ಲಖನೌ ಪಾಲಿಕೆ ವ್ಯಾಪ್ತಿಯಲ್ಲಿ ಆಶ್ರಯ ರಹಿತರ ಬಗ್ಗೆ ಮಾಹಿತಿ ಸಂಗ್ರಹಿಸುವುದಕ್ಕಾಗಿ ಯುವ ವಕೀಲರ ತಂಡವೊಂದನ್ನು ಅಲಾಹಾಬಾದ್ ಹೈಕೋರ್ಟ್ ಈಚೆಗೆ ರಚಿಸಿದೆ.
ಯುವ ವಕೀಲರಾದ ರಾಜ್ ಕುಮಾರ್ ಸಿಂಗ್, ಶೈಲೇಂದ್ರ ಸಿಂಗ್ ರಾಜಾವತ್, ಜಿತೇಂದ್ರ ನಾರಾಯಣ್ ಮಿಶ್ರಾ, ವಿಕಾಸ್ ಕುಮಾರ್ ಅಗರವಾಲ್, ರಾಣಿ ಸಿಂಗ್ ಮತ್ತು ಶ್ರೇಯಾ ಅಗರ್ವಾಲ್ ಅವರ ತಂಡವನ್ನು ರಚಿಸಿದ ನ್ಯಾಯಮೂರ್ತಿಗಳಾದ ರಾಜನ್ ರಾಯ್ ಮತ್ತು ಓಂ ಪ್ರಕಾಶ್ ಶುಕ್ಲಾ ಅವರಿದ್ದ ವಿಭಾಗೀಯ ಪೀಠ ಲಖನೌ ಪಾಲಿಕೆ ವ್ಯಾಪ್ತಿಯಲ್ಲಿನ ನಿರ್ಗತಿಕ ವ್ಯಕ್ತಿಗಳಿರುವ ಜಾಗಗಳಿಗೆ ಅರ್ಜಿದಾರರೊಂದಿಗೆ ತೆರಳಿ ಮುಂದಿನ ವಿಚಾರಣೆ ನಡೆಯಲಿರುವ ಸೆಪ್ಟೆಂಬರ್ 30ರೊಳಗೆ ವರದಿ ಸಲ್ಲಿಸುವಂತೆ ತಂಡಕ್ಕೆ ಸೂಚಿಸಿತು.
ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿರಾಶ್ರಿತರನ್ನು ಪತ್ತೆಹಚ್ಚಲು ರಾಜ್ಯವ್ಯಾಪಿ ಕಾರ್ಯೋನ್ಮುಖರಾಗುವಂತೆ ಮತ್ತು ಅಂತಹವರಿಗೆ ಆಶ್ರಯ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಗತ್ಯ ಪರಿಹಾರ ಒದಗಿಸುವಂತೆ ಹೈಕೋರ್ಟ್ ಈ ಹಿಂದೆ ಸೂಚಿಸಿತ್ತು.
ವಿಕಲಚೇತನರ ಹಕ್ಕುಗಳ ಕಾಯಿದೆ , ಮಾನಸಿಕ ಆರೋಗ್ಯ ಕಾಯಿದೆ ಮತ್ತು ನಗರ ನಿರಾಶ್ರಿತರಿಗೆ ಕೇಂದ್ರ ಸರ್ಕಾರದ ಆಶ್ರಯ ಯೋಜನೆ ಪ್ರಕಾರ ಪುನರ್ವಸತಿ ಕೋರಿ ವಕೀಲ ಜ್ಯೋತಿ ರಜ್‌ಪೂತ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಗೆ (ಪಿಐಎಲ್) ಸಂಬಂಧಿಸಿದಂತೆ ಈ ಆದೇಶ ನೀಡಲಾಗಿತ್ತು.
ಕೆಲವು ಸರ್ಕಾರಿ ಅಧಿಕಾರಿಗಳು ಪ್ರತಿಕ್ರಿಯೆ ಸಲ್ಲಿಸಿದ್ದರೂ, ಅಗತ್ಯ ದತ್ತಾಂಶವನ್ನು ದಾಖಲೆಯಲ್ಲಿ ನೀಡಿಲ್ಲ ಎಂದು ನ್ಯಾಯಾಲಯ ಇದೀಗ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಈ ಮಧ್ಯೆ ಲಖನೌ ಪಾಲಿಕೆ ವ್ಯಾಪ್ತಿಯಲ್ಲಿ ನಿರಾಶ್ರಿತರು ಇನ್ನೂ ಇದ್ದಾರೆ. ಸರ್ಕಾರಿ ಅಧಿಕಾರಿಗಳು ಕೆಲ ಯತ್ನಗಳನ್ನು ಕೈಗೊಂಡರೂ ಅವರಿಗೆ ಕೆಲ ಕೊರತೆಗಳಿವೆ ಎಂದು ಅರ್ಜಿದಾರರು ಹೇಳಿದರು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಿಸಲು ವಕೀಲರ ತಂಡವನ್ನು ನ್ಯಾಯಾಲಯ ರಚಿಸಿತು.
ಮುಂದಿನ ಸೂಚನೆಗಳಿಗೆ ಕಾಯದೆ ನ್ಯಾಯಾಲಯದ ಹಿಂದಿನ ಆದೇಶಗಳ ಅನುಸಾರ ಅಗತ್ಯ ಕ್ರಮಕ್ಕಾಗಿ ವರದಿಯನ್ನು ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳಿಗೆ ಒದಗಿಸುವಂತೆ ಆದೇಶಿಸಲಾಯಿತು.