
ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಅನುಚಿತ ಅಭಿಪ್ರಾಯ ವ್ಯಕ್ತಪಡಿಸದಂತೆ ಸುಪ್ರೀಂ ಕೋರ್ಟ್ ಮಂಗಳವಾರ ನ್ಯಾಯಮೂರ್ತಿಗಳಿಗೆ ಎಚ್ಚರಿಕೆ ನೀಡಿದೆ [ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ಸಂಖ್ಯೆ1449/2024 ಮತ್ತು ಪೂರಕ ಸಮಸ್ಯೆಗಳಲ್ಲಿ ಅಲಹಾಬಾದ್ ಹೈಕೋರ್ಟ್ 17.03.2025 ರಂದು ಹೊರಡಿಸಿದ ಆದೇಶಕ್ಕೆ ಸಂಬಂಧಿಸಿದ ಸ್ವಯಂ ಪ್ರೇರಿತ ಪ್ರಕರಣ].
ಸಂತ್ರಸ್ತ ಮಹಿಳೆ ತಾನಾಗಿಯೇ ಅಪಾಯ ತಂದುಕೊಂಡಿದ್ದು ಆಕೆಯ ಮೇಲಿನ ಅತ್ಯಾಚಾರಕ್ಕೆ ಆಕೆಯೇ ಕಾರಣ ಎಂದು ಅಲಾಹಾಬಾದ್ ಹೈಕೋರ್ಟ್ ಈಚೆಗೆ ನೀಡಿದ್ದ ಹೇಳಿಕೆಗೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಆಕ್ಷೇಪ ವ್ಯಕ್ತಪಡಿಸಿದೆ.
ದೆಹಲಿಯ ಹೌಜ್ ಖಾಸ್‌ನಲ್ಲಿರುವ ಬಾರ್ ಒಂದರಲ್ಲಿ ಭೇಟಿಯಾದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 2024ರಲ್ಲಿ ಬಂಧಿತನಾಗಿದ್ದ ಆರೋಪಿಗೆ ಮಾರ್ಚ್ 11 ರಂದು ಜಾಮೀನು ಮಂಜೂರು ಮಾಡುವಾಗ ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಈ ಹೇಳಿಕೆ ನೀಡಿದ್ದರು.
ಪ್ರತಿಯೊಂದು ಪ್ರಕರಣದ ವಾಸ್ತವಾಂಶಗಳನ್ನು ಅವಲಂಬಿಸಿ ಜಾಮೀನು ಮಂಜೂರು ಮಾಡುವುದು ನ್ಯಾಯಾಧೀಶರ ವಿವೇಚನೆಗೆ ಬಿಟ್ಟ ವಿಷಯವಾದರೂ, ದೂರುದಾರರ ವಿರುದ್ಧದ ಇಂತಹ ಅನಗತ್ಯ ಅವಲೋಕನಗಳನ್ನು ತಪ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ಇದೀಗ ಮತ್ತೊಬ್ಬ ನ್ಯಾಯಾಧೀಶರು ಇನ್ನೊಂದು ಆದೇಶ ನೀಡಿದ್ದಾರೆ. ಹೌದು ಜಾಮೀನು ನೀಡಲಿ. ಆದರೆ ಸಂತ್ರಸ್ತೆಯೇ ತೊಂದರೆ ಆಹ್ವಾನಿಸಿಕೊಂಡಳು ಎಂಬ ಚರ್ಚೆ ಏಕೆ? ಅದರಲ್ಲಿಯೂ ನ್ಯಾಯ ಪ್ರಕ್ರಿಯೆಯ ಮತ್ತೊಂದು ತುದಿಯಲ್ಲಿರುವವರು ಇಂತಹ ವಿಚಾರ ಹೇಳುವಾಗ ಜಾಗರೂಕರಾಗಿರಬೇಕು” ಎಂದು ನ್ಯಾ. ಗವಾಯಿ ತಿಳಿ ಹೇಳಿದರು.
"ಸಂಪೂರ್ಣ ನ್ಯಾಯ ದೊರಕಿಸಿಕೊಡುವುದು ಮಾತ್ರವಲ್ಲದೆ ನ್ಯಾಯ ದೊರೆತಿದೆಯೇ ಎಂಬುದನ್ನೂ ನೋಡಿಕೊಳ್ಳಬೇಕು. ಸಾಮಾನ್ಯ ವ್ಯಕ್ತಿಯೊಬ್ಬರು ಇಂತಹ ಆದೇಶಗಳನ್ನು ಹೇಗೆ ಗ್ರಹಿಸುತ್ತಾರೆ ಎಂಬುದನ್ನು ಕೂಡ ಅರಿಯಬೇಕಾಗುತ್ತದೆ" ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ಅಪ್ರಾಪ್ತ ಸಂತ್ರಸ್ತೆಯ ಸ್ತನ ಹಿಡಿಯುವುದು, ಆಕೆ ಧರಿಸಿದ್ದ ಪೈಜಾಮಾದ ಲಾಡಿ ಕಳಚುವುದು ಹಾಗೂ ಆಕೆಯನ್ನು ಬಲವಂತವಾಗಿ ಕಿರಿದಾದ ಸೇತುವೆಯೊಂದರ ಕೆಳಗೆ ಎಳೆದೊಯ್ಯುವುದು ಅತ್ಯಾಚಾರ ಅಥವಾ ಅತ್ಯಾಚಾರ ಯತ್ನದ ಅಪರಾಧವಾಗದು ಎಂದು ಅಲಾಹಾಬಾದ್ ಹೈಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ರಾಮ್ ಮನೋಹರ್ ಸರಾಯಣ್ ಮಿಶ್ರಾ ಅವರು ನೀಡಿದ್ದ ಹೇಳಿಕೆಯ ಕುರಿತಂತೆ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅತ್ಯಾಚಾರ ಸಂತ್ರಸ್ತೆಯೇ ಅಪಾಯ ತಂದುಕೊಂಡಳು ಎಂದು ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ನೀಡಿದ್ದ ಹೇಳಿಕೆಗೂ ಆಕ್ಷೇಪಿಸಿತು.