Allahabad High Court, Rahul Gandhi  
ಸುದ್ದಿಗಳು

ಲೋಕಸಭಾ ಸದಸ್ಯತ್ವದಿಂದ ರಾಹುಲ್ ಗಾಂಧಿ ಅನರ್ಹಗೊಳಿಸಲು ಕೋರಿಕೆ: ಅರ್ಜಿ ವಜಾಗೊಳಿಸಿದ ಅಲಾಹಾಬಾದ್ ಹೈಕೋರ್ಟ್

ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಅಪರಾಧಿ ಎನ್ನುವ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದರಿಂದ ಶಿಕ್ಷೆ ಜಾರಿಯಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Bar & Bench

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಾಹಾಬಾದ್ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ [ ಅಶೋಕ್ ಪಾಂಡೆ ಮತ್ತು ರಾಹುಲ್ ಗಾಂಧಿ ಇನ್ನಿತರರ ನಡುವಣ ಪ್ರಕರಣ].

ಗುಜರಾತ್ ನ್ಯಾಯಾಲಯ  ಮಾನನಷ್ಟ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿರುವುದರಿಂದ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ವಕೀಲ ಅಶೋಕ್ ಪಾಂಡೆ ಕೋರಿದ್ದರು.

ಆದರೆ ಆಗಸ್ಟ್ 2023 ರಲ್ಲಿ ಸುಪ್ರೀಂ ಕೋರ್ಟ್‌ ಮಾನಹಾನಿ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಅಪರಾಧಿ ಎನ್ನುವ ವಿಚಾರಣಾ ನ್ಯಾಯಾಲಯದ ತೀರ್ಪಿಗೆ ತಡೆ ನೀಡಿತ್ತು ಎಂದ ನ್ಯಾಯಮೂರ್ತಿಗಳಾದ ಶೇಖರ್ ಬಿ ಸರಾಫ್ ಮತ್ತು ಮಂಜಿವೆ ಶುಕ್ಲಾ ಅವರಿದ್ದ ಪೀಠ , ಒಮ್ಮೆ ಶಿಕ್ಷೆಗೆ ತಡೆ ನೀಡಿದ ನಂತರ ಸೆಕ್ಷನ್ 8(3) ಅಡಿಯಲ್ಲಿ ಅನರ್ಹತೆ ಜಾರಿಗೊಳಿಸಲಾಗದು ಎಂದಿದೆ.

ರಾಹುಲ್ ಗಾಂಧಿ 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ರಾಯ್‌ಬರೇಲಿ ಮತಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ಅರ್ಜಿದಾರ ಪಾಂಡೆ ಅವರ ಪ್ರಕಾರ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್‌ ನ್ಯಾಯಾಲಯ ರಾಹುಲ್‌ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಹೀಗಾಗಿ ಪ್ರಜಾಪ್ರತಿನಿಧಿ ಕಾಯಿದೆ 1951ರ ಸೆಕ್ಷನ್‌ 8(3) ಅಡಿಯಲ್ಲಿ ಅವರು ಸ್ವಯಂಚಾಲಿತವಾಗಿ ಅನರ್ಹಗೊಳ್ಳಬೇಕು. 2024ರ ಲೋಕಸಭಾ ಚುನಾವಣೆಗೆ ರಾಹುಲ್‌ ನಾಮಪತ್ರ ಸಲ್ಲಿಸಲು ಅನರ್ಹರಾಗಿದ್ದರೂ ಚುನಾವಣಾಧಿಕಾರಿಗಳು ಅವರ ನಾಮಪತ್ರ ಅಂಗೀಕರಿಸಿದ್ದಾರೆ ಎಂದಿದ್ದರು.

ಈ ವಾದ ಒಪ್ಪದ ಹೈಕೋರ್ಟ್‌ ಶಿಕ್ಷೆ ಜಾರಿಯಲ್ಲಿದ್ದರೆ ಮಾತ್ರ ಸೆಕ್ಷನ್ 8(3) ಅನ್ವಯಿಸಬಹುದು. ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿರುವುದರಿಂದ ಪ್ರಕರಣ ಇತ್ಯರ್ಥವಾಗುವವರೆಗೆ ಅದು ಜಾರಿಗೆ ಬರುವುದಿಲ್ಲ. ಮೇಲ್ವಿಚಾರಣಾ ನ್ಯಾಯಾಲಯ ಶಿಕ್ಷೆಗೆ ತಡೆ ನೀಡಿದ ಕೂಡಲೇ ಶಿಕ್ಷೆಯ ಭಯ ನಿವಾರಣೆಯಾಗುತ್ತದೆ. ಆ ಶಿಕ್ಷೆ ವಿಧಿಸದಂತೆ ತಾತ್ಕಾಲಿಕವಾಗಿ ತಡೆ ಪಡೆದ ವ್ಯಕ್ತಿಯನ್ನು ಅಪರಾಧಿ ಎನ್ನಲಾಗದು ಎಂದು ಅದು ಹೇಳಿತು.

ರಾಹುಲ್‌ ಪ್ರಕರಣವನ್ನು 2023ರ ಅಫ್ಜಲ್ ಅನ್ಸಾರಿ ಪ್ರಕರಣಕ್ಕೆ ಹೋಲಿಸಿದ್ದ ಅರ್ಜಿದಾರ ಅನ್ಸಾರಿ ಅವರ ಮೇಲ್ಮನವಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿಸಿತ್ತಾದರೂ ರಾಹುಲ್‌ ಅವರಿಗೆ ಇಂತಹ ಅನುಮತಿ ದೊರೆತಿಲ್ಲ ಎಂದಿದ್ದರು. ಆದರೆ ಇದನ್ನು ಒಪ್ಪದ ಹೈಕೋರ್ಟ್‌, ಶಿಕ್ಷೆಗೆ ತಾತ್ಕಾಲಿಕ ತಡೆ ನೀಡುವುದರಿಂದ ಉಂಟಾಗುವ ಕಾನೂನು ಪರಿಣಾಮ, ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಉಲ್ಲೇಖಿಸಿದರೂ ಅಥವಾ ಇಲ್ಲದಿದ್ದರೂ ವ್ಯತ್ಯಾಸಗೊಳ್ಳದು ಎಂದಿತು.

[ತೀರ್ಪಿನ ಪ್ರತಿ]

Ashok_Pandey_v__Rahul_Gandhi___Ors_.pdf
Preview