Allahabad High Court  aljazeera
ಸುದ್ದಿಗಳು

ಶಿಕ್ಷೆಯ ಅವಧಿ ಮೀರಿ ಬಂಧನ ಜೀವಿಸುವ ಹಕ್ಕಿನ ಉಲ್ಲಂಘನೆ: ಪಾಕಿಸ್ತಾನಿ ಪ್ರಜೆಯ ಗಡಿಪಾರಿಗೆ ಅಲಾಹಾಬಾದ್ ಹೈಕೋರ್ಟ್ ಆದೇಶ

ಭಾರತೀಯ ಸೇನೆಯ ಮಾಹಿತಿಯನ್ನು ಐಎಸ್‌ಐಗೆ ಒದಗಿಸಿದ ಕಾರಣಕ್ಕಾಗಿ ಪಾಕಿಸ್ತಾನಿ ವ್ಯಕ್ತಿಯ ಬಂಧನ ಅವಧಿ ವಿಸ್ತರಿಸುವಂತೆ ಸರ್ಕಾರ ಕೋರಿದ್ದು ಆಧಾರಹಿತ ಎಂದಿತು ನ್ಯಾಯಾಲಯ.

Bar & Bench

ಬಂಧನ ಅವಧಿ ಮೀರಿ ಜೈಲಿನಲ್ಲಿದ್ದ ಪಾಕಿಸ್ತಾನಿ ಪ್ರಜೆಯನ್ನು ಆತನ ದೇಶಕ್ಕೆ ಗಡಿಪಾರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಅಲಾಹಾಬಾದ್‌ ಹೈಕೋರ್ಟ್‌ ನಿರ್ದೇಶನ ನೀಡಿದೆ. [ತಸೀನ್‌ ಅಜೀಂ ಅಲಿಯಾಸ್‌ ಲರೀಬ್‌ ಖಾನ್‌ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಶಿಕ್ಷೆಯ ಅವಧಿ ಮೀರಿ ಬಂಧಿಸುವುದು ಸಂವಿಧಾನದ 21 ನೇ ವಿಧಿಯಡಿ ಒದಗಿಸಲಾದ ಜೀವಿಸುವ ಹಕ್ಕಿನ ಉಲ್ಲಂಘನೆ ಎಂದು ನ್ಯಾಯಮೂರ್ತಿಗಳಾದ ರಮೇಶ್ ಸಿನ್ಹಾ ಮತ್ತು ಸರೋಜ್ ಯಾದವ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

"...ಅಪರಾಧಿ/ಪ್ರತಿವಾದಿ ತನಗೆ ವಿಧಿಸಲಾದ ಶಿಕ್ಷೆಯನ್ನು ಈಗಾಗಲೇ ಪೂರೈಸಿರುವುದರಿಂದ ಮತ್ತು ಅವನು ಯಾವುದೇ ಪಾಸ್‌ಪೋರ್ಟ್ ಅಥವಾ ವೀಸಾ ಇರದ ವಿದೇಶಿ ಪ್ರಜೆಯಾಗಿರುವುದರಿಂದ, ಆತನನ್ನು ಆತನ ದೇಶಕ್ಕೆ ಗಡೀಪಾರು ಮಾಡಬೇಕು ಎಂಬುದು ನಮ್ಮ ಅಭಿಪ್ರಾಯ. ಬೇರೆ ಪ್ರಕರಣಗಳಲ್ಲಿ ಅಗತ್ಯ ಇಲ್ಲದಿದ್ದರೆ ಕಾನೂನಿನ ಪ್ರಕಾರ ಆತನ ಸ್ವಂತ ದೇಶಕ್ಕೆ ಆತನನ್ನು ಗಡೀಪಾರು ಮಾಡಲು ಭಾರತ ಒಕ್ಕೂಟ/ ಮೂರನೇ ಪ್ರತಿವಾದಿ ಮತ್ತು ನಾಲ್ಕನೇ ಪ್ರತಿವಾದಿಗೆ ನಿರ್ದೇಶಿಸಲಾಗಿದೆ” ಎಂದು ನ್ಯಾಯಾಲಯ ಹೇಳಿತು.

ತನ್ನನ್ನು ಬಿಡುಗಡೆ ಮಾಡಿ ಪಾಕಿಸ್ತಾನಕ್ಕೆ ಗಡಿಪಾರು ಮಾಡುವಂತೆ ಪಾಕಿಸ್ತಾನಿ ಪ್ರಜೆ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ಮತ್ತು ಆತನ ಶಿಕ್ಷೆ ಹೆಚ್ಚಿಸಲು ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಭಾರತೀಯ ಸೇನೆಯ ಮಾಹಿತಿಯನ್ನು ಐಎಸ್‌ಐಗೆ ಒದಗಿಸಿದ ಕಾರಣಕ್ಕಾಗಿ ಪಾಕಿಸ್ತಾನಿ ವ್ಯಕ್ತಿಯ ಬಂಧನ ಅವಧಿ ವಿಸ್ತರಿಸುವಂತೆ ಸರ್ಕಾರ ಕೋರಿದ್ದು ಆಧಾರಹಿತ ಎಂದು ನ್ಯಾಯಾಲಯ ತಿಳಿಸಿತು.