Supreme Court
Supreme Court 
ಸುದ್ದಿಗಳು

ಆರಾಧನಾ ಸ್ಥಳಕ್ಕೆ ಸಂಬಂಧಿಸಿದ ಎಲ್ಲಾ ವ್ಯಾಜ್ಯಗಳನ್ನು 32ನೇ ವಿಧಿಯಡಿ ಸರ್ವೋಚ್ಚ ನ್ಯಾಯಾಲಯಕ್ಕೆ ತರುವಂತಿಲ್ಲ: ಸುಪ್ರೀಂ

Bar & Bench

ಧಾರ್ಮಿಕ ಸ್ವಾತಂತ್ರ್ಯ ಅನ್ವಯಿಸಿ ಆರಾಧನಾ ಸ್ಥಳಗಳಿಗೆ ಸಂಬಂಧಿಸಿದ ಎಲ್ಲಾ ವ್ಯಾಜ್ಯಗಳನ್ನು ಪೂಜಾಸ್ಥಳ ವಿಶೇಷ ನಿಬಂಧನೆ ಕಾಯಿದೆ- 1991 ಮತ್ತು ಸಂವಿಧಾನದ 25ನೇ ವಿಧಿಯಡಿ ಸರ್ವೋಚ್ಚ ನ್ಯಾಯಾಲಯಕ್ಕೆ ತರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ [ಶರದ್ ಜವೇರಿ ಮತ್ತು ಭಾರತ ಒಕೂಟ ನಡುವಣ ಪ್ರಕರಣ].

ಆರಾಧನಾ ಸ್ಥಳಕ್ಕೆ ಸಂಬಂಧಿಸಿದಂತೆ ಒಂದೇ ಸಮುದಾಯದ ಎರಡು ವರ್ಗಗಳ ನಡುವೆ ವಿವಾದ ಉಂಟಾದಾಗ, ಅದಕ್ಕೆ ಸಾಕ್ಷಿ ಪ್ರಮುಖವಾಗಿ ಬೇಕಾಗಿದ್ದು ಸಿಪಿಸಿ ಸೆಕ್ಷನ್‌‌ 92ರ ಅಡಿಯಲ್ಲಿ ನ್ಯಾಯವ್ಯಾಪ್ತಿ ಅನ್ವಯಿಸುವ ಮೂಲಕ ಸೂಕ್ತ ವೇದಿಕೆಯಾದ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಬೇಕೆ ವಿನಾ ಸಂವಿಧಾನದ 32ನೇ ವಿಧಿ ಅನ್ವಯಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಹೀಗಾಗಿ ಅಂತಹ ಪ್ರಕರಣಗಳಲ್ಲಿ ಕಕ್ಷಿದಾರರು ಸಿವಿಲ್ ಮೊಕದ್ದಮೆ ದಾಖಲಿಸಿ ವಿಚಾರಣಾ ನ್ಯಾಯಾಲಯದ ಮುಂದೆ ಪ್ರಕರಣ ಮಂಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.

"ಪುರಾವೆಗಳ ಆಧಾರದ ಮೇಲೆ ಹಕ್ಕುಗಳ ಸ್ವರೂಪವನ್ನು ಸರಿಯಾಗಿ ಮಂಡಿಸಬೇಕು. ಸಿವಿಲ್‌ ಮೊಕದ್ದಮೆಯಲ್ಲಿ ವಿಚಾರಣೆ ಮಂಡಿಸಬೇಕಿರುವುದರಿಂದ 1991ರ ಆರಾಧನಾ ಸ್ಥಳಗಳ ಕಾಯಿದೆ ಅನ್ವಯಿಸಲಾಗಿದೆ ಎಂಬ ಅಂಶವು 32ನೇ ವಿಧಿಯಡಿ ಮನವಿಯನ್ನು ಪರಿಗಣಿಸಲು ಸಾಕಾಗುವುದಿಲ್ಲ" ಎಂದು ನ್ಯಾ. ಡಿ ವೈ ಚಂದ್ರಚೂಡ್‌ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ದ್ವಿಸದಸ್ಯ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಇಡೀ ತಪಾಗಚ್ ಪಂಗಡಕ್ಕೆ ಸೇರಿದ ಧಾರ್ಮಿಕ ಸ್ಥಳಗಳನ್ನು ತಪಾಗಚ್‌ನ ನಿರ್ದಿಷ್ಟ ಪಂಗಡವೊಂದು ಮಾತ್ರ ಆರಾಧಿಸಲು ಅನುಕೂಲವಾಗುವಂತೆ ಅಕ್ರಮವಾಗಿ ಮತ್ತು ವ್ಯಾಪಕವಾಗಿ ಆರಾಧನಾ ಸ್ಥಳಗಳನ್ನು ಪರಿವರ್ತಿಸಿದ್ದನ್ನು ಪ್ರಶ್ನಿಸಿ ಶ್ವೇತಾಂಬರ ಮೂರ್ತಿ ಪೂಜಾ ವರ್ಗಕ್ಕೆ ಸೇರಿದ ಮೊಹಿಜೀತ್‌ ಸಮುದಾಯದವರಾದ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರವಿಂದ್‌ ದಾತಾರ್‌, ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ಅರ್ಜಿ ಸಲ್ಲಿಸಿರುವುದು ಸೂಕ್ತವಾಗಿದ್ದು ಮನವಿಯನ್ನುಪರಿಗಣಿಸದಿದ್ದರೆ 25ನೇವಿಧಿ ನಿಷ್ಪ್ರಯೋಜಕವಾಗುತ್ತದೆ. ಇಡೀ ತಪಾಗಚ್‌ ಪಂಗಡಕ್ಕೆ ಮೀಸಲಾದ ಇಂತಹ ಪೂಜಾ ಸ್ಥಳಗಳನ್ನು ಕೇವಲ ಒಂದು ವರ್ಗದ ಆರಾಧನಾ ಸ್ಥಳವಾಗಿ ಪರಿವರ್ತಿಸಲು ಅನುಮತಿ ನೀಡಿದರೆ, ಇತರ ವರ್ಗಗಳು ತಮ್ಮ ಧರ್ಮ ಪ್ರತಿಪಾದಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ವಾದಿಸಿದ್ದರು.

ಆದರೆ ನ್ಯಾಯಾಲಯ “ಇದು ಒಂದೇ ಧಾರ್ಮಿಕ ಪಂಗಡಗಳ ನಡುವಣ ವಿವಾದವಾಗಿದ್ದು ಆರಾಧನಾ ಸ್ಥಳ ಕಾಯಿದೆಯನ್ನು ಸುಮ್ಮನೆ ಅನ್ವಯಿಸಿ 32ನೇ ವಿಧಿಯಡಿ ಸರ್ವೋಚ್ಚ ನ್ಯಾಯಾಲಯದ ಅಧಿಕಾರ ವ್ಯಪ್ತಿಯನ್ನು ಪುರಸ್ಕರಿಸಲಾಗದು” ಎಂದಿತು. “ಸಿವಿಲ್‌ ಪರಿಹಾರಗಳನ್ನು ಪಡೆಯಲು ಅರ್ಜಿದಾರರು ಮುಕ್ತರಾಗಿದ್ದಾರೆ” ಎಂದು ತಿಳಿಸಿ ಮನವಿ ಪುರಸ್ಕರಿಸಲು ನಿರಾಕರಿಸಿತು.