ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಐಎಫ್‌ಎಸ್ ಅಧಿಕಾರಿ ಆರ್ ರವಿಶಂಕರ್, ತೋಟಗಾರಿಕೆ ಮತ್ತು ಯೋಜನೆ ಹಾಗೂ ಸಾಂಖ್ಯಿಕ ಸಚಿವ ಎನ್ ಮುನಿರತ್ನ ಸೇರಿದಂತೆ 11 ಮಂದಿಯ ವಿರುದ್ಧದ ಅಪರಾಧಗಳನ್ನು ವಿಶೇಷ ನ್ಯಾಯಾಲಯವು ಸಂಜ್ಞಾನಕ್ಕೆ ತೆಗೆದುಕೊಂಡಿದ್ದು ದೂರುದಾರೆಯ ಹೇಳಿಕೆ ದಾಖಲಿಸಿಕೊಳ್ಳಲು ಪ್ರಕರಣವನ್ನು ಜುಲೈ 16ಕ್ಕೆ ಮುಂದೂಡಿದೆ.
ಸಂತ್ರಸ್ತೆ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆಯನ್ನು ಮಾಜಿ ಹಾಗೂ ಹಾಲಿ ಸಂಸದರು, ಶಾಸಕರ ವಿರುದ್ಧದ ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸಬಹುದಾದ ಪ್ರಕರಣಗಳಿಗಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಧೀಶೆ ಪ್ರೀತ್ ಜೆ ಅವರು ವಿಚಾರಣೆ ನಡೆಸಿ, ಆದೇಶ ಮಾಡಿದ್ದಾರೆ.
1ರಿಂದ 11ನೇ ಆರೋಪಿಗಳವರೆಗೆ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 120-ಬಿ, 354, 354(ಎ), 406, 420, 506 ಮತ್ತು 500 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ 65ರ ಅಡಿ ಅಪರಾಧಗಳ ಸಂಜ್ಞಾನಕ್ಕೆ ತೆಗೆದುಕೊಳ್ಳಲಾಗಿದೆ. ದೂರುದಾರೆಯ ಹೇಳಿಕೆ ಮತ್ತು ಸಾಕ್ಷ್ಯ ಏನಾದರೂ ಇದ್ದರೆ ಅದನ್ನು ದಾಖಲಿಸಿಕೊಳ್ಳಲು ಪ್ರಕರಣವನ್ನು ಜುಲೈ 16ಕ್ಕೆ ಮುಂದೂಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಐಎಫ್‌ಎಸ್ ಅಧಿಕಾರಿ ಆರ್ ರವಿಶಂಕರ್ ಅವರು ದೂರುದಾರೆಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದು, ಒಂದು ವರ್ಷ ಕಾಲ ಮೋಸ ಮಾಡಿದ್ದಾರೆ. ತಾನು ವಿವಾಹವಾಗಿಲ್ಲ. ತನಗೆ ದೂರುದಾರೆಯ ಸ್ನೇಹ ಬೇಕಿದೆ ಎಂದು ಬಿಂಬಿಸಿಕೊಂಡಿದ್ದರು. ರವಿಶಂಕರ್ ಮಾತು ನಂಬಿ ದೂರುದಾರೆಯು ಅವರ ಜೊತೆ ಸ್ನೇಹ ಬೆಳೆಸಿದ್ದರು. 2019ರಲ್ಲಿ ದೂರುದಾರೆಯು ಧಾರವಾಡದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ತೆರಳಿದ್ದು, ಆರೋಪಿ ರವಿಶಂಕರ್ ಅವರು ಸರ್ಕಾರಿ ವಾಹನದಲ್ಲಿ ಬಂದಿದ್ದರು. ಕಾರ್ಯಕ್ರಮ ಮುಗಿದ ಬಳಿಕ 2019ರ ಜುಲೈ 12ರಂದು ದೂರುದಾರೆಯನ್ನು ಸರ್ಕಾರಿ ಕ್ವಾರ್ಟರ್ಸ್‌ಗೆ ಕರೆದುಕೊಂಡು ಹೋಗಿದ್ದು, ತಮ್ಮನ್ನು ಒಪ್ಪಿಕೊಳ್ಳುವಂತೆ ಬಲವಂತಪಡಿಸಿದ್ದರು. ಈ ಸಂದರ್ಭದಲ್ಲಿ ಎರಡು ಸೀರೆ ಮತ್ತು ಆಭರಣಗಳನ್ನು ನೀಡಿದ್ದು, ತನ್ನನ್ನು ಪತಿ ಎಂದು ಸ್ವೀಕರಿಸುವಂತೆ ಬಲವಂತಪಡಿಸಿ, ತನಗೆ ಕುಂಕುಮದ ಮೂಲಕ ತಿಲಕ ಇಟ್ಟು, ಪತಿ ಮತ್ತು ಪತ್ನಿ ಎಂದು ಘೋಷಿಸಿದ್ದರು ಎಂದು ವಿವರಿಸಲಾಗಿದೆ.
