ಸುದ್ದಿಗಳು

ಪಿಎಂ ಕೇರ್ಸ್ ನಿಧಿ ಜಾಲತಾಣದಿಂದ ಮೋದಿ ಹೆಸರು, ಫೋಟೊ ಕೈಬಿಡಲು ಕೋರಿದ್ದ ಅರ್ಜಿ: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ನೋಟಿಸ್

ಪಿಎಂ ಕೇರ್ಸ್ ನಿಧಿಯ ಜಾಲತಾಣದಿಂದ ರಾಷ್ಟ್ರ ಚಿಹ್ನೆ ಮತ್ತು ರಾಷ್ಟ್ರ ಧ್ವಜದ ಚಿತ್ರವನ್ನು ಕೈಬಿಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

Bar & Bench

ಪಿಎಂ ಕೇರ್ಸ್ ನಿಧಿ ಟ್ರಸ್ಟ್‌ ಮತ್ತು ಟ್ರಸ್ಟ್‌ನ ಅಧಿಕೃತ ಜಾಲತಾಣದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಮತ್ತು ಭಾವಚಿತ್ರವನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾದ ಮನವಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಸೋಮವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಮನವಿ ಮುಖ್ಯವಾದ ವಿಷಯವನ್ನು ಪ್ರಸ್ತಾಪಿಸುತ್ತದೆ ಎಂದು ತಿಳಿಸಿ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ಎಂ ಎಸ್ ಕಾರ್ನಿಕ್ ಅವರಿದ್ದ ಪೀಠ ಕೇಂದ್ರಕ್ಕೆ ನೋಟಿಸ್‌ ನೀಡಿತು. ಪ್ರಕರಣದ ಕುರಿತು ಕೇಂದ್ರದ ಸೂಚನೆಗಳನ್ನು ಪಡೆಯಲು ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು 2 ವಾರಗಳ ಕಾಲಾವಕಾಶ ಕೋರಿದರು. ನ್ಯಾಯಾಲಯವು ಇದೊಂದು ಪ್ರಮುಖ ವಿಷಯವಾಗಿದ್ದು ಪ್ರತಿಕ್ರಿಯೆ ನೀಡುವ ಅಗತ್ಯವಿದೆ ಎಂದು ತಿಳಿಸಿತು.

ಕಾಂಗ್ರೆಸ್‌ ಸದಸ್ಯ ವಿಕ್ರಾಂತ್‌ ಚವ್ಹಾಣ್‌ ಎಂಬುವರು ಸಲ್ಲಿಸಿರುವ ಪಿಐಎಲ್‌ನಲ್ಲಿ ಪಿಎಂ ಕೇರ್ಸ್ ನಿಧಿ ಟ್ರಸ್ಟ್‌ನ ವೆಬ್‌ತಾಣದಿಂದ ಪ್ರಧಾನಿಯವರ ಹೆಸರು, ಭಾವಚಿತ್ರ ಮಾತ್ರವೇ ಅಲ್ಲದೆ, ರಾಷ್ಟ್ರ ಲಾಂಛನ, ರಾಷ್ಟ್ರಧ್ವಜದ ಚಿತ್ರಗಳನ್ನೂ ಸಹ ತೆಗೆದುಹಾಕುವಂತೆ ಕೋರಲಾಗಿತ್ತು. ಈ ಚಿಹ್ನೆಗಳನ್ನು ಬಳಸುವುದು ಸಂವಿಧಾನದ ನಿಬಂಧನೆಗಳ ಹಾಗೂ ರಾಷ್ಟ್ರ ಲಾಂಛನ ಮತ್ತು ಹೆಸರುಗಳ ಅಸಮರ್ಪಕ ಬಳಕೆಯ ನಿಯಂತ್ರಣ ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿತ್ತು.

ಪಿಎಂ ಕೇರ್ಸ್‌ ಕುರಿತಾಗಿ ಇದಾಗಲೇ ಎರಡು ಅರ್ಜಿಗಳು ದೆಹಲಿ ಹೈಕೋರ್ಟ್‌ ಮುಂದೆಯೂ ಇರುವುದನ್ನು ಇಲ್ಲಿ ನೆನೆಯಬಹುದು. ತುರ್ತು ಸಂದರ್ಭಗಳಲ್ಲಿ ನಾಗರಿಕರಿಗೆ ನೆರವು ಮತ್ತು ಪರಿಹಾರ ನೀಡುವ ಪ್ರಧಾನ ಮಂತ್ರಿಯವರ ನಿಧಿ'ಯನ್ನು (ಪಿಎಂ ಕೇರ್ಸ್‌) ಸಂವಿಧಾನದ 12ನೇ ವಿಧಿಯಡಿ ದೇಶದ ನಿಧಿ ಎಂದು ಘೋಷಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಕೆಯಾಗಿದೆ. ಪ್ರಕರಣದ ವಿಚಾರಣೆಯನ್ನು ಏಪ್ರಿಲ್‌ನಲ್ಲಿ ನ್ಯಾಯಾಲಯ ನಡೆಸಲಿದೆ. ಪಿಎಂ ಕೇರ್ಸ್‌ ಅನ್ನು ಮಾಹಿತಿ ಹಕ್ಕು ಕಾಯಿದೆ ಅಡಿ 'ಸಾರ್ವಜನಿಕ ಸಂಸ್ಥೆ' ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿರುವ, ವಿಚಾರಣೆಗೆ ಬಾಕಿ ಉಳಿದಿರುವ ಮನವಿಯೊಟ್ಟಿಗೆ ಈ ಅರ್ಜಿಯ ವಿಚಾರಣೆಯೂ ನಡೆಯಲಿದೆ. ಎರಡೂ ಮನವಿಗಳನ್ನು ಸಮ್ಯಕ್‌ ಗಂಗ್ವಾಲ್‌ ಎಂಬವರು ಸಲ್ಲಿಸಿದ್ದಾರೆ