ್ತು ಸಾಮರಸ್ಯ ಸಮಿತಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಮೋಹನ್ ಅವರನ್ನು ಸಾಕ್ಷಿಯಾಗಿ ಸಮಿತಿಯ ಮುಂದೆ ಹಾಜರಾಗುವಂತೆ ಸೂಚಿಸಲಾಗಿತ್ತು. ಇದಕ್ಕಾಗಿ ಅವರಿಗೆ ಯಾವುದೇ ತೆರನಾದ ದಬ್ಬಾಳಿಕೆ ಮಾಡಿಲ್ಲ. ಆರೋಪಿಯಾಗಿ ಹಾಜರಾಗುವಂತೆ ಫೇಸ್‌ಬುಕ್‌ಗೆ ಸೂಚಿಸಿರಲಿಲ್ಲ. ಫೇಸ್‌ಬುಕ್ ತಾಣವನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಮತ್ತು ಭರವಸೆ ಮತ್ತು ರಕ್ಷಣೆ ಕ್ರಮಗಳ ಬಗ್ಗೆ ಖಾತರಿಪಡಿಸಿಕೊಳ್ಳಲು ಭಾಗಿಯಾಗುವಂತೆ ಸೂಚಿಸಲಾಗಿತ್ತು ಎಂದು ವಿವರಿಸಿದರು.