ರಾಜ್ಯದೆಲ್ಲೆಡೆ ಜೂನ್ 25ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಒಟ್ಟು 7.65 ಲಕ್ಷ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ಇದುವರೆಗಿನ ಲೋಕ ಅದಾಲತ್‌ಗಳಲ್ಲಿ ಇತ್ಯರ್ಥಗೊಂಡ ಪ್ರಕರಣಗಳ ಸಂಖ್ಯೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಲೋಕ ಅದಾಲತ್‌ನಲ್ಲಿ 6.16 ಲಕ್ಷ ಪ್ರಕರಣಗಳು ಇತ್ಯರ್ಥವಾಗಿದ್ದು ಈವರೆಗಿನ ದಾಖಲೆಯಾಗಿತ್ತು.
ಕರ್ನಾಟಕ ಹೈಕೋರ್ಟ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹಿರಿಯ ನ್ಯಾಯಮೂರ್ತಿ ಬಿ ವೀರಪ್ಪ ಲೋಕ ಅದಾಲತ್‌ನಲ್ಲಿ ರಾಜಿಯಾದ ಪ್ರಕರಣಗಳು ಹಾಗೂ ಪರಿಹಾರದ ಅಂಕಿ-ಅಂಶಗಳ ಕುರಿತು ಮಾಹಿತಿ ನೀಡಿದರು.
ಪ್ರಕರಣಗಳ ಇತ್ಯರ್ಥದಲ್ಲಿ ದಾಖಲೆ: ಜಿಲ್ಲಾ ನ್ಯಾಯಾಲಯಗಳ 964 ಪೀಠಗಳು ಹಾಗೂ ಹೈಕೋರ್ಟ್‌ನ 20 ಪೀಠಗಳು ಸೇರಿ ರಾಜ್ಯದಾದ್ಯಂತ ಒಟ್ಟು 984 ಪೀಠಗಳು ಅದಲಾತ್ ನಡೆಸಿ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 2,64,464 ಪ್ರಕರಣಗಳು ಹಾಗೂ 5,00,613 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಒಟ್ಟು 7,65,077 ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿವೆ. 6.16 ಲಕ್ಷ ಪ್ರಕರಣಗಳು ಇತ್ಯರ್ಥವಾಗಿದ್ದು ಈವರೆಗಿನ ಲೋಕ ಅದಾಲತ್ ದಾಖಲೆಯಾಗಿತ್ತು. ಈ ಬಾರಿ 7.65 ಲಕ್ಷ ಪ್ರಕರಣ ಬಗೆಹರಿದಿರುವುದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ನ್ಯಾಯಮೂರ್ತಿ ಬಿ ವೀರಪ್ಪ ತಿಳಿಸಿದರು.
“ಇಷ್ಟು ಪ್ರಕರಣಗಳು ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳ್ಳಬೇಕಿದ್ದರೆ ಸಾವಿರಕ್ಕೂ ಹೆಚ್ಚು ನ್ಯಾಯಾಧೀಶರಿಗೆ 1 ವರ್ಷ ಬೇಕಾಗುತ್ತಿತ್ತು. ಒಂದೇ ದಿನದಲ್ಲಿ ಪ್ರಕರಣಗಳು ಇತ್ಯರ್ಥಗೊಂಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು 508 ಕೋಟಿ ರೂಪಾಯಿ ಉಳಿತಾಯವಾದಂತಾಗಿದೆ. ಜತೆಗೆ, ಸಾವಿರಾರು ಕೋಟಿಗೂ ಅಧಿಕ ಮೊತ್ತವನ್ನು ದಂಡದ ರೂಪದಲ್ಲಿ ಸಂಗ್ರಹಿಸಿಕೊಡಲಾಗಿದೆ. ಸಾರ್ವಜನಿಕರಿಗೂ ಪರಿಹಾರ ಪಾವತಿಸಲಾಗಿದೆ” ಎಂದರು.
