ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 42 ವರ್ಷಗಳ ಬಳಿಕ 74 ವರ್ಷದ ವ್ಯಕ್ತಿ ಉಳಿದ ಶಿಕ್ಷೆ ಅನುಭವಿಸಲು ಪೊಲೀಸರೆದುರು ಶರಣಾಗುವಂತೆ ಅಲಾಹಾಬಾದ್ ಹೈಕೋರ್ಟ್ ಈಚೆಗೆ ತೀರ್ಪಿತ್ತಿದೆ [ವೀರ್ ಸಿಂಗ್ ಮತ್ತಿತರರು ಹಾಗೂ ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].
ಪ್ರಕರಣ 1979ರಲ್ಲಿ ನಡೆದಿತ್ತು. ಲಲಿತಪುರದ ಬಟ್ವಾಹ ಗ್ರಾಮದ ಮನೆಗೆ ನುಗ್ಗಿ, ಬೆಲೆಬಾಳುವ ವಸ್ತುಗಳನ್ನು ದೋಚಿದ್ದ ಆರೋಪಿಗಳು ಆ ವೇಳೆ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದರು. ಆ ವೇಳೆ ಒಬ್ಬ ಮಹಿಳೆಯನ್ನು ಕೊಲೆ ಮಾಡಿದ್ದರು. ಮತ್ತೊಬ್ಬಾಕೆ ನಂತರ ಮೃತಪಟ್ಟಿದ್ದರು.
1983ರಲ್ಲಿ ಐದು ಜನರು ತಪ್ಪಿತಸ್ಥರೆಂದು ಸಾಬೀತಾಗಿತ್ತು. ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದರು. ಈ ಮಧ್ಯೆ ಮೇ 2, 1983ರಲ್ಲಿ ಎಲ್ಲರಿಗೂ ಜಾಮೀನು ದೊರೆತಿತ್ತು. ಮೇಲ್ಮನವಿ ಬಾಕಿ ಉಳಿದಿದ್ದ ಅವಧಿಯಲ್ಲಿ ನಾಲ್ವರು ಆರೋಪಿಗಳು ಸಾವನ್ನಪ್ಪಿದ್ದು ಅವರ ಅರ್ಜಿಗಳು ರದ್ದುಗೊಂಡಿದ್ದವು.
ಬಾಕಿ ಉಳಿದಿದ್ದ ಮತ್ತೊಬ್ಬ ಆರೋಪಿಯ ವಿಚಾರಣೆ ನಡೆದಾಗ ನ್ಯಾಯಮೂರ್ತಿಗಳಾದ ಸೌಮಿತ್ರ ದಯಾಳ್ ಸಿಂಗ್ ಮತ್ತು ಡಾ. ಗೌತಮ್ ಚೌಧರಿ ಅವರಿದ್ದ ಪೀಠ ಮೇಲ್ಮನವಿ ನಿರ್ಧರಿಸುವಲ್ಲಿನ ವಿಳಂಬದ ಬಗ್ಗೆ ವಿಷಾದ ವ್ಯಕ್ತಪಡಿಸಿತು.
"ಈ ಮೇಲ್ಮನವಿಯ ವಿಚಾರಣೆಗೆ 42 ವರ್ಷಗಳನ್ನು ತೆಗೆದುಕೊಂಡಿದ್ದಕ್ಕಾಗಿ ನ್ಯಾಯಾಲಯ ನಿರ್ದಿಷ್ಟವಾಗಿ ಪಕ್ಷಕಾರರಿಗೆ ಮತ್ತು ಒಟ್ಟಾರೆಯಾಗಿ ಸಮಾಜಕ್ಕೆ ವಿಷಾದ ವ್ಯಕ್ತಪಡಿಸುತ್ತದೆ. ಐದು ದಶಕಗಳ ದೀರ್ಘ ಅವಧಿಯಲ್ಲಿ ಪಕ್ಷಕಾರರಿಗೆ ನ್ಯಾಯ ದೊರಕಿಲ್ಲ. ವೀರ್ ಸಿಂಗ್, ಗಂಗಾಧರ್, ಧರ್ಮಲಾಲ್ ಮತ್ತು ಬಂಧು ಎಂಬ ನಾಲ್ವರು ಆರೋಪಿಗಳು/ಮೇಲ್ಮನವಿದಾರರು ನ್ಯಾಯ ಸಿಗದೆ ಸಾವನ್ನಪ್ಪಿದ್ದಾರೆ. ಸಂತ್ರಸ್ತರು ಕೂಡ ಅದೇ ಹಾದಿಯಲ್ಲಿದ್ದಾರೆ" ಎಂದು ನ್ಯಾಯಾಲಯ ವಿವರಿಸಿದೆ.
ವಿಚಾರಣಾ ನ್ಯಾಯಾಲಯ ನಾಲ್ಕು ವರ್ಷಗಳಲ್ಲಿ ತೀರ್ಪು ನೀಡಿದ್ದು ನಂತರ ಜವಾಬ್ದಾರಿ ಹೈಕೋರ್ಟ್ ವರ್ಗಾವಣೆಯಾಗಿದೆ ಎಂದ ನ್ಯಾಯಾಲಯ ಅಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ನೈಜ ಸಮಯದಲ್ಲಿ ನ್ಯಾಯ ಒದಗಿಸುವುದು ಸೂಕ್ತ ಎಂದಿದೆ.
ಅಂತೆಯೇ ಪ್ರಕರಣದಲ್ಲಿ ಜೀವಂತ ಇರುವ ಆರೋಪಿ 74 ವರ್ಷದ ಬಾಬು ಲಾಲ್ ತನಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯ ಉಳಿದ ಅವಧಿಯನ್ನು ಪೂರೈಸುವುದಕ್ಕಾಗಿ ಕೂಡಲೇ ಪೊಲೀಸರೆದುರು ಶರಣಾಗಬೇಕು ಇಲ್ಲದಿದ್ದರೆ ಆತನನ್ನು ಬಂಧಿಸಬೇಕಾಗುತ್ತದೆ ಅದು ಆದೇಶಿಸಿತು.