Supreme Court of India 
ಸುದ್ದಿಗಳು

ಮಸೂದೆ ತಡೆಯಲು ರಾಜ್ಯಪಾಲರಿಗೆ ಶಾಶ್ವತ ಅಧಿಕಾರ ನೀಡಿದರೆ ಚುನಾಯಿತ ಸರ್ಕಾರ ರಾಜ್ಯಪಾಲರ ಮರ್ಜಿಗೆ: ಸುಪ್ರೀಂ ಕೋರ್ಟ್

ರಾಷ್ಟ್ರಪತಿ ಮತ್ತು ರಾಜ್ಯಪಾಲರು ಮಸೂದೆಗಳ ಕುರಿತು ನಿರ್ಧರಿಸಲು ಗಡುವು ನಿಗದಿಪಡಿಸಿದ್ದ ತೀರ್ಪು ಪ್ರಶ್ನಿಸಿ ರಾಷ್ಟ್ರಪತಿಗಳು ಸಲಹೆ ಕೋರಿ ಸುಪ್ರೀಂ ಕೋರ್ಟ್‌ಗೆ ಶಿಫಾರಸ್ಸು ಮಾಡಿದ್ದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Bar & Bench

ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆಯನ್ನು ಶಾಶ್ವತವಾಗಿ ತಡೆಹಿಡಿಯುವ ಅಧಿಕಾರ ರಾಜ್ಯಪಾಲರಿಗೆ ದೊರೆತರೆ ಅದು ಚುನಾಯಿತ ರಾಜ್ಯ ಸರ್ಕಾರವನ್ನು ಚುನಾಯಿತರಾಗದೆ ಅಧಿಕಾರದಲ್ಲಿರುವ ರಾಜ್ಯಪಾಲರ ಮರ್ಜಿಗೆ ಈಡುಮಾಡುತ್ತದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.

ರಾಷ್ಟ್ರಪತಿ ಮತ್ತು ರಾಜ್ಯಪಾಲರು ಮಸೂದೆಗಳ ಕುರಿತು ನಿರ್ಧರಿಸಲು ಗಡುವು ನಿಗದಿಪಡಿಸಿ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ಹೊರಡಿಸಿದ್ದ ತೀರ್ಪು ಪ್ರಶ್ನಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸರ್ವೋಚ್ಚ ನ್ಯಾಯಾಲಯದ ಸಲಹೆ ಕೋರಿ ಸಂವಿಧಾನದ 143ನೇ ವಿಧಿಯ ಅಡಿಯಲ್ಲಿ ಮಾಡಿದ್ದ ಶಿಫಾರಸ್ಸಿನ ವೇಳೆ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ,  ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್ ನಾಥ್, ಪಿ ಎಸ್ ನರಸಿಂಹ ಹಾಗೂ ಅತುಲ್ ಎಸ್. ಚಂದೂರ್ಕರ್ ಅವರಿದ್ದ ಪೀಠ ಈ ವಿಚಾರ ತಿಳಿಸಿತು.

ಸಂವಿಧಾನದ 200ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರು ಮಸೂದೆಗೆ ಒಪ್ಪಿಗೆ ನೀಡದೆಯೇ ಮಸೂದೆ ಮರಳಿಸಲು ಅವಕಾಶವಿದೆ ಎಂದು ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ವಾದಿಸಿದರು. ಆಗ ಸಿಜೆಐ “ಮಸೂದೆಯನ್ನು ತಡೆಯಲು ರಾಜ್ಯಪಾಲರಿಗೆ ಪರಮಾಧಿಕಾರ ನೀಡಿದಂತಾಗುವುದಿಲ್ಲವೇ? ಬಹುಮತದಿಂದ ಆಯ್ಕೆಯಾದ ಸರ್ಕಾರ  ರಾಜ್ಯಪಾಲರ ಮರ್ಜಿಯಂತೆ ಇರಬೇಕಾಗುತ್ತದೆ" ಎಂದರು.

ಇದರಿಂದ  ಅನಿರ್ದಿಷ್ಟಾವಧಿಯವರೆಗೆ ಮಸೂದೆಗೆ ತಡೆಹಿಡಿಯಲು ರಾಜ್ಯಪಾಲರಿಗೆ ಸಾಕಷ್ಟು ಅಧಿಕಾರ ದೊರೆಯುತ್ತದೆ ಎಂದು ಕೂಡ ನ್ಯಾಯಾಲಯ ನುಡಿಯಿತು.  

ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ, (ರಾಜ್ಯಪಾಲರೂ ಸೇರಿದಂತೆ) ಪ್ರತಿಯೊಬ್ಬರೂ ಸಂವಿಧಾನದಿಂದಲೇ ಅಧಿಕಾರ ಪಡೆಯುತ್ತಾರೆ ಎಂದು ಹೇಳಿದರು.

