ಉತ್ತರ ಪ್ರದೇಶದ ಜಿಲ್ಲಾ ನ್ಯಾಯಾಲಯಗಳ ಡಿ ದರ್ಜೆ ನೌಕರರನ್ನು ನ್ಯಾಯಾಂಗ ಅಧಿಕಾರಿಗಳ ನಿವಾಸಗಳಲ್ಲಿ ಮನೆಗೆಲಸ ಮಾಡಲು ಒತ್ತಾಯಿಸಲಾಗುತ್ತಿದೆ ಎಂದು ಆರೋಪಿಸಿದ್ದ ಅರ್ಜಿಯನ್ನು ಅಲಾಹಾಬಾದ್ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ [ಉತ್ತರ ಪ್ರದೇಶ ಅಂಜುಮನ್ ಹಿಮಾಯತ್ ಚಪ್ರಾಸಿಯನ್ ಸಂಘ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].
ಉತ್ತರ ಪ್ರದೇಶ ಅಂಜುಮನ್ ಹಿಮಾಯತ್ ಚಪ್ರಾಸಿಯಾ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಅರ್ಹವಲ್ಲ ಎಂದು ನ್ಯಾಯಮೂರ್ತಿ ಅಲೋಕ್ ಮಾಥುರ್ ಹೇಳಿದರು.
ಬೈಲಾಗಳನ್ನು ಪರಿಶೀಲಿಸಿದಾಗ ಸಂಘದ ಉದ್ದೇಶ ಉತ್ತಮ ಸೇವಾ ಪರಿಸ್ಥಿತಿಗಾಗಿ ಕ್ರಮ ಕೈಗೊಳ್ಳುವುದನ್ನು ಒಳಗೊಂಡಿದೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆಯಾದರೂ ತನ್ನ ಸದಸ್ಯರ ಪರವಾಗಿ ಕಾನೂನು ಕ್ರಮ ತೆಗೆದುಕೊಳ್ಳಲು ಸ್ಪಷ್ಟ ಅವಕಾಶ ಹೊಂದಿಲ್ಲ. ಅಂತಹ ಅಧಿಕಾರ ಇಲ್ಲದಿರುವಾಗ ಬೈಲಾಗಳ ಅಡಿ ಪ್ರಸ್ತುತ ಅರ್ಜಿಯನ್ನು ನಿರ್ವಹಿಸಲಾಗದು ಎಂದು ನ್ಯಾಯಾಲಯ ಹೇಳಿತು.
ಅಲ್ಲದೆ, ನ್ಯಾಯಾಧೀಶರು ತಮ್ಮ ಮನೆಗಳಲ್ಲಿ ತೀರ್ಪುಗಳನ್ನು ಬರೆಯುವಾಗ, ಕಡತಗಳನ್ನು ಪರಿಶೀಲಿಸುವಾಗ ಅವರಿಗೆ ಸಹಾಯ ಮಾಡಲು ಡಿ ದರ್ಜೆ ನೌಕರರು ಏಕೆ ಹಿಂದೆಗೆಯಬೇಕು ಎನ್ನುವ ನಿರ್ದಿಷ್ಟ ಪ್ರಶ್ನೆಗೆ ತೃಪ್ತಿದಾಯಕ ಉತ್ತರವನ್ನು ನೀಡಲು ಸಂಘವು ವಿಫಲವಾಗಿದ್ದನ್ನು ಸಹ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು.
ನ್ಯಾಯಾಲಯಗಳಿಂದ ನ್ಯಾಯಾಧೀಶರ ನಿವಾಸಗಳಿಗೆ ಕಡತಗಳನ್ನು ಕೊಂಡೊಯ್ಯುವುದನ್ನು ಬಲವಂತದ ದುಡಿಮೆ ಎಂದು ಕರೆಯಲಾಗುವುದಿಲ್ಲ ಎಂದು ಹೈಕೋರ್ಟ್ ಅನ್ನು ಪ್ರತಿನಿಧಿಸುವ ವಕೀಲರು ವಾದ ಮಂಡಿಸಿದ್ದನ್ನು ನ್ಯಾಯಾಲಯ ಪರಿಗಣಿಸಿತು.
ಅಧಿಕೃತ ಅವಧಿ ಹೊರತುಪಡಿಸಿ ವೈಯಕ್ತಿಕ ಕೆಲಸಕ್ಕಾಗಿ ಡಿ ದರ್ಜೆ ನೌಕರರನ್ನು ಮನೆಕೆಲಸಗಳಿಗೆ ನೇಮಿಸಿಕೊಳ್ಳದಂತೆ ಸಿವಿಲ್ ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಸಂಘ ಕೋರಿತ್ತು.
ಆದರೆ, ಹೈಕೋರ್ಟನ್ನು ಪ್ರತಿನಿಧಿಸುವ ವಕೀಲರು ರಿಟ್ ಅರ್ಜಿಯ ನಿರ್ವಹಣೆಗೆ ಆಕ್ಷೇಪ ವ್ಯಕ್ತಪಡಿಸಿದರು. ಮನೆಗೆಲಸದ ಆರೋಪಗಳಿದ್ದರೆ ವ್ಯಕ್ತಿಗಳು ಅದನ್ನು ವೈಯಕ್ತಿಕವಾಗಿ ಪ್ರಶ್ನಿಸಬಹುದು ಎಂದರು.
ನ್ಯಾಯಾಲಯದ ಸಿಬ್ಬಂದಿ ತಮ್ಮ ಕುಂದುಕೊರತೆಗಳ ಪರಿಹಾರಕ್ಕಾಗಿ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂಬ ಅಂಶವನ್ನು ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರು ವಿವಾದಕ್ಕೆಳೆಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]