ಅಲ್ಲಿಂದ ದೂರುದಾರೆಯನ್ನು ದೆಹಲಿಗೆ ಕರೆದೊಯ್ದು, 2019ರ ಆಗಸ್ಟ್ 18, 19 ಮತ್ತು 20ರಂದು ಸಾಮ್ರಾಟ್ ಹೋಟೆಲ್‌ನಲ್ಲಿ ಉಳಿಸಿಕೊಂಡು, ವಿವಾಹವಾಗುವುದಾಗಿ ಹೇಳಿ, ದೈಹಿಕ ಸಂಬಂಧ ಹೊಂದಿದ್ದರು. ಆನಂತರ, 2021ರ ಮೇ 11ರಂದು ರವಿಶಂಕರ್‌ಗೆ ಶಿವಮೊಗ್ಗಗೆ ವರ್ಗಾವಣೆಯಾಗಿದ್ದು, ಅಲ್ಲಿ ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನ ಧಾರವಾಡದ ಸರ್ಕಾರಿ ಕ್ವಾರ್ಟರ್ಸ್‌ನಲ್ಲಿ ದೈಹಿಕ ಸಂಬಂಧ ನಡೆಸಿದ್ದರು. ಆನಂತರ ದೂರುದಾರೆಯನ್ನು ಫೋನ್, ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲೆಡೆ ನಿರ್ಬಂಧಿಸಿದ್ದರು. ಈ ನಡುವೆ ದೂರುದಾರೆಗೆ ರವಿಶಂಕರ್ ಅವರಿಗೆ 11ನೇ ಆರೋಪಿ ತುಳಸಿ ಮದ್ದಿನೇನಿ ಜೊತೆ ವಿವಾಹವಾಗಿದೆ ಎಂಬುದು ತಿಳಿದು, ದೂರು ನೀಡುವುದಾಗಿ ರವಿಶಂಕರ್ ಮುಂದೆ ಹೇಳಿದ್ದರು. ಆಗ ರವಿಶಂಕರ್ ಅವರು ತುಳಸಿಗೆ ವಿಚ್ಛೇದನ ನೀಡಿ, ದೂರುದಾರೆಯನ್ನು ವಿವಾಹವಾಗುವುದಾಗಿ ತಿಳಿಸಿದ್ದರು ಎಂದು ಉಲ್ಲೇಖಿಸಲಾಗಿದೆ.
ಸಚಿವ ಮುನಿರತ್ನಗೆ ಪರಿಚಿತನಾಗಿದ್ದ 8ನೇ ಆರೋಪಿಯಾದ ಲೋಕೇಶ್ ಅಲಿಯಾಸ್ ಲೋಹಿತ್ ಅವರು ಕ್ರಿಮಿನಲ್ ಪಿತೂರಿ ನಡೆಸಿ, ದೂರುದಾರೆಯನ್ನು ಸಿಲುಕಿಸುವ ಸಂಬಂಧ ನಕಲಿ ದೂರು ದಾಖಲಿಸಿ ಆಕೆಯನ್ನು 2021ರ ಅಕ್ಟೋಬರ್ 11ರಂದು ಬಂಧಿಸುವಂತೆ ಮಾಡಿದ್ದರು. ದೂರುದಾರೆಯನ್ನು ಬಂಧಿಸುವುದಕ್ಕೂ ಮುನ್ನ ಮುನಿರತ್ನ ತಂಡ ಮತ್ತು ಲೋಹಿತ್ ಅವರು 2021ರ ಜುಲೈ 26ರಂದು ಆಕೆಯನ್ನು ಮೂರನೇ ಆರೋಪಿಯಾದ ಲಕ್ಷ್ಮಿ ಜಯರಾಂಗೆ ಪರಿಚಯಿಸಿತ್ತು. ಬಳಿಕ, ಲಕ್ಷ್ಮಿ ಅವರು ದೂರುದಾರೆಯನ್ನು ವಿಜಯನಗರದಲ್ಲಿರುವ ಇಂದ್ರಪ್ರಸ್ಥ ಹೋಟೆಲ್‌ಗೆ ಕರೆದೊಯ್ದು ಸುಮಾರು 50 ಫೋಟೊ ತೆಗೆದುಕೊಂಡಿದ್ದರು. ಮಾರನೇ ದಿನ ಲಕ್ಷ್ಮಿ ಅವರು ದೂರುದಾರೆಯನ್ನು ಉಡುಪಿ ಸಸ್ಯಹಾರಿ ಹೋಟೆಲ್‌ಗೆ ಕರೆದೊಯ್ದಿದ್ದರು. ಮೂರನೇ ಬಾರಿಗೆ ಲಕ್ಷ್ಮಿ ಮತ್ತು ದೂರುದಾರೆ ಭೇಟಿ ಮಾಡುವ ವೇಳೆಗೆ ರಾಜಾಜಿನಗರದ ಸ್ವಾತಿ ಹೋಟೆಲ್‌ನಲ್ಲಿ ಜನ್ಮದಿನ ಕಾರ್ಯಕ್ರಮವಿತ್ತು. ಇಲ್ಲಿ ದೂರುದಾರೆಯನ್ನು 3, 4 ಮತ್ತು 5ನೇ ಆರೋಪಿಗಳಾದ ಕಾಮಾಕ್ಷಿ, ಯಶೋಧಾ ಮತ್ತು ಕಿರಣ್‌ಗೆ ಪರಿಚಯಿಸಿದ್ದರು. ನಾಲ್ಕನೇ ಭೇಟಿ ವೇಳೆಗೆ ದೂರುದಾರೆಯನ್ನು 2021ರ ಆಗಸ್ಟ್ 12ರಂದು ಗುಹಾಂತರ ರೆಸಾರ್ಟ್ಸ್‌ಗೆ ಕರೆದೊಯ್ದಿದ್ದು, ಈಜುಕೊಳದ ಬಳಿ ಉಡುಪು ಬದಲಾಯಿಸುವಾಗ ಲಕ್ಷ್ಮಿ, ಕಾಮಾಕ್ಷ್ಮಿ ಮತ್ತು ಯಶೋಧಾ ಅವರು ದೂರುದಾರೆಯ ಖಾಸಗಿ ಚಿತ್ರಗಳನ್ನು ತೆಗೆದಿದ್ದು, ಅವುಗಳನ್ನು ಇಟ್ಟುಕೊಂಡು ದೂರುದಾರೆಯನ್ನು ಬ್ಲ್ಯಾಕ್‌ಮೇಲ್ ಮಾಡಿದ್ದರು ಎಂದು ವಿವರಿಸಲಾಗಿದೆ.
ಐದನೇ ಭೇಟಿಯ ವೇಳೆ ದೂರುದಾರೆಯನ್ನು ಚಿಕ್ಕಪೇಟೆಗೆ ಶಾಪಿಂಗ್‌ಗೆ ಕರೆದೊಯ್ಯಲಾಗಿತ್ತು. ಆರನೇ ಭೇಟಿಯಲ್ಲಿ ದೂರುದಾರೆಯನ್ನು ಚಿಕ್ಕಬಳ್ಳಾಪುರದ ಅಗಲಕುರ್ಕಿ ಹೋಮ್‌ಸ್ಟೇಗೆ ಕರೆದೊಯ್ಯಲಾಗಿತ್ತು. ಈ ಸಂದರ್ಭದಲ್ಲಿ ದೂರುದಾರೆಯನ್ನು ನಿದ್ರಾಹೀನಗೊಳ್ಳುವಂತೆ ಮಾಡಿ ಆಕೆ ಪ್ರಜ್ಞೆ ತಪ್ಪುವಂತೆ ಆರೋಪಿಗಳಾದ ಲಕ್ಷ್ಮಿ, ಕಾಮಾಕ್ಷಿ, ಕಿರಣ್, ಮಂಜು ಮತ್ತು ಲೋಕೇಶ್ ಮಾಡಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಅಲ್ಲಿಗೆ ಬಂದು ಆಕೆಯನ್ನು ಸುರಕ್ಷಿತವಾಗಿ ಮನೆಗೆ ತೆರಳುವಂತೆ ಮಾಡಿದ್ದರು. ಕೆಲ ಕಾಲದ ಬಳಿಕ ದೂರುದಾರೆಗೆ ಲಕ್ಷ್ಮಿ, ಕಾಮಾಕ್ಷಿ, ಕಿರಣ್, ಮಂಜು ಮತ್ತು ಲೋಕೇಶ್ ಅವರು ರವಿಶಂಕರ್ ಕಡೆಯವರಾಗಿದ್ದು, ಅವರನ್ನು ಕಳುಹಿಸಿದ್ದು ಸಚಿವ ಮುನಿರತ್ನ ಎಂಬುದು ಗೊತ್ತಾಗಿತ್ತು. ತನ್ನನ್ನು ನಕಲಿ ಪ್ರಕರಣದಲ್ಲಿ ಸಿಲುಕಿಸಿ, ಧಾರವಾಡದಲ್ಲಿ ರವಿಶಂಕರ್ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಪ್ರಕರಣ ಹಿಂಪಡೆಯುವಂತೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಆರೋಪಿಸಲಾಗಿದೆ.
