ಸುದ್ದಿಗಳು

ಎಐಜೆಎಸ್‌ಗೆ 8 ರಾಜ್ಯಗಳು, 13 ಹೈಕೋರ್ಟ್‌ಗಳು ಒಲವು ತೋರಿಲ್ಲ;13 ರಾಜ್ಯಗಳ ಪ್ರತಿಕ್ರಿಯೆ ಬರಬೇಕಿದೆ: ಸಚಿವ ರಿಜಿಜು

Bar & Bench

ಅಖಿಲ ಭಾರತ ನ್ಯಾಯಾಂಗ ಸೇವೆಗಳನ್ನು (ಎಐಜೆಎಸ್) ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರಗಳು ಮತ್ತು ಹೈಕೋರ್ಟ್‌ಗಳು ಹೊಂದಿರುವ ತೀವ್ರ ಭಿನ್ನಾಭಿಪ್ರಾಯದ ಬಗ್ಗೆ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರು ಶುಕ್ರವಾರ ಸಂಸತ್ತಿನಲ್ಲಿ ವಿವರಿಸಿದರು.

"ಸರ್ಕಾರದ ದೃಷ್ಟಿಯಲ್ಲಿ, ಒಟ್ಟಾರೆ ನ್ಯಾಯ ವಿತರಣಾ ವ್ಯವಸ್ಥೆ ಬಲಪಡಿಸಲು ಸೂಕ್ತವಾಗಿ ರೂಪುಗೊಂಡ ಅಖಿಲ ಭಾರತ ನ್ಯಾಯಾಂಗ ಸೇವೆ ಮುಖ್ಯವಾಗಿದೆ. ಇದು ಅಖಿಲ ಭಾರತ ಮಟ್ಟದಲ್ಲಿ ಅರ್ಹತೆ ಮೂಲಕ ಆಯ್ಕೆ ಮಾಡಲಾದ ಹೊಸ ಕಾನೂನು ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವುದಲ್ಲದೆ ಸಮಾಜದ ಅಂಚಿನಲ್ಲಿರುವ ಮತ್ತು ಅವಕಾಶ ವಂಚಿತ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ಒದಗಿಸುತ್ತದೆ. ಆ ಮೂಲಕ ಸಾಮಾಜಿಕ ಒಳಗೊಳ್ಳುವಿಕೆ ಸಮಸ್ಯೆಯನ್ನು ಪರಿಹರಿಸುತ್ತದೆ” ಎಂದು ಹೇಳಿದರು.

ಎಐಜೆಎಸ್‌ಗೆ ಸಂಬಂಧಿಸಿದಂತೆ ರಾಜ್ಯಗಳು ಮತ್ತು ಹೈಕೋರ್ಟ್‌ಗಳಿಗೆ ಒಮ್ಮತ ಇಲ್ಲವಾಗಿದ್ದು ಅರೆ ಒಕ್ಕೂಟ ರಾಜಕೀಯ ವ್ಯವಸ್ಥೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಸುಧಾರಣೆ ತರುವಾಗ ಉಂಟಾಗುವ ಸಂಕೀರ್ಣತೆಯನ್ನು ಇದು ಬೆಳಕಿಗೆ ತರುತ್ತದೆ ಎಂದಿದ್ದಾರೆ. ಸಂಸತ್‌ ಸದಸ್ಯರಾದ ಬಿದ್ಯುತ್ ಮಹತೋ ಮತ್ತು ಅಡೂರ್ ಪ್ರಕಾಶ್ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ರಿಜಿಜು ಉತ್ತರಿಸಿದರು.

ಹರಿಯಾಣ ಮತ್ತು ಮಿಜೋರಾಂ ಸರ್ಕಾರಗಳು ಮತ್ತು ಎಐಜೆಎಸ್‌ಗೆ ಸಂಪೂರ್ಣ ಬೆಂಬಲ ಸೂಚಿಸಿವೆ. ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಪಂಜಾಬ್ ಈ ಎಂಟು ರಾಜ್ಯಗಳು ಅದರ ಪರವಾಗಿವೆ. ಐದು ರಾಜ್ಯಗಳು, ಬಿಹಾರ, ಛತ್ತೀಸ್‌ಗಢ, ಮಣಿಪುರ, ಒರಿಸ್ಸಾ ಮತ್ತು ಉತ್ತರಾಖಂಡ್ ಕೇಂದ್ರದ ಪ್ರಸ್ತಾವನೆಯಲ್ಲಿ ಬದಲಾವಣೆ ಬಯಸಿದ್ದು ಇನ್ನೂ ಹದಿಮೂರು ರಾಜ್ಯ ಸರ್ಕಾರಗಳು ಪ್ರಸ್ತಾವನೆಗೆ ಉತ್ತರ ನೀಡಿಲ್ಲ ಎಂದರು.

ಸಿಕ್ಕಿಂ ಮತ್ತು ತ್ರಿಪುರಾ ಹೈಕೋರ್ಟ್‌ಗಳು ಮಾತ್ರ ಎಐಜೆಎಸ್‌ ವ್ಯವಸ್ಥೆಗೆ ಆದ್ಯತೆ ನೀಡುತ್ತವೆ. ಬಾಂಬೆ, ದೆಹಲಿ, ಕಲ್ಕತ್ತಾ ಮತ್ತು ಮದ್ರಾಸ್ ಸೇರಿದಂತೆ 13 ಹೈಕೋರ್ಟ್‌ಗಳು ಇದರ ವಿರುದ್ಧವಾಗಿವೆ. ಆರು ಹೈಕೋರ್ಟ್‌ಗಳು ಪ್ರಸ್ತಾವನೆಗೆ ಬದಲಾವಣೆಗಳನ್ನು ಬಯಸಿದ್ದು, ಎರಡು ಉಚ್ಚ ನ್ಯಾಯಾಲಯಗಳು ಇನ್ನೂ ಪ್ರತಿಕ್ರಿಯೆ ನೀಡಬೇಕಿದೆ. ಕೆಲ ರಾಜ್ಯಗಳು ತಮ್ಮ ನೆಲಕ್ಕೆ ಈ ವ್ಯವಸ್ಥೆ ಹೊಂದಿಕೊಳ್ಳುವುದಿಲ್ಲ ಎಂಬಂತಹ ವಿವರಣೆ ನೀಡಿದ್ದರೆ ಕೆಲ ಹೈಕೋರ್ಟ್‌ಗಳು ನ್ಯಾಯಾಂಗ ಸೇವೆಗಳನ್ನು ನಾಗರಿಕ ಸೇವೆಗಳಿಗೆ ಹೋಲಿಸಲಾಗದು ಎಂಬುದಾಗಿ ತಿಳಿಸಿವೆ ಎಂದರು.