ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 152 ರ ಅಡಿಯಲ್ಲಿ ದೇಶದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತಂದ ಆರೋಪದಡಿ ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಪತ್ತೆ ಹಚ್ಚುವ ಜಾಲತಾಣ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮತ್ತು ಪತ್ರಕರ್ತ ಮೊಹಮ್ಮದ್ ಜುಬೇರ್ ಅವರನ್ನು ಬಂಧಿಸದಂತೆ ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಮಧ್ಯಂತರ ರಕ್ಷಣೆ ನೀಡಿದೆ.
ಬಂಧನದಿಂದ ರಕ್ಷಣೆ ಕೋರಿ ಜುಬೇರ್ ಸಲ್ಲಿಸಿರುವ ಮನವಿಗೆ ವಿವರವಾದ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ನಳಿನ್ ಶ್ರೀವಾಸ್ತವ ಅವರಿದ್ದ ಪೀಠ ನಿರ್ದೇಶಿಸಿದೆ.
ಪ್ರಕರಣದ ಮುಂದಿನ ವಿಚಾರಣೆ ನಡೆಯಲಿರುವ 2025ರ ಜನವರಿ 6 ರವರೆಗೆ ಜುಬೇರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಅದು ಹೇಳಿದೆ.
ಅನೇಕ ಸಂದರ್ಭಗಳಲ್ಲಿ ದ್ವೇಷ ಭಾಷಣ ಮಾಡಿರುವ ಆರೋಪ ಹೊತ್ತಿರುವ ನರಸಿಂಹಾನಂದ ಅವರು ಸೆಪ್ಟೆಂಬರ್ 29 ರಂದು ಸಾರ್ವಜನಿಕ ಭಾಷಣವೊಂದರಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಭಾಷಣವನ್ನುಅವಹೇಳನಕರ ಮತ್ತು ದ್ವೇಷಪೂರಿತ ಎಂದು ಜುಬೇರ್ ತಮ್ಮ ಎಕ್ಸ್ ಖಾತೆಯಲ್ಲಿ ಜರೆದಿದ್ದರು.
ಹೀಗಾಗಿ ಅವರ ವಿರುದ್ಧ ದ್ವೇಷಕ್ಕೆ ಕುಮ್ಮಕ್ಕು ನೀಡಿದ ಆರೋಪದಡಿ ಗಾಜಿಯಾಬಾದ್‌ನ ದಾಸ್ನಾ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಅವರ ಬೆಂಬಲಿಗರು ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು.
ನಂತರ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ನರಸಿಂಹಾನಂದ್ ವಿರುದ್ಧ ಕೋಮು ದ್ವೇಷಕ್ಕೆ ಕುಮ್ಮಕ್ಕು ನೀಡಿದ ಮಾತ್ತು ಧಾರ್ಮಿಕ ಭಾವನೆಗೆ ಘಾಸಿ ತಂದ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿತ್ತು. ನರಸಿಂಹಾನಂದರನ್ನು ಬಂಧಿಸದಿದ್ದರೂ ಅವರನ್ನು ಪೊಲೀಸರು ಕರೆದೊಯ್ದಿದ್ದರು ಎಂದು ಅವರ ಅನುಯಾಯಿಗಳು ತಿಳಿಸಿದ್ದರು. ನಂತರ ದಾಸ್ನಾದೇವಿ ದೇವಸ್ಥಾನದಲ್ಲಿ ಪ್ರತಿಭಟನೆ ನಡೆದಿತ್ತು.
ಯತಿ ನರಸಿಂಹಾನಂದ ಸರಸ್ವತಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಉದಿತಾ ತ್ಯಾಗಿ ಅವರು ಸಲ್ಲಿಸಿದ ದೂರಿನ ಮೇರೆಗೆ ಜುಬೇರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ತನ್ನ ವಿರುದ್ಧ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಉದ್ದೇಶದಿಂದ ಅಕ್ಟೋಬರ್ 3 ರಂದು ಜುಬೇರ್ ನರಸಿಂಹಾನಂದ ಅವರ ಹಳೆಯ ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದಾರೆ ಎಂದು ತ್ಯಾಗಿ ಆರೋಪಿಸಿದ್ದರು.
ಜುಬೇರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196 (ಧರ್ಮಾಧಾರಿತ ದ್ವೇಷಕ್ಕೆ ಕುಮ್ಮಕ್ಕು), 228 (ಸುಳ್ಳು ಪುರಾವೆ ಸೃಷ್ಟಿ) , 299 (ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆ ಕೆರಳಿಸುವುದು) , 356(3) (ಮಾನಹಾನಿ) , ಮತ್ತು 351(2) (ಕ್ರಿಮಿನಲ್ ಬೆದರಿಕೆ) ಅಡಿ ಪ್ರಕರಣ ದಾಖಲಿಸಲಾಗಿತ್ತು. ತರುವಾಯ ಬಿಎನ್‌ಎಸ್ ಸೆಕ್ಷನ್ 152ರ ಅಡಿಯಲ್ಲಿಯೂ ಮೊಕದ್ದಮೆ ದಾಖಲಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ರದ್ದುಗೊಳಿಸುವಂತೆ ಮತ್ತು ಬಂಧನದಿಂದ ತಮಗೆ ರಕ್ಷಣೆ ನೀಡುವಂತೆ ಕೋರಿ ಜುಬೈರ್ ಹೈಕೋರ್ಟ್ ಮೆಟ್ಟಿಲೇರಿದ್ದರು.