ಕೇಂದ್ರೀಯವಾಗಿ ನ್ಯಾಯಾಧೀಶರ ನೇಮಕ: ಅಖಿಲ ಭಾರತ ನ್ಯಾಯಾಂಗ ಸೇವೆ ಅಸ್ತಿತ್ವಕ್ಕೆ ತರಲು ಕೇಂದ್ರದಿಂದ ಮತ್ತೆ ಚಾಲನೆ

ಎಐಜೆಎಸ್‌ಗೆ ಸಂಬಂಧಿಸಿದಂತೆ ಮೊದಲ ಪ್ರಸ್ತಾವನೆ ಬಂದದ್ದು 1960ರಲ್ಲಿ. 2012ನೇ ಇಸವಿ ಸೇರಿದಂತೆ ಪ್ರಸ್ತಾವನೆಯನ್ನು ಹಲವು ಬಾರಿ ಮಂಡಿಸಿದ್ದರೂ ಕೆಲವು ಹೈಕೋರ್ಟ್‌ಗಳು ಮತ್ತು ರಾಜ್ಯಗಳ ವಿರೋಧದಿಂದಾಗಿ ಅದನ್ನು ಜಾರಿಗೆ ತರಲು ಸಾಧ್ಯವಾಗಿರಲಿಲ್ಲ.
ಕೇಂದ್ರೀಯವಾಗಿ ನ್ಯಾಯಾಧೀಶರ ನೇಮಕ: ಅಖಿಲ ಭಾರತ ನ್ಯಾಯಾಂಗ ಸೇವೆ ಅಸ್ತಿತ್ವಕ್ಕೆ ತರಲು ಕೇಂದ್ರದಿಂದ ಮತ್ತೆ ಚಾಲನೆ

ಆಡಳಿತಾತ್ಮಕ ಸೇವೆಯ ಮಾದರಿಯಲ್ಲಿಯೇ ಕೇಂದ್ರೀಯವಾಗಿ ನ್ಯಾಯಾಧೀಶರನ್ನು ನೇಮಕ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಸ್ತಾವಿತ ಅಖಿಲ ಭಾರತ ನ್ಯಾಯಾಂಗ ಸೇವೆಗೆ (ಎಐಜೆಎಸ್‌) ಕೇಂದ್ರ ಸರ್ಕಾರವು ಮರುಜೀವ ನೀಡಿದೆ. ಈ ಕುರಿತಂತೆ ಇರುವ ಅಡೆತಡೆಗಳನ್ನು ನಿವಾರಿಸಲು ಸರ್ಕಾರ ಮತ್ತು ನ್ಯಾಯಾಂಗದ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿರುವುದಾಗಿ ಮೂಲಗಳು ತಿಳಿಸಿವೆ ಎಂದು ʼಎಕನಾಮಿಕ್‌ ಟೈಮ್ಸ್‌ʼ ವರದಿ ಮಾಡಿದೆ.

ಲಭ್ಯವಿರುವ ಮಾಹಿತಿ ಪ್ರಕಾರ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಒಂದು ವರ್ಗ ಅನೌಪಚಾರಿಕವಾಗಿ ಐಎಎಸ್‌ ಮತ್ತು ಐಪಿಎಸ್‌ ಮಾದರಿಯನ್ನು ಹೋಲುವ ನ್ಯಾಯಾಂಗ ಸೇವೆಗೆ ಸಮ್ಮತಿಸಿದೆ ಎಂದು ಅದು ತಿಳಿಸಿದೆ.