50 ವರ್ಷದ ಬಳಿಕ ರಾಜಿಯಾದ ವೃದ್ಧ ದಂಪತಿ: ಧಾರವಾಡ ಜಿಲ್ಲೆಯ ಕಲಘಟಗಿಯ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇದ್ದ ಜೀವನಾಂಶ ಪ್ರಕರಣದಲ್ಲಿ ಕಳೆದ 50 ವರ್ಷಗಳಿಂದ ಪ್ರತ್ಯೇಕವಾಗಿದ್ದ ವೃದ್ಧ ದಂಪತಿ ಮತ್ತೆ ಒಂದಾಗಿರುವುದು ಈ ಬಾರಿಯ ಲೋಕ ಅದಾಲತ್‌ನ ವಿಶೇಷತೆಯಾಗಿದೆ. 80 ವರ್ಷದ ಪತ್ನಿ ಹಾಗೂ 85 ವರ್ಷದ ಪತಿ ಒಂದಾಗಿ ಪ್ರಕರಣ ಇತ್ಯರ್ಥಪಡಿಸಿಕೊಂಡಿದ್ದಾರೆ. ಇದಲ್ಲದೆ, ಅದಾಲತ್‌ನಲ್ಲಿ ಒಟ್ಟು 1,128 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಮೈಸೂರಿನ 40, ಬೆಂಗಳೂರಿನ 30 ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 107ಕ್ಕೂ ದಂಪತಿ ಒಟ್ಟಾಗಿ ಜೀವನ ನಡೆಸಲು ತೀರ್ಮಾನಿಸಿ, ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದು ವಿವರಿಸಿದರು.
ಟ್ರಾಫಿಕ್ ಪ್ರಕರಣದಲ್ಲಿ 22 ಕೋಟಿ ದಂಡ ಸಂಗ್ರಹ: ಇದೇ ಮೊದಲ ಬಾರಿಗೆ ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳನ್ನೂ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನಕ್ಕೆ ನಿಗದಿಪಡಿಸಲಾಗಿತ್ತು. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 2,23,590 ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳಾಗಿ ವಿಲೇವಾರಿ ಮಾಡಲಾಗಿದ್ದು, 22,36,77,373 ರೂಪಾಯಿ ದಂಡ ಸಂಗ್ರಹಿಸಲಾಗಿದೆ.
ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಸಮಯ, ಹಣ ಉಳಿತಾಯವಾಗುವ ಜತೆಗೆ, ತ್ವರಿತವಾಗಿ ಪ್ರಕರಣ ವಿಲೇವಾರಿಯಾಗುವುದರಿಂದ ನ್ಯಾಯಾಲಯಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ಲೋಕ ಅದಾಲತ್ ಬಗ್ಗೆ ದಿನದಿಂದ ದಿನಕ್ಕೆ ಸಾರ್ವಜನಿಕರಲ್ಲಿ ಜಾಗೃತಿ ಮೂಡುತ್ತಿದ್ದು, ಇಲ್ಲಿ ಇತ್ಯರ್ಥಗೊಳ್ಳುವ ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಹೆಚ್ಚು ಜನರು ಅದಾಲತ್ ಮೂಲಕ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ.ನ್ಯಾ. ಬಿ. ವೀರಪ್ಪ, ಕೆಎಸ್‌ಎಲ್‌ಎಸ್‌ಎ, ಕಾರ್ಯನಿರ್ವಾಹಕ ಅಧ್ಯಕ್ಷ
ಎಂವಿ ಕಾಯಿದೆಯ ಪ್ರಕರಣದಲ್ಲಿ ಹೆಚ್ಚಿನ ಪರಿಹಾರ: ಹೈಕೋರ್ಟ್‌ನಲ್ಲಿ ಬಾಕಿ ಇದ್ದ ಮೋಟಾರು ವಾಹನ ಕಾಯಿದೆಯ ಪ್ರಕರಣವೊಂದನ್ನು 1.97 ಕೋಟಿ ರೂಪಾಯಿ ಪರಿಹಾರದೊಂದಿಗೆ ಇತ್ಯರ್ಥಪಡಿಸಲಾಗಿದ್ದು, ಲಘು ವ್ಯಾಜ್ಯಗಳ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣವೊಂದರಲ್ಲಿ 2.03 ಕೋಟಿ ರೂಪಾಯಿ ಪರಿಹಾರ ಕೊಡಿಸಲಾಗಿದೆ. ಈ ಬಾರಿಯ ಅದಾಲತ್‌ನಲ್ಲಿ ಒಟ್ಟು 4,076 ಮೋಟಾರು ವಾಹನ ಅಪಘಾತ ಪ್ರಕರಣಗಳನ್ನು 184 ಕೋಟಿ ರೂಪಾಯಿ ಪರಿಹಾರದೊಂದಿಗೆ ಇರ್ತ್ಯಪಡಿಸಲಾಗಿದೆ ಎಂದರು.
ಲೋಕ ಅದಾಲತ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಳೆಯ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ಕೋಲಾರದ ಮಾಲೂರಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 36 ವರ್ಷಗಳಿಂದ ಬಾಕಿ ಇದ್ದ ಪ್ರಕರಣಕ್ಕೆ ತೆರೆ ಬಿದ್ದಿದೆ.
ಲಘು ವ್ಯಾಜ್ಯಗಳ ನ್ಯಾಯಾಲಯದಲ್ಲಿ ಬಾಕಿ ಇದ್ದ ಚೆಕ್ ಬೌನ್ಸ್ ಪ್ರಕರಣವೊಂದನ್ನು 7.75 ಕೋಟಿ ರೂಪಾಯಿಗಳಿಗೆ ಇತ್ಯರ್ಥಪಡಿಸಲಾಗಿದೆ.
ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಹಾಗೂ ಕರ್ನಾಟಕ ರಿಯಲ್ ಎಸ್ಟೇಟ್ ಮೇಲ್ಮನವಿ ನ್ಯಾಯ ಮಂಡಳಿಯಲ್ಲಿ (ಕೆ-ರೀಟ್) ಬಾಕಿಯಿದ್ದ 222 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 5.85 ಕೋಟಿ ರೂಪಾಯಿ ಪರಿಹಾರ ಕೊಡಿಸಲಾಗಿದೆ.
ಕರ್ನಾಟಕ ಮಾಹಿತಿ ಹಕ್ಕು ಆಯೋಗಕ್ಕೆ ಸಂಬಂಧಿಸಿದ 97 ಪ್ರರಕಣಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸಲಾಗಿದ್ದರೆ, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಒಟ್ಟು 194 ಪ್ರಕರಣಗಳನ್ನು ಇತ್ಯರ್ಥಪಡಿಸಿ, 6,17,38,852 ರೂ. ಪರಿಹಾರ ಪಾವತಿಸಲಾಗಿದೆ.
ನಗರದ 8 ವಾಣಿಜ್ಯ ನ್ಯಾಯಾಲಯಗಳಲ್ಲಿ 226 ವಾಣಿಜ್ಯ ದಾವೆಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಗಿದ್ದು, ಒಟ್ಟು 7,96,10,292 ರೂಪಾಯಿ ಪರಿಹಾರ ನೀಡಲಾಗಿದೆ.
ಬ್ಯಾಂಕ್ ವಸೂಲಾತಿಗೆ ಸಂಬಂಧಿಸಿದ ಒಟ್ಟು 5,585 ಪ್ರಕರಣಗಳಲ್ಲಿ 36,24,88,548 ರೂಪಾಯಿ ಮೊತ್ತ ವಸೂಲಿ ಮಾಡಿ ಇತ್ಯರ್ಥಪಡಿಸಲಾಗಿದೆ.
ವಿದ್ಯುತ್ ಬಿಲ್ ವಸೂಲಾತಿಗೆ ಸಂಬಂಧಿಸಿದ 11,842 ಪ್ರಕರಣಗಳಲ್ಲಿ 3.10 ಕೋಟಿ ರೂಪಾಯಿ ಹಾಗೂ 99,866 ನೀರಿನ ಬಿಲ್ ವಸೂಲಾತಿ ಪ್ರಕರಣಗಳಲ್ಲಿ 25.04 ಕೋಟಿ ರೂಪಾಯಿ ವಸೂಲಿ ಮಾಡಿ ಇತ್ಯರ್ಥಪಡಿಸಲಾಗಿದೆ.