ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ, ಒಳ ಮೀಸಲಾತಿ ಹಂಚಿಕೆ ಮಾಡಿ ಬಿಜೆಪಿ ನೇತೃತ್ವದ ಹಿಂದಿನ ರಾಜ್ಯ ಸರ್ಕಾರ ಮಾಡಿದ್ದ ಆದೇಶವನ್ನು ಬದಿಗೆ ಸರಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ಎರಡು ವಾರ ಕಾಲಾವಕಾಶ ನೀಡಿದೆ.
ಬೆಂಗಳೂರಿನ ಎಚ್ ರವಿ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಪರವಾಗಿ ಹಾಜರಾದ ವಕೀಲರು ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದನ್ನು ಪುರಸ್ಕರಿಸಿದ ಪೀಠವು ವಿಚಾರಣೆಯನ್ನು ಎರಡು ವಾರಗಳ ನಂತರ ವಿಚಾರಣೆಗೆ ಪಟ್ಟಿ ಮಾಡುವಂತೆ ಆದೇಶಿಸಿ, ವಿಚಾರಣೆ ಮುಂದೂಡಿತು.
ಹಿಂದಿನ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರ ನೇತೃತ್ವದ ಸಂಪುಟ ಉಪ ಸಮಿತಿಯು ಶೇ. 17 ಮೀಸಲಾತಿಯನ್ನು 101 ಪರಿಶಿಷ್ಟ ಜಾತಿಗಳನ್ನು ಜನಸಂಖ್ಯೆಗೆ ಅನುಗುಣವಾಗಿ ನಾಲ್ಕು ವರ್ಗಗಳನ್ನಾಗಿ ಪ್ರತ್ಯೇಕಿಸಿ ಮೀಸಲಾತಿ ಹಂಚಿಕೆ ಮಾಡಿದೆ ಎನ್ನಲಾಗಿದೆ. ಸಂಪುಟ ಉಪ ಸಮಿತಿಯ ವರದಿಯು ಸಾರ್ವಜನಿಕಗೊಳಿಸಲಾಗಿಲ್ಲ. ಹೀಗಾಗಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಸಂಪುಟ ಉಪ ಸಮಿತಿಯ ಶಿಫಾರಸ್ಸು ಆಧರಿಸಿ 2023ರ ಮಾರ್ಚ್ 27ರಂದು ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ಮೀಸಲಾತಿ ವರ್ಗೀಕರಿಸಿ ಆದೇಶ ಮಾಡಿದೆ. ಅಲ್ಲದೇ, ಅದನ್ನು ರಾಜ್ಯಪಾಲರ ಒಪ್ಪಿಗೆಯ ಬಳಿಕ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಮೊದಲ ಗುಂಪಿನಲ್ಲಿ ಆದಿ ದ್ರಾವಿಡ, ಭಾಂಬಿ, ಮಾದಿಗ, ಸಮಗಾರ ಜಾತಿಗಳನ್ನು ಉಲ್ಲೇಖಿಸಲಾಗಿದ್ದು, ಅವುಗಳಿಗೆ ಶೇ. 6, ಎರಡನೇ ಗುಂಪಿನಲ್ಲಿ ಆದಿ ಕರ್ನಾಟಕ, ಚಲವಾದಿ, ಚನ್ನದಾಸರ, ಹೊಲೆಯ, ಮಹರ್ ಜಾರಿಗಳನ್ನು ಉಲ್ಲೇಖಿಸಿದ್ದು, ಅವುಗಳಿಗೆ ಶೇ. 5..5, ಮೂರನೇ ಗುಂಪಿನಲ್ಲಿ ಬಂಜಾರ ಮತ್ತು ಸಮಾನ ಜಾತಿಗಳು, ಭೋವಿ ಮತ್ತು ಸಮಾನ ಜಾತಿಗಳು, ಕೊರಚ ಮತ್ತು ಕೊರಮ ಜಾತಿಗಳನ್ನು ಉಲ್ಲೇಖಿಸಿ, ಶೇ. 4.5 ಹಾಗೂ ನಾಲ್ಕನೇ ಗುಂಪಿನಲ್ಲಿ 1, 2 ಮತ್ತು 3ನೇ ಗುಂಪಿನಲ್ಲಿ ಸ್ಥಾನ ಪಡೆಯದ, ಅಸ್ಪೃಶ್ಯ ಮತ್ತು ಇತರೆ ಜಾತಿಗಳಿಗೆ ಶೇ. 1ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದು ಆಕ್ಷೇಪಿಸಲಾಗಿದೆ.
ಸಂಪುಟ ಉಪ ಸಮಿತಿಯು ನ್ಯಾಯಮೂರ್ತಿ ಎ ಜೆ ಸದಾಶಿವ ವರದಿಯಲ್ಲಿನ ಅಂಶಗಳನ್ನು ಒಳಗೊಂಡಿದ್ದು, ಉಪ ಸಮಿತಿಯ ಶಿಫಾರಸ್ಸನ್ನು ಸಚಿವ ಸಂಪುಟ ಒಪ್ಪಿಕೊಂಡಿರುವುದರಿಂದ ನ್ಯಾ. ಎ ಜೆ ಸದಾಶಿವ ಅವರ ವರದಿಯು ಇನ್ನು ಪ್ರಸ್ತುತವಾಗಿರುವುದಿಲ್ಲ. ಹೀಗಾಗಿ, ನ್ಯಾ. ಸದಾಶಿವ ಆಯೋಗದ ವರದಿಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಆಕ್ಷೇಪಾರ್ಹ ಆದೇಶದಲ್ಲಿ ಹೇಳಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಯಾವುದೇ ತತ್ವ, ಆಧಾರ, ಹಿಂದುಳಿದಿರುವಿಕೆ ನಿರ್ಧಾರಕ್ಕೆ ಪೂರಕವಾದ ದತ್ತಾಂಶ ಸಂಗ್ರಹಿಸದೇ 101 ಪರಿಶಿಷ್ಟ ಜಾತಿಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಿರುವುದು ಅತಾರ್ಕಿಕ, ಅವೈಜ್ಞಾನಿಕ ಮತ್ತು ಸಂವಿಧಾನದ ನಿಬಂಧನೆಗಳಿಗೆ ವಿರುದ್ಧವಾಗಿದೆ. ರಾಜ್ಯ ಸರ್ಕಾರದ ಆದೇಶವು ಇ ವಿ ಚನ್ನಯ್ಯ ಮತ್ತು ಇತರರು ವರ್ಸಸ್ ಆಂಧ್ರಪ್ರದೇಶ ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ವಿರುದ್ಧವಾಗಿದೆ. ಹೀಗಾಗಿ, ರಾಜ್ಯ ಸರ್ಕಾರದ ಆಕ್ಷೇಪಾರ್ಹ ಆದೇಶವನ್ನು ವಜಾ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.