2021ರ ಅಕ್ಟೋಬರ್ 6ರಂದು ದೂರುದಾರೆಯು ದೆಹಲಿಯಲ್ಲಿ ರವಿಶಂಕರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಇದನ್ನು ಧಾರವಾಡಕ್ಕೆ ವರ್ಗಾವಯಿಸಲಾಗಿತ್ತು. ಪ್ರಕರಣ ಧಾರವಾಡಕ್ಕೆ ವರ್ಗಾವಣೆಯಾದ ದಿನವೇ ಆರೋಪಿ ಲೋಕೇಶ್ ಅವರು ದೂರುದಾರೆಯ ವಿರುದ್ಧ ನಕಲಿ ಸುಲಿಗೆ ಪ್ರಕರಣ ದಾಖಲಿಸಿದ್ದರು ಎಂದು ವಿವರಿಸಲಾಗಿದೆ.
2021ರ ಅಕ್ಟೋಬರ್ 11ರಂದು ದೂರುದಾರೆಯನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆಯ ಪೊಲೀಸರು ಬಂಧಿಸಿದ್ದು, ಅಕ್ಟೋಬರ್ 12ರಂದು ಖಾಸಗಿ ವಾಹನದಲ್ಲಿ ದೂರುದಾರೆಯನ್ನು ಒಂಭತ್ತನೇ ಆರೋಪಿಯಾದ ಪೊಲೀಸ್ ಇನ್‌ಸ್ಪೆಕ್ಟರ್ ಲೋಹಿತ್ ಅವರು ಸಚಿವ ಮುನಿರತ್ನ ಮನೆಗೆ ಕರೆದೊಯ್ದಿದ್ದು, ಅತ್ಯಾಚಾರ ಪ್ರಕರಣ ಹಿಂಪಡೆಯುವಂತೆ ಬೆದರಿಕೆ ಹಾಕಿದ್ದರು ಎಂದು ವಿವರಿಸಲಾಗಿದೆ. ಅನ್ನಪೂರ್ಣೇಶ್ವರಿ ಠಾಣೆಯ ಪೊಲೀಸರು ದೂರುದಾರೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಲ್ಯಾಪ್‌ಟ್ಯಾಪ್, ನಾಲ್ಕು ಫೋನ್‌ಗಳು, ಹಾರ್ಡ್ ಡಿಸ್ಕ್, ಪೆನ್‌ಡ್ರೈವ್, ಪುಸ್ತಕಗಳು, ಉಡುಗೊರೆಗಳು, ಬ್ಯಾಂಕ್ ಪುಸ್ತಕಗಳು, ಐ ಡಿ ಕಾರ್ಡ್, ಗುರುತಿನ ಚೀಟಿ, ಪೊಲಿಟಿಕಲ್ ಆಲ್ಬಂ ಇತ್ಯಾದಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಆರೋಪಗಳ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಆದೇಶಿಸಿಸಬೇಕು, ಅಪರಾಧವನ್ನು ಸಂಜ್ಞಾನಕ್ಕೆ ತೆಗೆದುಕೊಳ್ಳಬೇಕು ಎಂದು ದೂರುದಾರೆ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡಿದ್ದಾರೆ. ಇದನ್ನು ಆಧರಿಸಿ ನ್ಯಾಯಾಲಯ ಆದೇಶ ಮಾಡಿದೆ.
ಇದೇ ಪ್ರಕರಣದಲ್ಲಿ ಕಳೆದ ಫೆಬ್ರವರಿಯಲ್ಲಿ ಸಚಿವ ಮುನಿರತ್ನ ಅವರು ಮುದ್ರಣ, ದೃಶ್ಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ತೆರನಾದ ಸಾರ್ವಜನಿಕ ಹೇಳಿಕೆಯನ್ನು ಸಂತ್ರಸ್ತೆ ನೀಡದಂತೆ ತಾತ್ಕಾಲಿಕ ಪ್ರತಿಬಂಧಕಾದೇಶ ಪಡೆದುಕೊಂಡಿದ್ದನ್ನು ಇಲ್ಲಿ ನೆನಯಬಹುದಾಗಿದೆ.