Bangalore City civil court and Shamanur Shivashankarappa 
ಸುದ್ದಿಗಳು

ಅಖಿಲ ಭಾರತ ವೀರಶೈವ ಮಹಾಸಭಾ ಸದಸ್ಯತ್ವ ರದ್ದು: ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಖುದ್ದು ಹಾಜರಾತಿಗೆ ನ್ಯಾಯಾಲಯ ಆದೇಶ

ಮಹಾಸಭಾದ ಸದಸ್ಯತ್ವದಿಂದ ನನ್ನನ್ನು ಕಿತ್ತುಹಾಕಲು ಕಾರ್ಯಕಾರಿ ಸಮಿತಿಯು 2014ರ ಆಗಸ್ಟ್‌ 28ರಂದು ಕೈಗೊಂಡಿರುವ ನಿರ್ಣಯವನ್ನು ರದ್ದುಗೊಳಿಸಬೇಕು ಮತ್ತು ನನ್ನ ಸದಸ್ಯತ್ವ ಪುನರ್‌ ಸ್ಥಾಪನೆಗೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Bar & Bench

ಪದಾಧಿಕಾರಿಯೊಬ್ಬರ ಸದಸ್ಯತ್ವ ರದ್ದುಗೊಳಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ಶಾಮನೂರು ಶಿವಶಂಕರಪ್ಪ ಅವರು ವಿಚಾರಣೆಗೆ ಖುದ್ದು ಹಾಜರಾಗುವಂತೆ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

ಬೆಂಗಳೂರು ಸಂಪಿಗೆ ಲೇಔಟ್‌ನ ಅಮರಜ್ಯೋತಿ ನಗರದ ನಿವಾಸಿ ಶಿವಕುಮಾರಸ್ವಾಮಿ (ಮಾಗಡಿ ಶಿವಕುಮಾರ್) ಸಲ್ಲಿಸಿದ್ದ ಅಸಲಿ ದಾವೆಯನ್ನು ಮಂಗಳವಾರ ವಿಚಾರಣೆ ನಡೆಸಿದ 54ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಜೆರಾಲ್ಡ್‌ ರುಡಾಲ್ಫ್‌ ಮೆಂಡೋಂನ್ಸಾ ಅವರ ನೇತೃತ್ವದ ಪೀಠವು ಶಾಮನೂರು ಶಿವಶಂಕರಪ್ಪ ಅವರ ಖುದ್ದು ಹಾಜರಾತಿಗೆ ಸೂಚಿಸಿದ್ದು, ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ವೀರಶೈವ ಮಹಾಸಭಾದ ಅಧ್ಯಕ್ಷರ ವಿರುದ್ಧ ಅಸಭ್ಯ ಪತ್ರವೊಂದನ್ನು ಶಿವಣ್ಣ ಮಲ್ಲೇಗೌಡ ಎಂಬುವರ ಹೆಸರಿನಲ್ಲಿ ಬರೆಯಲಾಗಿತ್ತು ಮತ್ತು ಎಲ್ಲರಿಗೂ ಈ ಪತ್ರವನ್ನು ಕಳುಹಿಸಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಹಾಸಭಾವು ಶಿವಕುಮಾರಸ್ವಾಮಿ ಅವರಿಗೆ 2014ರ ಆಗಸ್ಟ್‌ 2ರಂದು ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿತ್ತು.

ಹೆಸರು ಮತ್ತು ವಿಳಾಸ ಬರೆಯದೇ ಮಹಾಸಭೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ವಿರುದ್ಧ ಅಸಭ್ಯ ರೀತಿಯಲ್ಲಿ ಪತ್ರವನ್ನು ಬರೆಯಲಾಗಿದೆ. ವಿಧಿ ವಿಜ್ಞಾನಗಳ ಪ್ರಯೋಗಾಲಯದ ಪರಿಶೀಲನೆಯಿಂದ ಇದನ್ನು ನೀವೇ ಬರೆದಿದ್ದೀರಿ ಎಂದು ತಿಳಿದು ಬಂದಿರುತ್ತದೆ. ನೀವು ಮಹಾಸಭೆಯ ಉಪ ಪೋಷಕರಾಗಿದ್ದು, ಮಹಾಸಭೆಯ ಹಿತಕ್ಕೆ ಧಕ್ಕೆ ಬರುವ ರೀತಿಯಲ್ಲಿ ಮತ್ತು ಅದರ ಘನತೆ, ಗೌರವಕ್ಕೆ ಚ್ಯುತಿ ಬರುವ ರೀತಿಯಲ್ಲಿ ನಡೆದುಕೊಂಡಿದ್ದೀರಿ. ಆದ್ದರಿಂದ, ಮಹಾಸಭೆಯಲ್ಲಿನ ತಮ್ಮ ಸದಸ್ಯತ್ವ ಏಕೆ ರದ್ದುಪಡಿಸಬಾರದು ಎಂದು ನೋಟಿಸ್‌ನಲ್ಲಿ ಕೇಳಲಾಗಿತ್ತು. ಬಳಿಕ ಅವರನ್ನು ಸದಸ್ಯತ್ವದಿಂದ ವಜಾ ಮಾಡಲಾಗಿತ್ತು.

ಮಹಾಸಭಾದ ಸದಸ್ಯತ್ವದಿಂದ ನನ್ನನ್ನು ಕಿತ್ತುಹಾಕಲು ಕಾರ್ಯಕಾರಿ ಸಮಿತಿಯು 2014ರ ಆಗಸ್ಟ್‌ 28ರಂದು ಕೈಗೊಂಡಿರುವ ನಿರ್ಣಯವನ್ನು ರದ್ದುಗೊಳಿಸಬೇಕು ಮತ್ತು ನನ್ನ ಸದಸ್ಯತ್ವ ಪುನರ್‌ ಸ್ಥಾಪನೆಗೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರ ಶಿವಕುಮಾರಸ್ವಾಮಿ ಪರ ವಕೀಲ ಎಸ್‌ ಟಿ ಪ್ರಸಾದ್ ವಾದ ಮಂಡಿಸಿದ್ದರು.