ಇದಕ್ಕೆ ಸಮಾನಾಂತರವಾಗಿ ಪ್ರಸ್ತಾವನೆಗೆ ಕೆಲ ರಾಜ್ಯ ಸರ್ಕಾರಗಳು ಮತ್ತು ಹೈಕೋರ್ಟ್‌ಗಳಿಂದ ವ್ಯಕ್ತವಾಗಿರುವ ವಿರೋಧವನ್ನು ನಿಭಾಯಿಸುವ ಕಡೆಗೂ ಸರ್ಕಾರ ಗಮನ ಹರಿಸಿದೆ. ಮುಂದಿನ ತಿಂಗಳು ನಡೆಯಲಿರುವ, ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರು ಅಧ್ಯಕ್ಷತೆ ವಹಿಸಿರುವ ಅಖಿಲ ಕಾನೂನು ಸಚಿವರ ಸಮಾವೇಶದಲ್ಲಿ ಈ ಅಂಶವೂ ಪ್ರಸ್ತಾವನೆಯಾಗಲಿದೆ ಎಂದು ಮೂಲಗಳು ತಿಳಿಸಿರುವುದನ್ನು ಪತ್ರಿಕೆ ಉಲ್ಲೇಖಿಸಿದೆ. ನವೆಂಬರ್‌ ಕೊನೆಯ ವಾರದಲ್ಲಿ ನಡೆಯಲಿರುವ ಸಮಾವೇಶದ ಮುಖ್ಯ ಧ್ಯೇಯ ನ್ಯಾಯಾಂಗ ಮೂಲಸೌಕರ್ಯಗಳ ವರ್ಧನೆಯಾಗಿದೆ.

Also Read
ಕರ್ನಾಟಕದ ನ್ಯಾಯಾಂಗ ಮೂಲಸೌಕರ್ಯ ಶ್ಲಾಘಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ ಎಸ್ ಓಕಾ

ಸಮಾವೇಶದ ವೇಳೆ ಈ ಕುರಿತು ಒಮ್ಮತಕ್ಕೆ ಬರಲು ಯತ್ನಿಸಲಾಗುವುದು ಎಂದು ಹೆಸರು ಉಲ್ಲೇಖಿಸಲು ಇಚ್ಛಿಸದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಎಂಟು ರಾಜ್ಯಗಳು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರೆ ಐದು ರಾಜ್ಯಗಳು ಅಸಮಾಧಾನ ವ್ಯಕ್ತಪಡಿಸಿದ್ದವು ಎಂದು ಪತ್ರಿಕೆ 2019ರ ಡಿಸೆಂಬರ್‌ನಲ್ಲಿ ವರದಿ ಮಾಡಿತ್ತು.

ಎಐಜೆಎಸ್ ಕುರಿತಂತೆ ರಾಜ್ಯ ಸರ್ಕಾರಗಳಿಗೆ ಇರುವ ಆತಂಕಗಳನ್ನು ನಿವಾರಿಸಲು ಹೊಸ ಸುತ್ತಿನ ಮಾತುಕತೆಯಲ್ಲಿ, ಮೋದಿ ಸರ್ಕಾರ ಯತ್ನಿಸಲಿದೆ. ಅದರಲ್ಲಿಯೂ ವಿಶೇಷವಾಗಿ ರಾಜ್ಯ ಸರ್ಕಾರ ಹಾಗೂ ಹೈಕೋರ್ಟ್‌ಗಳಿಗೆ ಇದು ತಮ್ಮ ಅಧಿಕಾರವನ್ನು ಕೇಂದ್ರವು ಅತಿಕ್ರಮಿಸುವ ನಡೆ ಎನ್ನುವ ಭಾವನೆ ಇದ್ದು ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಮೂಲಗಳು ತಿಳಿಸಿರುವುದನ್ನು ಪತ್ರಿಕೆ ವರದಿ ಮಾಡಿದೆ.

ಅಖಿಲ ಭಾರತ ನ್ಯಾಯಾಂಗ ಸೇವೆಗೆ ಸಂಬಂಧಿಸಿದಂತೆ ಮೊದಲ ಪ್ರಸ್ತಾವನೆ ಬಂದದ್ದು1960ರಲ್ಲಿ. 2012ನೇ ಇಸವಿ ಸೇರಿದಂತೆ ಪ್ರಸ್ತಾವನೆಯನ್ನು ಹಲವು ಬಾರಿ ಮಂಡಿಸಿದ್ದರೂ ಕೆಲವು ಹೈಕೋರ್ಟ್‌ಗಳು ಮತ್ತು ರಾಜ್ಯಗಳ ವಿರೋಧದಿಂದಾಗಿ ಅದನ್ನು ಜಾರಿಗೆ ತರಲು ಈವರೆಗೆ ಸಾಧ್ಯವಾಗಿಲ್ಲ.

Related Stories

No stories found.
Kannada Bar & Bench
kannada.barandbench.com