
ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಮಸೂದೆಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಅಧಿಕಾರ ಪ್ರಭುತ್ವದ ವಿಶೇಷಾಧಿಕಾರವಾಗಿದ್ದು ಅದಕ್ಕೆ ಕಾಲಮಿತಿ ವಿಧಿಸಿ ನ್ಯಾಯಾಂಗ ನಿರ್ಬಂಧಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಿದೆ.
ಸಂವಿಧಾನ 200, (ರಾಜ್ಯ ಶಾಸಕಾಂಗವು ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವ ಬಗ್ಗೆ ರಾಜ್ಯಪಾಲರ ಅಧಿಕಾರ) 201ನೇ (ರಾಜ್ಯಪಾಲರು ರಾಷ್ಟ್ರಪತಿಗಳ ಪರಿಗಣನೆಗೆ ಮಸೂದೆಯನ್ನು ಕಾಯ್ದಿರಿಸುವುದಕ್ಕೆ ಸಂಬಂಧಿಸಿದ ವಿಧಿ) ವಿಧಿಗಳಲ್ಲಿ ಕಾಲಮಿತಿ ಇಲ್ಲ. ನ್ಯಾಯಾಲಯ ಕಾಲಮಿತಿ ವಿಧಿಸಿದರೆ ಅದು ಸಂವಿಧಾನವನ್ನು ಹೊಸದಾಗಿ ಬರೆಯುವುದಕ್ಕೆ ಸಮ ಎಂದು ಕೇಂದ್ರ ಸರ್ಕಾರದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಮ್ಮ ಲಿಖಿತ ಟಿಪ್ಪಣಿಯಲ್ಲಿ ವಾದಿಸಿದ್ದಾರೆ.
ರಾಜ್ಯಪಾಲರು ಕೇವಲ ಒಂದು ರಾಜ್ಯದ ರಾಯಭಾರಿಗಳಷ್ಟೇ ಅಲ್ಲ ಬದಲಿಗೆ ದೇಶದ ಜನರ ಇಚ್ಛೆಯನ್ನು ಆಯಾ ರಾಜ್ಯಗಳಿಗೆ ಕೊಂಡೊಯ್ಯುವವರು ಎಂತಲೂ ಕೇಂದ್ರ ಸರ್ಕಾರ ತಿಳಿಸಿದೆ.
ಸಂವಿಧಾನದ 200ನೇ ವಿಧಿಯ ಅಡಿಯಲ್ಲಿ ರಾಜ್ಯ ಶಾಸಕಾಂಗ ಮಂಡಿಸಿದ ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಅಧಿಕಾರ ಮತ್ತು ಜವಾಬ್ದಾರಿಗಳನ್ನು ವಿವರಿಸುವ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಕಳೆದ ಏಪ್ರಿಲ್ 8ರಂದು ನೀಡಿತ್ತು. ಆ ಮೂಲಕ ಸಂವಿಧಾನದ 201ನೇ ವಿಧಿಯ ಅಡಿಯಲ್ಲಿ ಭಾರತದ ರಾಷ್ಟ್ರಪತಿಗಳ ಅಧಿಕಾರಗಳಿಗೆ ಇರುವ ಮಿತಿಯನ್ನೂ ಅದು ವ್ಯಾಖ್ಯಾನಿಸಿತ್ತು.
ಈ ತೀರ್ಪನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 143(1)ನೇ ವಿಧಿಯಡಿ ಅಧಿಕಾರ ಬಳಸಿ ಶಿಫಾರಸು ಮಾಡಿದ್ದರು. ತೀರ್ಪು ಸಮ್ಮತಿಯ ಸಾಂವಿಧಾನಿಕ ಎಲ್ಲೆಯನ್ನು ದಾಟಿದೆಯೇ ಎಂಬುದು ಅವರ ಪ್ರಶ್ನೆಯಾಗಿತ್ತು. ಅಂತಹ ಗಡುವುಗಳನ್ನು ನ್ಯಾಯಾಂಗ ವಿಧಿಸಬಹುದೇ ಮತ್ತು 142ನೇ ವಿಧಿ ಬಳಸಿ ಅವುಗಳನ್ನು ಉಳಿಸಿಕೊಳ್ಳಬಹುದೇ ಎಂಬ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್‌ಗೆ ಕೇಳಿದ್ದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ, ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಹಾಗೂ ನ್ಯಾಯಮೂರ್ತಿ ಅತುಲ್ ಎಸ್ ಚಂದೂರ್ಕರ್ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠ ನಾಳೆಯಿಂದ (ಆಗಸ್ಟ್ 19, ಮಂಗಳವಾರದಿಂದ) ಪ್ರಕರಣದ ವಿಚಾರಣೆ ಆರಂಭಿಸಲಿದೆ.
