ಅತ್ಯಾಚಾರ ಪ್ರಕರಣದಲ್ಲಿ ವಕೀಲರೊಬ್ಬರಿಗೆ ನಿರೀಕ್ಷಣಾ ಜಾಮೀನು ನೀಡುವ ಸಂದರ್ಭದಲ್ಲಿ ಅಲಾಹಾಬಾದ್ ಹೈಕೋರ್ಟ್ “ಮದುವೆಯಾಗಿರುವುದನ್ನು ಒಪ್ಪಿಕೊಂಡ ನಂತರ ಅತ್ಯಾಚಾರದ ಆರೋಪ ಸುಳ್ಳಾಗುತ್ತದೆ” ಎಂದು ಅಭಿಪ್ರಾಯಪಟ್ಟಿದೆ.
ಸಂತ್ರಸ್ತೆ ಅರ್ಜಿದಾರರೊಂದಿಗೆ ಲೈಂಗಿಕ ಸಂಬಂಧದಲ್ಲಿ ಸ್ಪಷ್ಟವಾಗಿ ತೊಡಗಿಕೊಂಡಿರುವುದು ಮತ್ತು ಬಳಿಕ ಆತ ಆಕೆಯನ್ನು ನೇಪಾಳದ ಪಶುಪತಿನಾಥ ದೇಗುಲದಲ್ಲಿ ಮದುವೆಯಾಗಿರುವುದನ್ನು ಮನಗಂಡ ನ್ಯಾಯಮೂರ್ತಿ ಸಿದ್ಧಾರ್ಥ್ ಅವರಿದ್ದ ಏಕಸದಸ್ಯ ಪೀಠ ಅರ್ಜಿದಾರ ವೃತ್ತಿಯಿಂದ ವಕೀಲರಾಗಿರುವ ವಿಧಾನ್ ವ್ಯಾಸ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತು.
ಶಿವಶಂಕರ್ ಮತ್ತು ಕರ್ನಾಟಕ ಸರ್ಕಾರಣ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಹಾಗೂ ಮುರಳೀಧರ್ ಸೋನಾರ್ ಮತ್ತು ಮಹಾರಾಷ್ಟ್ರ ಸರ್ಕಾರ ಪ್ರಕರಣದಲ್ಲಿ ದೊರೆತಿರುವ ತೀರ್ಪನ್ನು ಆಧರಿಸಿ ನ್ಯಾಯಾಲಯ ಪ್ರಕರಣದಲ್ಲಿ ಅರ್ಜಿದಾರರಿಗೆ ಜಾಮೀನು ನೀಡಿದೆ.
ವಿವಾಹವನ್ನು ಒಪ್ಪಿಕೊಳ್ಳಲಾಗಿದೆ. ಮದುವೆಯಾಗಿರುವುದನ್ನು ಒಪ್ಪಿಕೊಂಡ ನಂತರ ಅರ್ಜಿದಾರರ ವಿರುದ್ಧ ಮಾಡಲಾಗಿರುವ ಆರೋಪ ಸುಳ್ಳಾಗುತ್ತದೆ. ಮದುವೆಯ ನಂತರ ಪಕ್ಷಗಳ ನಡುವೆ ವಿವಾದ ಉಂಟಾದರೆ ಅದನ್ನು ಅತ್ಯಾಚಾರದ ಆರೋಪದಿಂದ ಮುಚ್ಚಲಾಗದು ಎಂದು ನ್ಯಾಯಾಲಯ ತಿಳಿಸಿದೆ.
ಅರ್ಜಿದಾರರ ವಿರುದ್ಧದ ಆರೋಪಗಳು ಸ್ಪಷ್ಟವಾಗಿಲ್ಲ. ಇದು ಎರಡು ಪಕ್ಷಗಳ ನಡುವಣ ವ್ಯಾವಹಾರಿಕ ವಿವಾದದಂತೆ ತೋರುತ್ತದೆ ಎಂದಿರುವ ನ್ಯಾಯಾಲಯ ಸಿಆರ್‌ಪಿಸಿ ಸೆಕ್ಷನ್ 173 (2) ರ ಅಡಿಯಲ್ಲಿ ಸಲ್ಲಿಸಲಾದ ಪೊಲೀಸ್ ವರದಿ ಬಗ್ಗೆ ನ್ಯಾಯಾಲಯ ಸಂಜ್ಞೇಯತೆ (cognizance) ಪಡೆಯುವವರೆಗೆ ಅರ್ಜಿದಾರ ನಿರೀಕ್ಷಣಾ ಜಾಮೀನಿನಲ್ಲಿರುತ್ತಾರೆ ಎಂದು ಹೈಕೋರ್ಟ್ ಹೇಳಿದೆ.
