Swami Rambhadracharya, Allahabad High Court 
ಸುದ್ದಿಗಳು

ಸ್ವಾಮಿ ರಾಮಭದ್ರಾಚಾರ್ಯ ವಿರುದ್ಧ ಎಸ್‌ಸಿ, ಎಸ್‌ಟಿ ಕಾಯಿದೆಯಡಿ ಎಫ್ಐಆರ್: ಅರ್ಜಿ ತಿರಸ್ಕರಿಸಿದ ಅಲಾಹಾಬಾದ್ ಹೈಕೋರ್ಟ್

ರಾಮಭಧ್ರಾಚಾರ್ಯರ ವಿರುದ್ಧದ ಆರೋಪ ಐಪಿಸಿ, ಎಸ್‌ಸಿ/ಎಸ್‌ಟಿ ಕಾಯಿದೆ ಅಥವಾ ಐಟಿ ಕಾಯಿದೆಯ ಸೆಕ್ಷನ್ 67ರ ಅಡಿಯಲ್ಲಿ ಅಪರಾಧವಲ್ಲ ಎಂದು ಹೈಕೋರ್ಟ್ ಹೇಳಿದೆ.

Bar & Bench

ಪರಿಶಿಷ್ಟ ಜಾತಿ  ಸಮುದಾಯದವರ ವಿರುದ್ಧ ಆಕ್ಷೇಪಾರ್ಹ  ಹೇಳಿಕೆ ನೀಡಿದ್ದ ಆರೋಪದ ಮೇಲೆ ಹಿಂದೂ ಆಧ್ಯಾತ್ಮಿಕ ನಾಯಕ ಮತ್ತು ಪದ್ಮವಿಭೂಷಣ ಪುರಸ್ಕೃತ ಸ್ವಾಮಿ ರಾಮಭದ್ರಾಚಾರ್ಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದ ಮನವಿಯನ್ನು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ [ಪ್ರಕಾಶ್ ಚಂದ್ರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .

ರಾಮಭಧ್ರಾಚಾರ್ಯರ ವಿರುದ್ಧದ ಆರೋಪ ಐಪಿಸಿ, ಎಸ್‌ಸಿ, ಎಸ್‌ಟಿ ಕಾಯಿದೆ ಅಥವಾ ಐಟಿ ಕಾಯಿದೆಯ ಸೆಕ್ಷನ್ 67ರ ಅಡಿಯಲ್ಲಿ  ಅಪರಾಧವಲ್ಲ ಎಂಬುದು ಸ್ಫಟಿಕದಷ್ಟು ಸ್ಪಷ್ಟವಾಗಿದೆ ಎಂದು ನ್ಯಾಯಮೂರ್ತಿ ಸೌರಭ್ ಶ್ರೀವಾಸ್ತವ ಅವರು ಅಕ್ಟೋಬರ್ 4ರಂದು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.

ಈ ವರ್ಷದ ಜನವರಿಯಲ್ಲಿ, ಸ್ವಾಮಿ ರಾಮಭದ್ರಾಚಾರ್ಯರು " ಶ್ರೀರಾಮನನ್ನು ಪೂಜಿಸದವರು " ಎಂದು ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ  ಟೀಕೆಗೆ ಗುರಿಯಾಗಿತ್ತು. ನಂತರ ವಿವಾದದ ಕುರಿತು ಪ್ರತಿಕ್ರಿಯಿಸಿದ್ದ ಅವರು , ತಮ್ಮ ಹೇಳಿಕೆಗಳು ಜಾತಿವಾದಿ ಆಗಿರಲಿಲ್ಲ ಎಂದಿದ್ದರು.

ಈ ವರ್ಷದ ಫೆಬ್ರವರಿಯಲ್ಲಿ, ಸ್ವಾಮಿ ರಾಮಭದ್ರಾಚಾರ್ಯರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲು ಪ್ರಕಾಶ್ ಚಂದ್ರ ಎಂಬುವರು ಮಾಡಿದ ಮನವಿಯನ್ನು ಪ್ರಯಾಗರಾಜ್‌ನ ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 156 (3) ಅಡಿಯಲ್ಲಿ ಚಂದ್ರ ಅವರು ಈ ಅರ್ಜಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯ ಅರ್ಜಿ ನಿರ್ವಹಿಸಲು ಸಾಧ್ಯವಿಲ್ಲ ಎಂದು ವಜಾಗೊಳಿಸಿದ ನಂತರ, ಚಂದ್ರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು.

ತನ್ನ ಅಕ್ಟೋಬರ್ 4 ರ ತೀರ್ಪಿನಲ್ಲಿ ಹೈಕೋರ್ಟ್‌ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ. ಸಿಆರ್‌ಪಿಸಿಯ ಸೆಕ್ಷನ್ 156 (3) ರ ಅಡಿಯಲ್ಲಿ ಈ ವಿಷಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಚಂದ್ರು ಕೋರಲು ಸಾಧ್ಯವಿಲ್ಲ ಎಂದು ಅದು ಹೇಳಿದೆ. ಹೀಗಾಗಿ ಅದು ಮೇಲ್ಮನವಿಯನ್ನು ವಜಾಗೊಳಿಸಿತು.