ಕೇಂದ್ರ ಸರ್ಕಾರ ಮಂಡಿಸಿರುವ ವಾದದ ಹತ್ತು ಪ್ರಮುಖ ಅಂಶಗಳು:
1. ನ್ಯಾಯಾಂಗ ಶ್ರೇಷ್ಠ ತೆಗಿಂತಲೂ ಮಿಗಿಲಾದುದು ಸಾಂವಿಧಾನಿಕ ಶ್ರೇಷ್ಠತೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹೀಗೆ ಮೂರೂ ಅಂಗಗಳು ಸಂವಿಧಾನದಿಂದ ಕಾನೂನುಬದ್ಧ ಮಾನ್ಯತೆ ಪಡೆದಿದ್ದು ಯಾವುದೂ ಒಂದಕ್ಕಿಂತ ಒಂದು ಶ್ರೇಷ್ಠವಲ್ಲ.
2. ರಾಜ್ಯಪಾಲರು ಹೊರಗಿನವರಲ್ಲ. ಅವರು ಕೇವಲ ಕೇಂದ್ರದ ಪ್ರತಿನಿಧಿಗಳಲ್ಲ, ಬದಲಿಗೆ ರಾಷ್ಟ್ರದ ಇಚ್ಛೆಯನ್ನು ರಾಜ್ಯಗಳ ಬಳಿಗೆ ಕೊಂಡೊಯ್ಯುವವರು.
3. ಮಸೂದೆಗಳಿಗೆ ರಾಜ್ಯಪಾಲರು, ರಾಷ್ಟ್ರಪತಿಗಳು ಸಮ್ಮತಿ ನೀಡುವ ವಿಚಾರ ಸ್ವತಂತ್ರವೂ ಮತ್ತು ನ್ಯಾಯಾಂಗ ವ್ಯಾಪ್ತಿಯಿಂದ ಹೊರಗಿದೆ. ಈ ಅಧಿಕಾರವು, ಕೇವಲ ಕಾರ್ಯಾಂಗದ್ದೇ ಅಗಲಿ, ಸಂಪೂರ್ಣ ಶಾಸಕಾಂಗದ್ದೇ ಆಗಲಿ ಅಲ್ಲ. ಹಾಗಾಗಿ, ಇದು ನ್ಯಾಯಾಂಗದ ಪರಿಶೀಲನೆಗೆ ಹೊರತಾದದ್ದು.
4. ಸಂವಿಧಾನದಲ್ಲಿ ಗಡುವು ಇಲ್ಲ. ನ್ಯಾಯಾಂಗ ಅದನ್ನು ಸೇರಿಸಲು ಆಗದು.
5. ಮಸೂದೆಗಳನ್ನು ರಾಷ್ಟ್ರಪತಿಗಳು ಆದಷ್ಟು ಬೇಗ ಮರಳಿಸಬೇಕು ಎಂದು ಪಂಜಾಬ್ ಹೈಕೋರ್ಟ್ ನೀಡಿದ್ದ ತೀರ್ಪು ದೋಷದಿಂದ ಕೂಡಿದೆ.
6. ಸಂವಿಧಾನದ 142ನೇ ವಿಧಿಗೆ ಮಿತಿಗಳಿದ್ದು “ಪೂರ್ಣ ಪ್ರಮಾಣದಲ್ಲಿ ನ್ಯಾಯ” ನೀಡಲು ನ್ಯಾಯಾಲಯಕ್ಕೆ ಇರುವ ಶಕ್ತಿಯನ್ನು ಮಾರ್ಪಡಿಸಲು ಅಥವಾ ಅದನ್ನು ಮೀರಲು ಬಳಸಲಾಗದು.
7. ರಾಜ್ಯಪಾಲರು ಕೆಲ ಸಂದರ್ಭಗಳಲ್ಲಿ ಸಚಿವ ಸಂಪುಟದ ಸಲಹೆ ಪಡೆಯದೆ ತಮ್ಮ ವಿವೇಚನಾಧಿಕಾರ ಬಳಸಬಹುದು.
8. ಸರ್ಕಾರಿಯಾ, ಪುಂಚಿ ಅಥವಾ ಬೇರೆ ಆಯೋಗಗಳ ಶಿಫಾರಸುಗಳು ಸಾಂವಿಧಾನಿಕ ಪಠ್ಯವನ್ನು ಬದಲಾಯಿಸುವಂತಿಲ್ಲ.
9. ಸಂವಿಧಾನದ 361ನೇ ವಿಧಿ ರಾಜ್ಯಪಾಲರಿಗೆ ವಿನಾಯಿತಿ ನೀಡುತ್ತದೆ.
10. ಮಸೂದೆ ಕಾಯಿದೆಯಾಗುವ ಮುನ್ನ ನ್ಯಾಯಾಂಗ ಪರಿಶೀಲನೆ ನಡೆಸುವಂತಿಲ್ಲ.