Supreme Court, Couples  
ಸುದ್ದಿಗಳು

ದುಬಾರಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದ ಪರಿತ್ಯಕ್ತ ಪತ್ನಿ: ಮುಂಬೈನ ಫ್ಲ್ಯಾಟ್‌ ನೀಡುವಂತೆ ಪತಿಗೆ ಸುಪ್ರೀಂ ಆದೇಶ

ಜೀವನಾಂಶವಾಗಿ ಪತಿಯು ರೂ.12 ಕೋಟಿ ಹಣ, ಮುಂಬೈನಲ್ಲಿ ಮನೆ, ನೀಡಬೇಕೆಂದು ಬೇಡಿಕೆ ಇಟ್ಟಿದ್ದ ಪ್ರಕರಣ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು.

Bar & Bench

ಜೀವನಾಂಶದ ರೂಪದಲ್ಲಿ ತನಗೆ ಪತಿಯು ರೂ.12 ಕೋಟಿ ಹಣ, ಮುಂಬೈನಲ್ಲಿ ಫ್ಲ್ಯಾಟ್‌ ನೀಡಬೇಕು ಎಂದು ಕೋರುವ ಮೂಲಕ ಭಾರೀ ಸುದ್ದಿಗೆ ಗ್ರಾಸವಾಗಿದ್ದ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌ ಪತಿ ತನ್ನ ಪರಿತ್ಯಕ್ತ ಪತ್ನಿಗೆ ಮುಂಬೈನಲ್ಲಿ ಫ್ಲಾಟ್‌ ನೀಡುವಂತೆ ಆದೇಶಿಸಿ ವ್ಯಾಜ್ಯಕ್ಕೆ ಅಂತ್ಯ ಹಾಡಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ದಂಪತಿಯು ಈ ಏರ್ಪಾಟಿಗೆ ಸಮ್ಮತಿಸಿದ ಅನ್ವಯ ಅವರಿಗೆ ವಿಚ್ಛೇದನ ಮಂಜೂರು ಮಾಡಿತು.

ಜುಲೈ 21ರಂದು ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯವು, ಮದುವೆಯ ಅಲ್ಪಾವಧಿ ಮತ್ತು ಮಹಿಳೆಯ ವೃತ್ತಿಪರ ಹಿನ್ನೆಲೆಯನ್ನು ಗಮನಿಸಿ ಪತ್ನಿಯ ಬೇಡಿಕೆಗೆ ಆಕ್ಷೇಪ ವ್ಯಕ್ತಪಡಿಸಿತ್ತು.

ಆಕೆ ಬೇಡಿಕೆ ಇಟ್ಟಿದ್ದ ಫ್ಲ್ಯಾಟ್‌ ಪ್ರತಿಷ್ಠಿತ ವಸತಿ ಸಮುಚ್ಛಯವೊಂದರಲ್ಲಿ ಇದೆ ಎಂಬುದನ್ನು ಗಮನಿಸಿದ್ದ ಸಿಜೆಐ ಗವಾಯಿ ಅವರು ಮಹಿಳೆಯ ಶೈಕ್ಷಣಿಕ ಮತ್ತು ವೃತ್ತಿಪರ ಅರ್ಹತೆಗಳ ಬಗ್ಗೆ ಕೇಳಿದ್ದರು. ಎಂಬಿಎ ಪದವಿ ಪಡೆದು ಐಟಿ ವಲಯದಲ್ಲಿ ಕೆಲಸ ಮಾಡಿರುವುದನ್ನು ಅರಿತಿದ್ದರು.  

"ನೀವು ಬೆಂಗಳೂರು ಮತ್ತು ಹೈದರಾಬಾದ್‌ನಂತಹ ಸ್ಥಳಗಳಲ್ಲಿ ಉದ್ಯೋಗ ಮಾಡಲು ಅರ್ಹರಿದ್ದೀರಿ. ಏಕೆ ಕೆಲಸ ಮಾಡಬಾರದು?" ಎಂದು ಪ್ರಶ್ನಿಸಿದ್ದರು. ಅಲ್ಲದೆ ಮದುವೆಯಾಗಿ 18 ತಿಂಗಳಷ್ಟೇ ಕಳೆದಿದ್ದು ತಿಂಗಳಿಗೆ ಒಂದು ಕೋಟಿ ರೂಪಾಯಿಯಂತೆ ಜೀವನಾಂಶಕ್ಕೆ ಬೇಡಿಕೆ ಇಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದರು.

