ಗೂಗಲ್
ಗೂಗಲ್ 
ಸುದ್ದಿಗಳು

ಗೂಗಲ್ ವೀಡಿಯೊ ಮತ್ತು ಸುದ್ದಿ ಲೇಖನಗಳ ಮೇಲೆ ಅಂಕುಶ: ಪ್ರತಿವಾದಿಗಳಿಗೆ ನೋಟಿಸ್ ನೀಡಿದ ಅಲಾಹಾಬಾದ್ ಹೈಕೋರ್ಟ್

Bar & Bench

ಸುದ್ದಿಸಂಸ್ಥೆಗಳ ವೀಡಿಯೊಗಳ ಮೇಲೆ ನಿರ್ಬಂಧ ಮತ್ತು ಸುದ್ದಿ ಲೇಖನಗಳ ಡಿ-ಇಂಡೆಕ್ಸಿಂಗ್ ಕುರಿತಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಶಾಶ್ವತ ತಡೆಯಾಜ್ಞೆ ಪ್ರಶ್ನಿಸಿ ಗೂಗಲ್ ಎಲ್ಎಲ್‌ಸಿ ಮನವಿ ಸಲ್ಲಿಸಿದ್ದು ಈ ಸಂಬಂಧ ಅಲಾಹಾಬಾದ್ ಹೈಕೋರ್ಟ್ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.

ವಿಷಯವನ್ನು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಅವರಿದ್ದ ಪೀಠ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸಂಬಂಧಪಟ್ಟವರಿಗೆ ನಿರ್ದೇಶಿಸಿದೆ.

ಕೌಂಟರ್ ಅಫಿಡವಿಟ್ ಸಲ್ಲಿಸಲು ನ್ಯಾಯಾಲಯ ಪ್ರತಿವಾದಿಗಳಿಗೆ ಆರು ವಾರಗಳ ಸಮಯಾವಕಾಶ ನೀಡಿದೆ, ಮತ್ತು ಅದಾದ ಒಂದು ವಾರದ ನಂತರ ಗೂಗಲ್ ಪ್ರತ್ಯುತ್ತರ ಅಫಿಡವಿಟ್ ಸಲ್ಲಿಸಬೇಕಿದೆ.

ನವೆಂಬರ್ 23ಕ್ಕೆ ಕೋರ್ಟ್ ವಿಚಾರಣೆ ನಿಗದಿಪಡಿಸಿದೆ.

ಸೆ 14ರಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಮಾನ್ಯ ಮಾಡದಂತೆ ಗೂಗಲ್ ಎಲ್ ಎಲ್ ಸಿ ಮನವಿ ಮಾಡಿತ್ತು.

ಯೂಟ್ಯೂಬ್‌ನಲ್ಲಿರುವ ವೀಡಿಯೋಗಳನ್ನು ತೆಗೆದುಹಾಕುವಂತೆ/ ಅಳಿಸಿಹಾಕುವಂತೆ ಮತ್ತು ಗೂಗಲ್ ಸರ್ಚ್ ಕೆಲ ಶೋಧ ಫಲಿತಾಂಶಗಳನ್ನು ಡಿ ಇಂಡೆಕ್ಸಿಂಗ್ ಮಾಡುವಂತೆ ಕೋರಿ ಹೂಡಲಾಗಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಏಕಪಕ್ಷೀಯ ಆದೇಶ (ಎಕ್ಸ್-ಪಾರ್ಟೆ ಡಿಕ್ರಿ) ಹೊರಡಿಸಿತ್ತು.

ವಿಚಾರಣಾ ನ್ಯಾಯಾಲಯವು ಅಂಗೀಕರಿಸಿದ ಈ ತೀರ್ಪಿನಿಂದಾಆಗಿ ಶಾಶ್ವತ ತಡೆಯಾಜ್ಞೆ ದೊರೆತು ಹೈಕೋರ್ಟಿನಲ್ಲಿ ಪ್ರತಿವಾದಿಗಳಿಗೆ ಅನಕೂಲಕರವಾಗಿ ಪರಿಣಮಿಸಿತ್ತು ಎಂದು ಗೂಗಲ್ ವಾದಿಸಿದೆ.

ಮಾನಹಾನಿಕಾರಕ, ಸುಳ್ಳು ಅಥವಾ ವಾಸ್ತವಿಕ ದೋಷದಿಂದ ಕೂಡಿದೆ ಎಂದು ಏಕಪಕ್ಷೀಯ ಆದೇಶದನ್ವಯ ಕಂಡುಹಿಡಿಯದಿದ್ದರೂ ಕೂಡ ವೀಡಿಯೋಗಳನ್ನು (ಯೂಟ್ಯೂಬಿನಿಂದ) ತೆಗೆದುಹಾಕುವುದರಿಂದ/ ಅಳಿಸಿಹಾಕುವುದರಿಂದ ಮತ್ತು ಸುದ್ದಿ ಬರಹಗಳು, ವರದಿಗಳು ಹಾಗೂ ಸುದ್ದಿ ವೀಡಿಯೊಗಳನ್ನು (ಗೂಗಲ್ ಸರ್ಚ್ ನಿಂದ) ಡಿ-ಇಂಡೆಕ್ಸಿಂಗ್ ಮಾಡುವುದರಿಂದ ಅದು ಸಾರ್ವಜನಿಕ ಹಿತಾಸಕ್ತಿಯ ಮುಖ್ಯ ಪ್ರಶ್ನೆಗಳಿಗೆ ಎಡೆ ಮಾಡಿಕೊಡುತ್ತದೆ ಎಂದು ಗೂಗಲ್ ಪ್ರತಿಪಾದಿಸಿದೆ.

ಹಿರಿಯ ವಕೀಲ ಅನೂಪ್ ತ್ರಿವೇದಿ, ವಕೀಲ ವಿನಾಯಕ್ ಮಿಥಲ್ ಮತ್ತು ಹಿರಿಯ ವಕೀಲ ಮನೀಶ್ ಗೋಯಲ್ ಅವರೊಂದಿಗೆ ವಕೀಲರಾದ ಅವಿ ಟಂಡನ್ ಮತ್ತು ರಘುವಂಶ್ ಮಿಶ್ರಾ ಅವರು ಗೂಗಲ್ ಎಲ್ಎಲ್ ಸಿ ಮತ್ತು ಗೂಗಲ್ ಇಂಡಿಯಾ ಪರ ಹಾಜರಿದ್ದರು.

ಆದೇಶವನ್ನು ಇಲ್ಲಿ ಓದಿ:

Google_LLC_v_Shri_Arun_Kumar_Mishra_And_Another_A227_A__2884_2020.pdf
Preview