ವಾದದ ಒಂದು ಹಂತದಲ್ಲಿ ನ್ಯಾ. ನರಸಿಂಹ ಅವರು ಕಾನೂನುಗಳನ್ನು ಮೂಲತಃ ಜಾರಿಗೆ ತಂದಾಗ ಒಂದು ಆದರ್ಶ ಸ್ಥಿತಿ ಇರುತ್ತದೆ. ಕಾನೂನಿನ ವ್ಯಾಖ್ಯಾನ ಎಂಬುದು ಒಂದು ಪ್ರಕ್ರಿಯೆಯಾಗಿದ್ದು ಇದು ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಸಂವಿಧಾನದ ವಿಧಿಗಳನ್ನು ರೂಪಿಸಿದಾಗ ಯಾವ ಸ್ಥಿತಿ ಇತ್ತೋ ಆ ಸ್ಥಿತಿಗೆ ಮತ್ತು ಅಂದಿನ ಆದರ್ಶಮಯ ಸನ್ನಿವೇಶಗಳಿಗೆ ಕಾನೂನಿನ ವ್ಯಾಖ್ಯಾನಗಳನ್ನು ಸ್ತಬ್ಧಗೊಳಿಸಲು ಸಾಧ್ಯವಾಗದು ಎಂದರು. ಪ್ರಕರಣದ ವಿಚಾರಣೆ ನಾಳೆಯೂ  (ಗುರುವಾರ) ಮುಂದುವರೆಯಲಿದೆ.

ತಮಿಳುನಾಡು ಸರ್ಕಾರ ಮತ್ತು ತಮಿಳುನಾಡು ರಾಜ್ಯಪಾಲರ ನಡುವಿನ  ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಜೆ ಬಿ  ಪಾರ್ದಿವಾಲಾ  ಮತ್ತು  ಆರ್ ಮಹಾದೇವನ್ ಅವರಿದ್ದ ಪೀಠ ಮಸೂದೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಸೂಕ್ತ ಸಮಯದೊಳಗೆ ಕಾರ್ಯ ನಿರ್ವಹಿಸಬೇಕು ಮತ್ತು ಅವರ ಸಾಂವಿಧಾನಿಕ ಮೌನ ಪ್ರಜಾಪ್ರಭುತ್ವ ಪ್ರಕ್ರಿಯೆ ಅಡ್ಡಿಪಡಿಸುವುದಕ್ಕೆ ಬಳಕೆಯಾಗಬಾರದು ಎಂದು ತೀರ್ಪು ನೀಡಿತ್ತು.

ತೀರ್ಪಿನ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಹದಿನಾಲ್ಕು ಪ್ರಶ್ನೆಗಳನ್ನು ಕೇಳಿ ಸುಪ್ರೀಂ ಕೋರ್ಟ್‌ ಪರಿಶೀಲನೆಗೆ ಉಲ್ಲೇಖಿಸಿ ಶಿಫಾರಸ್ಸು ಮಾಡಿದ್ದರು. ತೀರ್ಪು ಸಮ್ಮತಿಯ ಸಾಂವಿಧಾನಿಕ ಎಲ್ಲೆಯನ್ನು ದಾಟಿದೆಯೇ ಎಂಬುದು ಅವರ ಪ್ರಶ್ನೆಯಾಗಿತ್ತು. ಅಂತಹ ಗಡುವುಗಳನ್ನು ನ್ಯಾಯಾಂಗ  ವಿಧಿಸಬಹುದೇ ಮತ್ತು 142ನೇ ವಿಧಿ ಬಳಸಿ ಅವುಗಳನ್ನು ಉಳಿಸಿಕೊಳ್ಳಬಹುದೇ ಎಂಬ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್‌ಗೆ ದ್ರೌಪದಿ ಮುರ್ಮು ಕೇಳಿದ್ದರು.

ಆದರೆ ರಾಷ್ಟ್ರಪತಿಯವರು ಕಳುಹಿಸಿರುವ ಶಿಫಾರಸ್ಸು ನಿರ್ವಹಣಾರ್ಹವಲ್ಲ ಎಂದು ಕೇರಳ ಸರ್ಕಾರ ಅರ್ಜಿ ಸಲ್ಲಿಸಿತ್ತು. ತೀರ್ಪುಗಳನ್ನು ಬದಿಗೆ ಸರಿಸುವಂತೆ ಮಾಡಲು ಇದೊಂದು ಪರೋಕ್ಷ ಯತ್ನ ಎಂದಿದ್ದ ಅದು ಶಿಫಾರಸ್ಸಿಗೆ ಪ್ರತಿಕ್ರಿಯಿಸದೆ ಸುಪ್ರೀಂ ಕೋರ್ಟ್‌ ಅದನ್ನು ರಾಷ್ಟ್ರಪತಿಯವರಿಗೆ ಮರಳಿಸಬೇಕು ಎಂದು ಕೋರಿತ್ತು. ತಮಿಳುನಾಡು ಸರ್ಕಾರ ಕೂಡ ಇಂಥದ್ದೇ ಅರ್ಜಿ ಸಲ್ಲಿಸಿತ್ತು. ಇತ್ತ ಕೇಂದ್ರ ಸರ್ಕಾರ ರಾಷ್ಟ್ರಪತಿಗಳ ಶಿಫಾರಸ್ಸಿಗೆ ಬೆಂಬಲ ಸೂಚಿಸಿತ್ತು.