ಪತಿಯ ಪರ ವಾದ ಮಂಡಿಸಿದ ಅಡ್ವೊಕೇಟ್ ಆನ್ ರೆಕಾರ್ಡ್ ಪ್ರಭ್ಜಿತ್ ಜೌಹರ್ ಮತ್ತು  ಹಿರಿಯ ವಕೀಲೆ ಮಾಧವಿ ದಿವಾನ್ , ಮಹಿಳೆ ಅನಿರ್ದಿಷ್ಟ ಅವಧಿಗೆ ಪೂರ್ಣ ಆರ್ಥಿಕ ಸಹಾಯ ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದರು.

"ಆಕೆ ವಿದ್ಯಾವಂತೆ, ಉದ್ಯೋಗ ಮಾಡಲು ಸಮರ್ಥಳು" ಎಂದು ದಿವಾನ್ ವಾದಿಸಿದ್ದರು. ಬೇಡಿಕೆಗಳು ವಿಪರೀತವಾಗಿದ್ದು ಕಾನೂನುಬದ್ಧ ಅರ್ಹತೆ ಹೊಂದಿಲ್ಲ ಎಂದಿದ್ದರು. ನಂತರ ಪೀಠವು ನ್ಯಾಯಯುತ ತೀರ್ಪು ನೀಡುವುದಕ್ಕಾಗಿ ಪತಿಯ ಆದಾಯ ತೆರಿಗೆ ದಾಖಲೆಗಳು ಬೇಕು ಎಂದಿತ್ತು.

ಮದುವೆಯಾಗಿ 18 ತಿಂಗಳಷ್ಟೇ ಕಳೆದಿದ್ದು ತಿಂಗಳಿಗೆ ಒಂದು ಕೋಟಿ ರೂಪಾಯಿಯಂತೆ ಜೀವನಾಂಶಕ್ಕೆ ಬೇಡಿಕೆ ಇಡುತ್ತಿದ್ದೀರಾ?
ಸುಪ್ರೀಂ ಕೋರ್ಟ್

ಮಹಿಳೆ ತನ್ನ ಗಂಡನ ತಂದೆಯ (ಮಾವ) ಆಸ್ತಿಯ ಮೇಲೆ ಹಕ್ಕು ಸಾಧಿಸುವಂತಿಲ್ಲ ಎಂದು ಸಿಜೆಐ ನೆನಪಿಸಿದ್ದರು. ಅಂತಿಮವಾಗಿ, ಕಾನೂನು ಹೊರೆಯಿಲ್ಲದೆ ಫ್ಲ್ಯಾಟ್‌ ಒಪ್ಪಿಕೊಳ್ಳುವುದು ಅಥವಾ ₹4 ಕೋಟಿಯ ಇಡುಗಂಟು ಪಡೆದು ಇತ್ಯರ್ಥ ಮಾಡಿಕೊಳ್ಳುವ ಎರಡು ಆಯ್ಕೆಗಳು ಮಹಿಳೆಗೆ ಇವೆ ಎಂದು ತಿಳಿಸಿದ್ದ ಪೀಠ ತೀರ್ಪು ಕಾಯ್ದಿರಿಸಿತ್ತು.

ವಿದ್ಯಾವಂತರು ಮತ್ತು ಔದ್ಯೋಗಿಕವಾಗಿ ಸಮರ್ಥರು ನಿರುದ್ಯೋಗವನ್ನು ಸ್ವಂತ ಇಚ್ಛೆಯಿಂದ ಆರಿಸಿಕೊಂಡು ಬಳಿಕ ಉತ್ಪ್ರೇಕ್ಷಿತ ಜೀವನಾಂಶ  ಪಡೆಯಬಾರದು ಎಂದು ಸಿಜೆಐ ಸ್ಪಷ್ಟವಾಗಿ ಹೇಳಿದ್ದರು.

"ನೀವು ಒಳ್ಳೆಯ ವಿದ್ಯಾವಂತರು. ಉದ್ದರಿಯನ್ನು ಅವಲಂಬಿಸಬಾರದು. ನೀವು ದುಡಿದು ಘನತೆಯಿಂದ ಬದುಕಬೇಕು" ಎಂದು ಮುಖ್ಯ ನ್ಯಾಯಮೂರ್ತಿ ಜುಲೈ 21 ರಂದು ಹೇಳಿದ್ದರು. ಇಂದು ನ್ಯಾಯಾಲಯ ಪತ್ನಿಗೆ ಪ್ಲ್ಯಾಟ್‌ ಮಂಜೂರು ಮಾಡುವ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಿತು.