Kerala High Court and Youtube 
ಸುದ್ದಿಗಳು

ನ್ಯಾಯಮೂರ್ತಿಗಳ ವಿರುದ್ಧ ಆರೋಪ: ಯೂಟ್ಯೂಬ್‌ನಲ್ಲಿ ಕ್ಷಮೆಯಾಚನೆ ವಿಡಿಯೋ ಪ್ರಕಟಿಸುವಂತೆ ಕೇರಳ ಹೈಕೋರ್ಟ್ ಆದೇಶ

ಉಚ್ಚ ನ್ಯಾಯಾಲಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯುಳ್ಳ ವೀಡಿಯೊವನ್ನು ಆರೋಪಿ ತನ್ನ ಯೂಟ್ಯೂಬ್ ವಾಹಿನಿಯಲ್ಲಿ ಪ್ರಸಾರ ಮಾಡಿದ್ದರು. ಈಗ ಅದೇ ವಾಹಿನಿಯಲ್ಲಿ ಅವರು ಕ್ಷಮಾಪಣೆ ವಿಡಿಯೋ ಪ್ರಸಾರ ಮಾಡಬೇಕು ಎಂದು ಸೂಚಿಸಿದ ಪೀಠ.

Bar & Bench

ಹೈಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಪ್ರಸಾರ ಮಾಡಿ ನ್ಯಾಯಾಂಗ ನಿಂದನೆಗೆ ಕಾರಣವಾದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ವಿ ಎಸ್ ಅಚ್ಯುತಾನಂದನ್ ಅವರ ಮಾಜಿ ಖಾಸಗಿ ಕಾರ್ಯದರ್ಶಿ ಕೆ ಎಂ ಶಾಜಹಾನ್ ತಮ್ಮ ಯೂಟ್ಯೂಬ್‌ ವಾಹಿನಿಯಲ್ಲಿ ಕ್ಷಮೆಯಾಚನೆ ವಿಡಿಯೋ ಪ್ರಕಟಿಸಬೇಕು ಎಂದು ಕೇರಳ ಹೈಕೋರ್ಟ್‌ ಆದೇಶಿಸಿದೆ [ನ್ಯಾಯಾಲಯ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಮೊಕದ್ದಮೆ ಮತ್ತು ಕೆ ಎಂ ಶಾಜಹಾನ್‌ ನಡುವಣ ಪ್ರಕರಣ].

ತಾನು ಬೇಷರತ್ ಕ್ಷಮೆ ಯಾಚಿಸಲು ಸಿದ್ಧ ಎಂದು ಶಾಜಹಾನ್‌ ಮನವಿ ಮಾಡಿದ ಬಳಿಕ ನ್ಯಾಯಮೂರ್ತಿಗಳಾದ ಪಿ ಬಿ ಸುರೇಶ್ ಕುಮಾರ್ ಮತ್ತು ಸಿ ಎಸ್ ಸುಧಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು. ಇದಕ್ಕೂ ಮುನ್ನ ಶಾಜಹಾನ್‌ ತಾನು ನ್ಯಾಯಾಂಗ ನಿಂದನೆ ಮಾಡಿಲ್ಲ ಎಂದು ಅಫಿಡವಿಟ್‌ ಸಲ್ಲಿಸಿದ್ದರು.

"ತಾನು ನ್ಯಾಯಾಂಗದ ನಿಂದನೆ ಮಾಡಿರುವುದಾಗಿ ಒಪ್ಪಿಕೊಂಡ ಬಳಿಕ ಆಕ್ಷೇಪಾರ್ಹ ವೀಡಿಯೊವನ್ನು ಪ್ರಸಾರ ಮಾಡಿದ್ದಕ್ಕಾಗಿ ನಿಯಮಾವಳಿಯ ನಿಯಮ 14 (ಎ) ನಲ್ಲಿ ಒಳಗೊಂಡಿರುವ ನಿಬಂಧನೆಗೆ ಅನುಗುಣವಾಗಿ ವಿಷಾದ ವ್ಯಕ್ತಪಡಿಸುವ ವಿಡಿಯೋವನ್ನು ಅದೇ ಯೂಟ್ಯೂಬ್ ವಾಹಿನಿಯಲ್ಲಿ ಪ್ರಸಾರ ಮಾಡಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

ಬೇಷರತ್ ಕ್ಷಮೆಯಾಚಿಸಲು ಜೂನ್ 5ರಂದು ಅನುಮತಿಸಿದ್ದ ನ್ಯಾಯಾಲಯ ಪ್ರಕರಣವನ್ನು ಜೂನ್ 6ಕ್ಕೆ ಮುಂದೂಡಲಾಗಿತ್ತು. ಆದರೆ ಅಂದು ಶಾಜಹಾನ್‌ ಹಾಜರಾಗದೇ ಇದ್ದುದರಿಂದ ಜೂನ್ 8ಕ್ಕೆ ಪ್ರಕರಣ ಮುಂದೂಡಲಾಗಿತ್ತು. ಅಂದು ವಿಚಾರಣೆ ನಡೆಸಿದಾಗ ಶಾಜಹಾನ್‌ ಬೇಷರತ್‌ ಕ್ಷಮೆಯಾಚಿರುವ ಅಫಿಡವಿಟ್‌ ಸಲ್ಲಿಸಿರಲಿಲ್ಲ ಎಂದು ನ್ಯಾಯಾಲಯ ಗಮನಿಸಿತು.

ಹೀಗಾಗಿ ಅಫಿಡವಿಟ್‌ ಸ್ವೀಕರಿಸಲು ಸಾಧ್ಯವಿಲ್ಲ ಮತ್ತು ಪ್ರಕರಣದ ವಿಚಾರಣೆ ಮುಂದುವರೆಸಲಾಗುವುದು ಎಂದು ಅದು ಎಚ್ಚರಿಕೆ ನೀಡಿದಾಗ ಶಾಜಹಾನ್‌ ಬೇಷರತ್‌ ಕ್ಷಮೆ ಯಾಚಿಸಲು ಸಿದ್ಧವಿರುವುದಾಗಿ ತಿಳಿಸಿದರು.

ಅಲ್ಲದೆ ತಾನು ಮಾಡಿದ್ದ ಆರೋಪ ಹಿಂಪಡೆದಿರುವ ಮತ್ತು ವಿಷಾದ ವ್ಯಕ್ತಪಡಿಸುವ ವೀಡಿಯೊವನ್ನು ಯೂಟ್ಯೂಬ್‌ ವಾಹಿನಿಯಲ್ಲಿ ಪ್ರಸಾರ ಮಾಡಲು ಮುಂದಾಗಿರುವುದಾಗಿ ಅವರು ವಿವರಿಸಿದರು. ಹಾಗೆಯೇ ಮಾಡುವಂತೆ ಹಾಗೂ ಕ್ಷಮೆಯಾಚನೆಯ ಲಿಂಕ್‌ ಅನ್ನು ಎಲೆಕ್ಟ್ರಾನಿಕ್‌ ಸಾಧನದಲ್ಲಿ ತನಗೆ ಸಲ್ಲಿಸುವಂತೆ ಸೂಚಿಸಿದ ನ್ಯಾಯಾಲಯ ಜೂನ್ 15ಕ್ಕೆ ಪ್ರಕರಣ ಮುಂದೂಡಿತು.