Sambhal Masjid 
ಸುದ್ದಿಗಳು

ರಂಜಾನ್ ಮಾಸ: ಸಂಭಲ್ ಮಸೀದಿಗೆ ಬಣ್ಣ ಬಳಿಯುವಂತೆ ಎಎಸ್ಐಗೆ ಅಲಾಹಾಬಾದ್ ಹೈಕೋರ್ಟ್ ಸೂಚನೆ; ಮಸೀದಿಗೆ ವೆಚ್ಚ ಭರಿಸುವ ಹೊಣೆ

ಸುಣ್ಣದ ಪದರ ಎಲ್ಲೆಲ್ಲಿ ಎದ್ದಿದೆಯೋ ಅಥವಾ ಬಣ್ಣ ಬಳಿಯುವ ಅಗತ್ಯ ಎಲ್ಲೆಲ್ಲಿ ಇದೆಯೋ ಸ್ಮಾರಕದ ಆ ಎಲ್ಲಾ ಭಾಗಗಳಿಗೆ ಬಣ್ಣ ಬಳಿಯುವ ಅಗತ್ಯವಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

Bar & Bench

ಸಂಭಲ್‌ನಲ್ಲಿರುವ ವಿವಾದಿತ ಶಾಹಿ ಜಾಮಾ ಮಸೀದಿಯ ಹೊರಭಾಗಕ್ಕೆ ಇನ್ನೊಂದು ವಾರದಲ್ಲಿ ಬಣ್ಣ ಬಳಿಯುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ಬುಧವಾರ ನಿರ್ದೇಶನ ನೀಡಿರುವ ಅಲಹಾಬಾದ್ ಹೈಕೋರ್ಟ್ ಅದಕ್ಕೆ ತಗಲುವ ವೆಚ್ಚವನ್ನು ಮಸೀದಿ ನಿರ್ವಹಣಾ ಸಮಿತಿಗೆ ಪಾವತಿಸುವಂತೆ ಆದೇಶಿಸಿದೆ.

ಮಸೀದಿಯ ಇಡೀ ಕಟ್ಟಡಕ್ಕೆ ಈಗಾಗಲೇ ಎನಾಮೆಲ್‌ ಪೇಂಟ್‌ ಬಳಿದು ಅದು ಉತ್ತಮ ಸ್ಥಿತಿಯಲ್ಲಿರುವುದರಿಂದ ರಂಜಾನ್‌ ಹಿನ್ನೆಲೆಯಲ್ಲಿ ಬಣ್ಣ ಬಳಿಯುವ ಅಗತ್ಯವಿಲ್ಲ ಎಂದು ಎಎಸ್‌ಐ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿತ್ತು.

ಆದರೆ ಮಸೀದಿಯ ಹೊರಭಾಗಕ್ಕೆ ಬಣ್ಣ ಬಳಿಯುವ ಕೆಲಸ ತಡೆಯಲು ಎಎಸ್ಐ ಯಾವುದೇ ಸೂಕ್ತ ಉತ್ತರವನ್ನು ನೀಡಿಲ್ಲ ಎಂದು ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್‌ವಾಲ್‌ ಅಭಿಪ್ರಾಯಪಟ್ಟರು.

ಸುಣ್ಣದ ಪದರ ಎಲ್ಲೆಲ್ಲಿ ಎದ್ದಿದೆಯೋ ಅಥವಾ ಬಣ್ಣ ಬಳಿಯುವ ಅಗತ್ಯ ಎಲ್ಲೆಲ್ಲಿ ಇದೆಯೋ ಸ್ಮಾರಕದ ಆ ಎಲ್ಲಾ ಭಾಗಗಳಿಗೆ ಬಣ್ಣ ಬಳಿಯುವ ಅಗತ್ಯವಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಒಂದು ವಾರದೊಳಗೆ ಸುಣ್ಣ ಬಳಿಯುವ ಕೆಲಸವನ್ನು ಪೂರ್ಣಗೊಳಿಸಲು ನ್ಯಾಯಾಲಯ ಎಎಸ್‌ಐಗೆ ನಿರ್ದೇಶನ ನೀಡಿದೆ. ಮಸೀದಿ ಸಮಿತಿ ಬಣ್ಣ ಬಳಿಯುವ ವೆಚ್ಚ ಭರಿಸಬೇಕು ಎಂದು ನ್ಯಾಯಾಲಯ ಇದೇ ವೇಳೆ ಸೂಚಿಸಿದೆ. ಸುಣ್ಣ ಬಳಿಯುವ ಕೆಲಸ ಮುಗಿದ ಒಂದು ವಾರದೊಳಗೆ ಅದನ್ನು ಮರುಪಾವತಿಸಬೇಕು ಎಂದು ಪೀಠ ಹೇಳಿದೆ.

ಸ್ಮಾರಕಕ್ಕೆ ಹಾನಿಯಾಗದಂತೆ ಗೋಡೆಗಳ ಮೇಲೆ ಯಾವುದೇ ಹೆಚ್ಚುವರಿ ದೀಪಗಳನ್ನು ಅಳವಡಿಸಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆದರೂ, ಫೋಕಸ್ ದೀಪಗಳು ಅಥವಾ ಎಲ್ಇಡಿ ದೀಪಗಳನ್ನು ಬಳಸಿಕೊಂಡು ಕಟ್ಟಡದ ಹೊರಾಂಗಣವನ್ನು ಬೆಳಗಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಕೆಲ ತಿಂಗಳುಗಳ ಹಿಂದೆ ಮಸೀದಿ ಸಮೀಕ್ಷೆ ನಡೆಸುವಂತೆ ಸಿವಿಲ್ ನ್ಯಾಯಾಲಯ ಆದೇಶ ನೀಡಿದ ನಂತರ ಸಂಭಲ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಮೊಘಲರ ಕಾಲದಲ್ಲಿ ದೇವಾಲಯ ಕೆಡವಿ ಅದರ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ವಕೀಲ ಹರಿಶಂಕರ್ ಜೈನ್ ಹಾಗೂ ಇತರ ಏಳು ಮಂದಿ ಸಲ್ಲಿಸಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯ ಮಸೀದಿ ಸಮೀಕ್ಷೆಗೆ ನಿರ್ದೇಶಿಸಿತ್ತು.

ನಂತರ ಮಂಗಳೂರಿನ ಮಳಲಿ ಮಸೀದಿ ಸೇರಿದಂತೆ ದೇಶದ ಎಲ್ಲಾ ವಿವಾದಿತ ಪೂಜಾ ಸ್ಥಳಗಳ ಕುರಿತ ಪ್ರಕರಣಗಳ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಂಪೂರ್ಣ ತಡೆ ನೀಡಿತ್ತು.

ಈ ಮಧ್ಯೆ ರಂಜಾನ್‌ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ನಿರ್ವಹಣಾ ಚಟುವಟಿಕೆ ನಡೆಸುವುದಕ್ಕೆ ಉತ್ತರ ಸಂಭಲ್‌ನ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಆಕ್ಷೇಪಣೆ ಎತ್ತಿದ್ದರು. ಇದರಿಂದಾಗಿ ಮಸೀದಿ ನಿರ್ವಹಣಾ ಸಮಿತಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Committee_Of_Management__Jami_Masjid_Sambhal_v_Hari_Shankar_Jain___Ors (1).pdf
Preview