ಸಂತ್ರಸ್ತೆ ಮತ್ತು ಅರ್ಜಿದಾರರ ನಡುವಿನ ವ್ಯಾವಹಾರಿಕ ವ್ಯಾಜ್ಯದಿಂದಾಗಿ ಅರ್ಜಿದಾರರ ವಿರುದ್ಧ ಅತ್ಯಾಚಾರದ ಆರೋಪ ಮಾಡಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಪ್ರಥಮ ವರ್ತಮಾನ ವರದಿಯಲ್ಲಿಯೂ ಕೂಡ ಎಲ್ಲಿಯೂ ಅರ್ಜಿದಾರ ಸಂತ್ರಸ್ತೆಯು ತನ್ನ ಮೇಲೆ, ತನ್ನ ಸಹಮತಕ್ಕೆ ವಿರುದ್ಧವಾಗಿ ದೈಹಿಕ ದೌರ್ಜನ್ಯ ಎಸಗಲಾದ ಬಗ್ಗೆ ಎಲ್ಲಿಯೂ ಮಾಹಿತಿ ನೀಡಿಲ್ಲದೆ ಇರುವುದನ್ನೂ ಸಹ ನ್ಯಾಯಾಲಯ ಗಮನಿಸಿತು.
ಸಂತ್ರಸ್ತೆ ಸಾಫ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಅರ್ಜಿದಾರರನ್ನು ತಮ್ಮ ಕಂಪೆನಿಯಲ್ಲಿ ವಕೀಲರಾಗಿ ಕೆಲಸ ಮಾಡುವಂತೆ ತೊಡಗಿಸಿಕೊಂಡಿದ್ದರು. ಆಕೆಯ ವಿಶ್ವಾಸಗಳಿಸಿದ ಅರ್ಜಿದಾರ ಷೇರುಪತ್ರಗಳನನ್ನು ವರ್ಗಾಯಿಸಿ ವಕೀಲನಾಗಿದ್ದರೂ ಆಕೆಯ ಕಂಪೆನಿಯ ನಿರ್ದೇಶಕರಾದರು. 2018ರಲ್ಲಿ ಅರ್ಜಿದಾರ ಸಂತ್ರಸ್ತೆಯ ಮನೆ ಹಾಗೂ ಕಚೇರಿಗಳಿಗೆ ಹೋಗಿ ಬರುತ್ತಿದ್ದರು. ಅಲ್ಲದೆ ಅವರು ಹೊರಗೆ ಕೂಡ ಸಂಧಿಸುತ್ತಿದ್ದರು. ಏಪ್ರಿಲ್ 2018ರಲ್ಲಿ ಚಂಡೀಗಡದ ತಾಜ್ ಹೋಟೆಲ್‌ನಲ್ಲಿ ತಂಗಿದ್ದರು. ತಮ್ಮ ವೈಯಕ್ತಿಕ ಖರ್ಚು ವೆಚ್ಚಗಳನ್ನು ಕಂಪೆನಿಯಿಂದ ಪಡೆದುಕೊಂಡಿದ್ದರು. ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ನಂಬಿಸಿದ ಅರ್ಜಿದಾರ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದರು. ಆದರೆ ಆಕೆಯನ್ನು ಮದುವೆಯಾಗುವುದನ್ನು ತಪ್ಪಿಸುತ್ತಿದ್ದರು. ನಂತರ ಅವರು ಮುಂಬೈ, ನೇಪಾಳ, ದುಬೈಗೆ ತೆರಳಿದ್ದರು. ಅರ್ಜಿದಾರರು 2019ರ ಆಗಸ್ಟ್‌ನಲ್ಲಿ ನೇಪಾಳದ ಪಶುಪತಿನಾಥ ದೇಗುಲದಲ್ಲಿ ಆಕೆಯನ್ನು ಪತ್ನಿಯಾಗಿ ಸ್ವೀಕರಿಸಿದ್ದರು ಎಂದು ವಾದಿಸಲಾಗಿತ್ತು.
ಸಂತ್ರಸ್ತೆ ಸಲ್ಲಿಸಿದ ಕೌಂಟರ್ ಅಫಿಡವಿಟ್ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ ಯಾವ ಆಧಾರದ ಮೇಲೆ ಆರೋಪ ಹೊರಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ಸ್ಪಷ್ಟವಾಗಿಲ್ಲ. ಕೌಂಟರ್ ಅಫಿಡವಿಟ್‌ನ ಪ್ರಮಾಣಿತ ಹೇಳಿಕೆಯ ಜಾಗ ಖಾಲಿ ಇದೆ. ಇದು ದೋಷಯುಕ್ತವಾಗಿದ್ದು ಕಾನೂನಿಗೆ ಅನುಗುಣವಾಗಿ ಇಲ್ಲ. ಆದ್ದರಿಂದ ಅಫಿಡವಿಟ್ಟನ್ನು ನಿರ್ಲಕ್ಷಿಸಬಹುದು ಎಂಬುದಾಗಿ ನ್ಯಾಯಾಲಯ ತಿಳಿಸಿದೆ.